More

    ಏಪ್ರಿಲ್​ನಲ್ಲಿ ಪಕ್ಷದ ಹೆಸರು ಘೋಷಿಸಲಿರುವ ರಜಿನಿಕಾಂತ್​: ಬಿಜೆಪಿ ಜತೆ ಕೈ ಜೋಡಿಸಲಿದ್ದಾರಾ ತಲೈವಾ?

    ಚೆನ್ನೈ: ಸೂಪರ್​ಸ್ಟಾರ್​ ರಜಿನಿಕಾಂತ್ ಅವರು ರಾಜಕೀಯ ಪ್ರವೇಶವನ್ನು ಘೋಷಿಸಿ 2 ವರ್ಷದ ಮೇಲೆಯೇ ಆಗಿದೆ. ಆದರೆ, ಈವರೆಗೂ ತಮ್ಮ ಪಕ್ಷ ಯಾವುದೆಂದು ತಿಳಿಸಿಲ್ಲ. ಇದೀಗ ರಜಿನಿ ಆಪ್ತ ಮೂಲಗಳ ಪ್ರಕಾರ ಮುಂದಿನ ಏಪ್ರಿಲ್​ನಲ್ಲಿ ಪಕ್ಷದ ಹೆಸರನ್ನು ತಲೈವಾ ಘೋಷಿಸಲಿದ್ದಾರೆ ಎಂದು ತಿಳಿದುಬಂದಿದೆ. ​

    ರಜಿನಿ ಮಕ್ಕಳ್​ ಮಂದ್ರಮ್​ ಸಂಘಟನೆಯನ್ನು 2017ರ ಡಿಸೆಂಬರ್​ 31ರಂದು ಉದ್ಘಾಟಿಸಿ ರಾಜಕೀಯಕ್ಕೆ ರಜಿನಿ ಪ್ರವೇಶ ನೀಡಿದ್ದಾರೆ. ಆದರೆ ಇದುವರೆಗೂ ಪಕ್ಷದ ಹೆಸರು ಮಾತ್ರ ಘೋಷಣೆ ಮಾಡಿಲ್ಲ. ಈ ಬಗ್ಗೆ ಸಾಕಷ್ಟು ಕುತೂಹಲ ಹೊಂದಿದ್ದ ರಜಿನಿ ಅಭಿಮಾನಿಗಳಿಗೆ ಇದೀಗ ಖಷಿಯ ವಿಚಾರವೊಂದ ಬಂದಿದ್ದು, ಏಪ್ರಿಲ್​ 14ರ ನಂತರ ಯಾವುದೇ ಸಮಯದಲ್ಲೂ ಪಕ್ಷದ ಹೆಸರು ಬಹಿರಂಗವಾಗಬಹುದು ಎಂದು ರಜಿನಿ ಮಕ್ಕಳ್​ ಮಂದ್ರಮ್​ ಸಂಘಟನೆಯ ಪ್ರಮುಖ ಪದಾಧಿಕಾರಿಗಳು ಹೇಳಿದ್ದಾರೆ.

    ಚೆನ್ನೈ ಮೂಲದ ಆರ್​ಆರ್​ಎಸ್​ ನಾಯಕ ಎಸ್​ ಗುರುಮೂರ್ತಿಯ ಪ್ರಭಾವದಿಂದಾಗಿ ರಜಿನಿಕಾಂತ್​ ಅವರು ಬಿಜೆಪಿ ಕಡೆ ಒಲವು ಹೊಂದಿದ್ದಾರೆ ಎಂದು ಅನೇಕರು ನಂಬಿದ್ದಾರೆ. ರಜಿನಿ ಅವರ ದಿನನಿತ್ಯದ ರಾಜಕೀಯ ವ್ಯವಹಾರಗಳಲ್ಲಿ ತಮಿಳರುವಿ ಮಣಿಯನ್​ ರಾಜಕೀಯ ತಂತ್ರಗಾರನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂದು ನಂಬಲಾಗಿದೆ.

    ಹೆಸರು ಹೇಳಲು ಇಚ್ಛಿಸದ ಕೆಲವು ಪಕ್ಷಗಳೊಂದಿಗೆ ಮಾತುಕತೆ ನಡೆಸಿರುವ ಮಣಿಯನ್​, ತಮಿಳುನಾಡಿನಲ್ಲಿ ಎಐಎಡಿಎಂಕೆ ಮತ್ತು ಎನ್​ಡಿಎ ಮೈತ್ರಿಕೂಟವಾಗಿರುವ ಪಿಎಂಕೆ(ಪಟಾಲಿ ಮಕ್ಕಳ್​ ಕಟ್ಚಿ) ರಜಿನಿಕಾಂತ್​ ಜತೆಗಿರಲಿದೆ. ಅಲ್ಲದೆ, ಇನ್ನು ಹೆಚ್ಚಿನ ಪಕ್ಷಗಳು ಮೈತ್ರಿ ಮಾಡಿಕೊಳ್ಳಲು ಕಾದಿವೆ. 2014ರ ಲೋಕಸಭಾ ಚುನಾವಣೆಯಲ್ಲಿ ಎನ್​ಡಿಎ ಜತೆ ಮೈತ್ರಿ ಮಾಡಿಕೊಂಡಿ ಪಿಎಂಕೆ, ವಿಜಯಕಾಂತ್​ ಅವರ ಡಿಎಂಡಿಕೆ ಮತ್ತು ವೈಕೋ ಅವರ ಎಂಡಿಎಂಕೆ ಶೇ.19ರಷ್ಟು ಮತ ಹಂಚಿಕೆಯನ್ನು ಪಡೆದುಕೊಂಡಿತ್ತು. ಈ ರೀತಿಯ ಮೈತ್ರಿ ನಮ್ಮದಾಗಿರಲಿದೆ ಎಂದು ಹೇಳಿದ್ದಾರೆ.

    ಬಿಜೆಪಿ ಜತೆ ರಜಿನಿಕಾಂತ್​ ಮೈತ್ರಿ ಮಾಡಿಕೊಳ್ಳಲಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಲು ಇಚ್ಛಿಸದ ಮಣಿಯನ್​, ಬಿಜೆಪಿ ಜತೆಗಿನ ಮೈತ್ರಿಯನ್ನು ರಜಿನಿ ಅವರೇ ನಿರ್ಧರಿಸಲಿದ್ದಾರೆ. ಆದರೆ, ಟಿಟಿವಿ ದಿನಕರನ್​ ಅವರೊಂದಿಗಿನ ಮೈತ್ರಿಯನ್ನು ಕಡಿದುಕೊಂಡರೆ ಋಣಾತ್ಮಕ ಪ್ರಭಾವ ಬೀರಬಹುದೆಂಬ ಭೀತಿ ರಜಿನಿ ಅವರನ್ನು ಕಾಡುತ್ತಿದೆ ಎಂದು ಮಣಿಯನ್​ ಹೇಳಿದ್ದಾರೆ.

    ರಜಿನಿ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳಲಿ, ಇರದಿರಲಿ ಆದರೆ, ಡಿಎಂಕೆ ಸೋಲಿಸಬೇಕೆಂಬ ಅವರ ಗುರಿಗೆ ಬಿಜೆಪಿ ಸಹಾಯ ಮಾಡಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಅನೇಕ ರಾಜಕೀಯ ಚಟುವಟಿಕೆಗಳಲ್ಲಿ ರಜಿನಿ ತೊಡಗಿಸಿಕೊಂಡಿದ್ದು, ಏಪ್ರಿಲ್​ನಲ್ಲಿ ಬಹುತೇಕ ಪಕ್ಷದ ಹೆಸರನ್ನು ಬಹಿರಂಗಪಡಿಸಲಿದ್ದರಾ ಎಂಬ ಕುತೂಹಲ ಮನೆ ಮಾಡಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts