More

    2 ಚಿತ್ರಗಳ ಸ್ಥಗಿತಗೊಳಿಸಿತು ಅಕಾಡೆಮಿ ಅಧ್ಯಕ್ಷಗಿರಿ.. ತಂದೆಗೇ ಮಗ ಹೇಳಬೇಕಿದ್ದ ಆಕ್ಷನ್​ಗೇ ಕಟ್..!

    ಬೆಂಗಳೂರು :‘ಹಾಗೆ ಮಾಡು ಹೀಗೆ ಮಾಡು …’ ಎಂದು ತಂದೆ ಮಗನಿಗೆ ಹೇಳುವುದು ಸರ್ವೆಸಾಮಾನ್ಯ. ಆದರೆ, ‘ಹಾಗೆ ಮಾಡಿ ಹೀಗೆ ಮಾಡಿ..’ ಅಂತ ಮಗನೇ ತಂದೆಗೆ ಹೇಳುವುದು ಅತ್ಯಪರೂಪ. ಅಂಥದ್ದೊಂದು ಅಪರೂಪದ ಅವಕಾಶವೊಂದು ತಪ್ಪಿಹೋಗಿದ್ದು, ಈಗಾಗಲೇ ಸೆಟ್ಟೇರಬೇಕಿದ್ದ ಚಿತ್ರವೊಂದು ಮುಂದೂಡಲ್ಪಟ್ಟಿದೆ.

    ಅಂದಹಾಗೆ, ಆ ತಂದೆ-ಮಗ ಬೇರಾರೂ ಅಲ್ಲ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್ ಹಾಗೂ ಅವರ ಪುತ್ರ ಸಾಗರ್ ಪುರಾಣಿಕ್. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಸಾಗರ್ ಪುರಾಣಿಕ್ ನಿರ್ದೇಶನದಲ್ಲಿ ಸುನಿಲ್ ಪುರಾಣಿಕ್ ನಾಯಕನಾಗಿ ನಟಿಸಿರುವ ಸಿನಿಮಾದ ಚಿತ್ರೀಕರಣ ಅದಾಗಲೇ ಆರಂಭವಾಗಿರಬೇಕಿತ್ತು. ಆದರೆ, ಅವರು ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ್ದರಿಂದ ಆ ಸಿನಿಮಾ ಸದ್ಯಕ್ಕೆ ನಿಂತುಹೋಗಿದೆ.

    ‘ದುಡ್ಡೇ ಮುಖ್ಯವಲ್ಲ ಎಂಬ ಸಂದೇಶವಿರುವ, ಮನುಷ್ಯನಲ್ಲಿ ಆಗುವ ಬದಲಾವಣೆ ಆಧರಿಸಿ ಸಿನಿಮಾ ಮಾಡಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಚಿತ್ರಕಥೆ, ಚಿತ್ರೀಕರಣ ಯೋಜನೆ ಎಲ್ಲವನ್ನೂ ಮುಗಿಸಿ ಇನ್ನೇನು ಶೂಟಿಂಗ್​ಗೆ ಮುಂದಾಗಬೇಕು ಎನ್ನುವಷ್ಟರಲ್ಲಿ ತಂದೆ ಅಕಾಡೆಮಿ ಅಧ್ಯಕ್ಷರಾದರು. ಈ ಚಿತ್ರದ ಕಥೆ ತುಂಬ ವಿಭಿನ್ನವಾದ್ದರಿಂದ ವಿವಿಧ ಫೆಸ್ಟಿವಲ್​ಗಳಲ್ಲಿ ಪ್ರದರ್ಶನವಾಗುವ ಅರ್ಹತೆ ಹೊಂದಿದೆ.

    ಅಪ್ಪ ಒಂದು ಜವಾಬ್ದಾರಿ ಸ್ಥಾನದಲ್ಲಿರುವಾಗ, ಚಿತ್ರೋತ್ಸವದಲ್ಲಿ ಈ ಸಿನಿಮಾ ಪ್ರದರ್ಶನಗೊಂಡರೆ ಅಪವಾದ ಕೇಳಬೇಕಾಗುತ್ತದೆ. ಅಲ್ಲದೆ ಈ ಚಿತ್ರದಲ್ಲಿನ ಪಾತ್ರಕ್ಕಾಗಿ ತಂದೆ ತೂಕ ಕಳೆದುಕೊಳ್ಳಬೇಕಾದ್ದರಿಂದ ಸಾಕಷ್ಟು ಸಮಯ ಬೇಕಾಗುತ್ತದೆ. ಅಧ್ಯಕ್ಷರಾಗಿರುವಾಗ ಅಷ್ಟೆಲ್ಲ ಸಮಯ ಹೊಂದಿಸಿಕೊಳ್ಳುವುದೂ ಕಷ್ಟ. ಹೀಗಾಗಿ ಆ ಪ್ರಾಜೆಕ್ಟ್ ಕೈಬಿಟ್ಟಿದ್ದು, ಅವರ ಅಧಿಕಾರಾವಧಿ ಮುಗಿದ ಬಳಿಕ ಮತ್ತೆ ಕೈಗೆತ್ತಿಕೊಳ್ಳುತ್ತೇವೆ’ ಎನ್ನುತ್ತಾರೆ ಸಾಗರ್ ಪುರಾಣಿಕ್.

    ಇದಲ್ಲದೆ, ದ.ರಾ.ಬೇಂದ್ರೆ ಅವರ ಜೀವನಾಧಾರಿತ ಸಿನಿಮಾ ನಿರ್ದೇಶನ ಮಾಡಲು ಕೂಡ ಸಿದ್ಧತೆ ಮಾಡಿಕೊಂಡಿದ್ದ ಸುನಿಲ್ ಪುರಾಣಿಕ್, ಅಧ್ಯಕ್ಷರಾದ ಕಾರಣ ಅದನ್ನೂ ಸದ್ಯಕ್ಕೆ ಕೈಬಿಟ್ಟಿದ್ದಾರೆ. ಈ ಮಧ್ಯೆ, ಸಾಗರ್ ಪುರಾಣಿಕ್ ತಮ್ಮದೇ ನಿರ್ಮಾಣ ಹಾಗೂ ನಿರ್ದೇಶನದ ಚಿತ್ರಕ್ಕೆ ತಯಾರಿ ನಡೆಸಿದ್ದಾರೆ. ಚಿತ್ರಕಥೆ ಸಿದ್ಧತೆಯಲ್ಲಿರುವ ಅವರು ತಾವೇ ನಾಯಕರಾಗಿ ಅಭಿನಯಿಸುವ ಗುರಿ ಇರಿಸಿಕೊಂಡಿದ್ದಾರೆ. ಸದ್ಯದ ಯೋಜನೆ ಪ್ರಕಾರವೇ ಎಲ್ಲವೂ ನಡೆದರೆ ಇದು ಸಾಗರ್ ಪುರಾಣಿಕ್ ಅವರ ನಿರ್ದೇಶನ ಹಾಗೂ ನಾಯಕತ್ವದ ಪ್ರಪ್ರಥಮ ಸಿನಿಮಾ ಆಗಲಿದೆ.

    ಭ್ರಷ್ಟಾಚಾರದ ವಿರುದ್ಧ ಉಪೇಂದ್ರ ಹೋರಾಟ: ಉಪ್ಪಿಗೆ ಹರಿಪ್ರಿಯಾ ಸಾಥ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts