More

    ಐಪಿಎಲ್ ಕಾಮೆಂಟರಿ ವಿವಾದಕ್ಕೆ ಅನುಷ್ಕಾ ಗರಂ, ಗಾವಸ್ಕರ್ ಪುತ್ರನಿಂದ ಟಾಂಗ್

    ಬೆಂಗಳೂರು: ಐಪಿಎಲ್ 13ನೇ ಆವೃತ್ತಿಯಲ್ಲಿ ಡೆಲ್ಲಿ-ಪಂಜಾಬ್ ನಡುವಿನ ಪಂದ್ಯದಲ್ಲಿ ‘ಶಾರ್ಟ್ ರನ್’ ವಿವಾದ ಎದ್ದಿತ್ತು. ಇದೀಗ ಆರ್‌ಸಿಬಿ ವಿರುದ್ಧ ಪಂಜಾಬ್ ತಂಡ ಆಡಿದ 2ನೇ ಪಂದ್ಯದಲ್ಲೂ ದೊಡ್ಡ ವಿವಾದ ಎದ್ದಿದೆ. ಅದುವೇ, ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮ ದಂಪತಿಯ ಬಗ್ಗೆ ದಿಗ್ಗಜ ಸುನೀಲ್ ಗಾವಸ್ಕರ್ ವೀಕ್ಷಕವಿವರಣೆಯ ವೇಳೆ ಆಡಿದ ಮಾತುಗಳು. ಇದರ ಬೆನ್ನಲ್ಲೇ ಅನುಷ್ಕಾ ಶರ್ಮ ಅವರು ಸುನೀಲ್ ಗಾವಸ್ಕರ್ ಅವರಿಗೆ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಕೆಲ ಪ್ರಶ್ನೆಗಳನ್ನು ಕೇಳಿದ್ದರು. ಇದಕ್ಕೆ ಪ್ರತಿಯಾಗಿ ಗಾವಸ್ಕರ್‌ರ ಪುತ್ರ ರೋಹನ್ ಗಾವಸ್ಕರ್, ಅನುಷ್ಕಾಗೆ ಟಾಂಗ್ ನೀಡಿದ್ದರೆ, ಸುನೀಲ್ ಗಾವಸ್ಕರ್ ಅವರು ತಾನೇನು ತಪ್ಪಾದ ಮಾತನ್ನು ಹೇಳಿಲ್ಲ ಎಂದು ತಮ್ಮ ಕಾಮೆಂಟರಿಯನ್ನು ಸಮರ್ಥಿಸಿಕೊಂಡಿದ್ದಾರೆ.

    ಪಂಜಾಬ್ ವಿರುದ್ಧ ಪಂದ್ಯದಲ್ಲಿ ಕೇವಲ 1 ರನ್ ಗಳಿಸಿ ಔಟಾದ ಕೊಹ್ಲಿ, ಅಲ್ಪಾವಧಿಗೆ ಕ್ರೀಸ್‌ನಲ್ಲಿದ್ದ ವೇಳೆ ಗಾವಸ್ಕರ್ ಅವರು, ‘ಲಾಕ್‌ಡೌನ್ ವೇಳೆ ಕೊಹ್ಲಿ ಕೇವಲ ಅನುಷ್ಕಾ ಶರ್ಮ ಬೌಲಿಂಗ್ ಎದುರು ಮಾತ್ರ ಅಭ್ಯಾಸ ಮಾಡಿದ್ದಾರೆ’ ಎಂದು ವೀಕ್ಷಕವಿವರಣೆಯಲ್ಲಿ ತಮಾಷೆಯಾಗಿ ಹೇಳಿದ್ದರು. ಇದು ಕೊಹ್ಲಿ ಅಭಿಮಾನಿಗಳನ್ನು ಕೆರಳಿಸಿದ್ದು, ಗಾವಸ್ಕರ್‌ರನ್ನು ಐಪಿಎಲ್ ಕಾಮೆಂಟರಿ ಟೀಮ್‌ನಿಂದ ಕೈಬಿಡಬೇಕೆಂದು ಆರ್‌ಸಿಬಿ ಅಭಿಮಾನಿಗಳು ಬಿಸಿಸಿಐಗೆ ಮನವಿಯನ್ನೂ ಸಲ್ಲಿಸಿದ್ದಾರೆ.

    ಲಾಕ್‌ಡೌನ್ ವೇಳೆ ಕೊಹ್ಲಿ ತಮ್ಮ ಮನೆಯ ಆವರಣದಲ್ಲಿ ಅನುಷ್ಕಾ ಶರ್ಮ ಎಸೆತದ ಎದುರು ಬ್ಯಾಟಿಂಗ್ ಮಾಡಿದ ವಿಡಿಯೋವೊಂದು ವೈರಲ್ ಆಗಿತ್ತು. ಇದನ್ನೇ ಉಲ್ಲೇಖಿಸಿ ಗಾವಸ್ಕರ್ ಕಾಮೆಂಟರಿ ನೀಡಿದಂತಿತ್ತು. ಆದರೆ ಗಾವಸ್ಕರ್ ದ್ವಂದ್ವಾರ್ಥದಲ್ಲಿ ಈ ಹೇಳಿಕೆ ನೀಡಿದ್ದಾರೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕೊಹ್ಲಿ ಮತ್ತು ಅನುಷ್ಕಾ ಶರ್ಮ ಬಗ್ಗೆ ವೈಯಕ್ತಿಕವಾಗಿ ಟೀಕೆ ಮಾಡಿದ್ದಾರೆ ಎಂದೂ ಗಾವಸ್ಕರ್ ವಿರುದ್ಧ ಕಿಡಿ ಕಾರಿದ್ದಾರೆ.

    ಇದನ್ನೂ ಓದಿ: ದಿಂಡಾ ಅಕಾಡೆಮಿಗೆ ಹೊಸ ಸೇರ್ಪಡೆ! ಕಮ್ಮಿನ್ಸ್ ಬಳಿಕ ಸ್ಟೈನ್ ಕೂಡ ಟ್ರೋಲ್

    ಗಾವಸ್ಕರ್ ವಿರುದ್ಧ ಅನುಷ್ಕಾ ಕಿಡಿ
    ಸುನೀಲ್ ಗಾವಸ್ಕರ್ ತಮ್ಮ ವಿರುದ್ಧ ‘ಅಗೌರವ’ದ ಮಾತನ್ನಾಡಿದ್ದಾರೆ ಎಂದು ಕಿಡಿ ಕಾರಿರುವ ಅನುಷ್ಕಾ ಶರ್ಮ, ಗಂಡನ ಆಟದ ವಿಷಯದಲ್ಲಿ ನನ್ನ ಹೆಸರನ್ನು ತಂದ ಬಗ್ಗೆ ವಿವರಣೆ ನೀಡಬೇಕೆಂದೂ ಕೇಳಿಕೊಂಡಿದ್ದಾರೆ. ‘ಕಾಮೆಂಟರಿ ವೇಳೆ ಕ್ರಿಕೆಟಿಗರ ವೈಯಕ್ತಿಕ ಬದುಕನ್ನು ನೀವು ಗೌರವಿಸುತ್ತ ಬಂದಿದ್ದೀರಿ. ಆದರೆ ನನಗೆ ಮತ್ತು ನಮಗೆ ಯಾಕೆ ನೀವು ಅಂಥದ್ದೇ ಸಮಾನ ಗೌರವವನ್ನು ಯಾಕೆ ನೀಡಿಲ್ಲ? ಕಳೆದ ರಾತ್ರಿ ನನ್ನ ಗಂಡನ ಆಟದ ಬಗ್ಗೆ ವೀಕ್ಷಕವಿವರಣೆ ನೀಡುವ ವೇಳೆ ನಿಮ್ಮ ತಲೆಯಲ್ಲಿ ಹಲವು ಶಬ್ದ ಮತ್ತು ವಾಕ್ಯಗಳು ಬಂದಿರಬಹುದು. ಅಥವಾ ನನ್ನ ಹೆಸರನ್ನು ಉಲ್ಲೇಖಿಸಿದರೆ ಮಾತ್ರವೇ ನಿಮ್ಮ ಪದಗಳು ಪ್ರಸ್ತುತವೆನಿಸುತ್ತಿದ್ದವೇ?’ ಎಂದು ಅನುಷ್ಕಾ ಪ್ರಶ್ನಿಸಿದ್ದಾರೆ.

    ಗಾವಸ್ಕರ್ ಜಂಟ್ಲ್‌ಮನ್ ಆಟ ಕ್ರಿಕೆಟ್‌ನ ದಿಗ್ಗಜರು. ಆ ಬಗ್ಗೆ ನನಗೆ ಗೌರವವಿದೆ ಎಂದೂ ಅನುಷ್ಕಾ ಹೇಳಿದ್ದಾರೆ. ಜತೆಗೆ ಕೊಹ್ಲಿ ಆಟದ ವಿಚಾರದಲ್ಲಿ ತಮ್ಮ ಹೆಸರನ್ನು ಆಗಾಗ ಎಳೆದು ತರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅನುಷ್ಕಾ, ‘2020 ಬಂದರೂ, ನನ್ನ ಮಟ್ಟಿಗೆ ಏನೂ ಬದಲಾಗಿಲ್ಲ. ಕ್ರಿಕೆಟ್ ವಿಷಯದಲ್ಲಿ ನನ್ನ ಹೆಸರು ಎಳೆದು ತರುವುದನ್ನು ಯಾವಾಗ ನಿಲ್ಲಿಸುತ್ತೀರಿ? ಇನ್ನಾದರೂ ಇಂಥ ಸಾರಾಸಗಟಾದ ಹೇಳಿಕೆಗಳನ್ನು ನಿಲ್ಲಿಸಿ’ ಎಂದು ಹೇಳಿದ್ದಾರೆ.

    ಅನುಷ್ಕಾಳನ್ನು ದೂರಿಲ್ಲ ಎಂದ ಗಾವಸ್ಕರ್
    ‘ನಾನಂತೂ ಲಿಂಗಭೇದ ಮಾಡುವುದಿಲ್ಲ. ಯಾರಾದರೂ ನನ್ನ ಮಾತನ್ನು ಹಾಗೆ ಅರ್ಥಮಾಡಿಕೊಂಡರೆ ನಾನೇನು ಮಾಡಲಿ? ನಾನಂತೂ ಅನುಷ್ಕಾಳನ್ನು ದೂರಿಲ್ಲ. ವಿರಾಟ್-ಅನುಷ್ಕಾ ಬೇಕಿದ್ದರೆ ನನ್ನ ಮಾತಿನ ಕ್ಲಿಪ್ ಅನ್ನು ಮತ್ತೊಮ್ಮೆ ನೋಡಲಿ’ ಎಂದು ಸುನೀಲ್ ಗಾವಸ್ಕರ್ ಅವರು ಅನುಷ್ಕಾ ಮಾತಿಗೆ ಉತ್ತರ ನೀಡಿದ್ದಾರೆ.

    ರೋಹನ್ ಗಾವಸ್ಕರ್ ಟಾಂಗ್
    ಅನುಷ್ಕಾ ಶರ್ಮ ಇನ್‌ಸ್ಟಾಗ್ರಾಂನಲ್ಲಿ ಸುನೀಲ್ ಗಾವಸ್ಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಅವರ ಪುತ್ರ ರೋಹನ್ ಗಾವಸ್ಕರ್ ಟ್ವಿಟರ್‌ನಲ್ಲಿ ಟಾಂಗ್ ನೀಡಿದ್ದಾರೆ. ತಮ್ಮ ತಂದೆಯ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂಬುದಾಗಿ ಮಾಜಿ ಕ್ರಿಕೆಟಿಗರೂ ಆಗಿರುವ ರೋಹನ್ ಗಾವಸ್ಕರ್ ಟಾಂಗ್ ನೀಡಿದ್ದಾರೆ. ‘ಐ ಲವ್ ಚಲೊಕೇಟ್’ ಎಂದು ಬರೆದು ಅದರ ಕೆಳಗೆ, ‘ಇದನ್ನು ಮತ್ತೊಮ್ಮೆ ಓದಿ. ನೀವು ಪರೀಕ್ಷೆಯಲ್ಲಿ ಇದೇ ರೀತಿ ಅನುತ್ತೀರ್ಣರಾಗುತ್ತೀರಿ’ ಎಂದು ಟ್ವೀಟಿಸಿದ್ದಾರೆ. ಈ ಮೂಲಕ ತಕ್ಷಣಕ್ಕೆ ಅದನ್ನು ‘ಐ ಲವ್ ಚಾಕೊಲೇಟ್’ ಎಂದು ಜನರು ಓದುತ್ತಾರೆ. ಈ ಮೂಲಕ ಎಡವುತ್ತಾರೆ ಎಂದು ತಂದೆಯನ್ನು ಸಮರ್ಥಿಸಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts