More

    ಸಂಪುಟ ರಚನೆಯತ್ತ ಸುನಕ್ ಚಿತ್ತ…

    ಲಂಡನ್: ಪೂರ್ವಾಧಿಕಾರಿ ಲಿಜ್ ಟ್ರಸ್ ಮಾಡಿರುವ ಕೆಲವು ತಪು್ಪಗಳನ್ನು ಸರಿಪಡಿಸಲು ತಮ್ಮನ್ನು ಪ್ರಧಾನಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಮಂಗಳವಾರ ಚೊಚ್ಚಲ ಭಾಷಣದಲ್ಲಿ ಹೇಳಿದ ಬ್ರಿಟನ್​ನ ನೂತನ ಪ್ರಧಾನಿ ರಿಷಿ ಸುನಕ್, ಟ್ರಸ್ ಸಂಪುಟದ ಹಲವು ಸಚಿವರಿಗೆ ರಾಜೀನಾಮೆ ನೀಡಲು ಸೂಚಿಸಿದ್ದಾರೆ. ಪ್ರಧಾನಮಂತ್ರಿಯ ಅಧಿಕೃತ ನಿವಾಸ 10, ಡೌನಿಂಗ್ ಸ್ಟ್ರೀಟ್​ನ ಪಡಸಾಲೆಯಲ್ಲಿ ಮಾತನಾಡಿದ ಅವರು, ಆರ್ಥಿಕ ಸ್ಥಿರತೆ ಮತ್ತು ವಿಶ್ವಾಸ ತಮ್ಮ ಸರ್ಕಾರದ ಆದ್ಯತೆಯಾಗಿರುತ್ತವೆ. ದೇಶದ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಅನುಕಂಪದೊಂದಿಗೆ ಎದುರಿಸುವುದಾಗಿ ಹೇಳಿದರು. ಸಮಗ್ರತೆ, ವೃತ್ತಿಪರತೆ ಮತ್ತು ಹೊಣೆಗಾರಿಕೆಯ ಸರ್ಕಾರವನ್ನು ಮುನ್ನಡೆಸುವುದಾಗಿ ಸುನಕ್ ಭರವಸೆ ನೀಡಿದರು. ಹಣಕಾಸು ಚಾನ್ಸಲರ್ (ಮಂತ್ರಿ) ಆಗಿದ್ದಾಗ ಜನರ ಒಳಿತಿಗಾಗಿ ಗರಿಷ್ಠ ಪ್ರಯತ್ನಗಳನ್ನು ಮಾಡಿದ್ದಾಗಿ ಹೇಳಿದ ಅವರು, ಈಗ ನಾವು ಎದುರಿಸುತ್ತಿರುವ ಸವಾಲುಗಳಿಗೂ ಅದೇ ರೀತಿಯ ಧೋರಣೆಯನ್ನು ಅನುಸರಿಸಲಾಗುವುದು ಎಂದರು. ನಾವು ಸಾಲವನ್ನು ತೀರಿಸಲಾಗದಷ್ಟು ದುರ್ಬಲರು ಎಂದು ಮಾತನಾಡಲು ಅವಕಾಶವಾಗದಂತೆ ಮತ್ತು ಮುಂದಿನ ತಲೆಮಾರಿಗೆ ಸಾಲವನ್ನು ಬಿಡುವುದಿಲ್ಲ ಎಂದೂ ಹೇಳಿದರು.

    ಮೊದಲ ಅಧಿವೇಶನ: ಸೋಮವಾರ ಸಂಸತ್ತಿನಲ್ಲಿ ನಡೆಯುವ ಪ್ರಥಮ ‘ಪ್ರಧಾನ ಮಂತ್ರಿಯವರ ಪ್ರಶ್ನೆಗಳು’ ಅಧಿವೇಶನವನ್ನು ಎದುರಿಸುವ ಮುನ್ನ ಸಂಪುಟ ರಚಿಸುವುದು ಸುನಕ್​ರ ಮುಂದಿರುವ ಹೊಣೆಯಾಗಿದೆ. ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್​ರಿಗೆ ಸುನಕ್ ಸಂಪುಟದಲ್ಲಿ ಸ್ಥಾನ ದೊರಕುವ ಸಾಧ್ಯತೆ ಕಡಿಮೆಯಿದೆ. ವಿತ್ತ ಮಂತ್ರಿ ಆಗಿ ಸುನಕ್ ರಾಜೀನಾಮೆ ನೀಡಿದ್ದು ಜಾನ್ಸನ್ ಪ್ರಧಾನಿ ಪಟ್ಟದಿಂದ ಕೆಳಗಿಳಿಯಲು ಭಾಗಶಃ ಕಾರಣವಾಗಿತ್ತು. ಹೀಗಾಗಿ ಅವರಿಗೆ ಸಚಿವ ಸ್ಥಾನ ಸಿಗುವುದು ಕಷ್ಟ.

    ನಾನು ಮಾತಿನ ಬದಲು ಕೆಲಸದ ಮೂಲಕ ದೇಶವನ್ನು ಒಗ್ಗೂಡಿಸುತ್ತೇನೆ. ನಿಮ್ಮ ಸೇವೆಗಾಗಿ ಹಗಲಿರುಳೂ ಕೆಲಸ ಮಾಡುತ್ತೇನೆ

    | ರಿಷಿ ಸುನಕ್ ಬ್ರಿಟನ್ ಪ್ರಧಾನಿ

    ಉಪಪ್ರಧಾನಿಯಾಗಿ ರಾಬ್ ನೇಮಕ

    ತಕ್ಷಣದಿಂದಲೇ ಕೆಲಸ ಆರಂಭಿಸುವುದಾಗಿ ಚೊಚ್ಚಲ ಭಾಷಣದಲ್ಲಿ ನೀಡಿದ ಆಶ್ವಾಸನೆಯನ್ನು ಕೃತಿಗಿಳಿಸಿರುವ ಪ್ರಧಾನಿ ಸುನಕ್, ಇಬ್ಬರು ಸಚಿವರನ್ನು ವಜಾ ಮಾಡಿದ್ದಾರೆ ಹಾಗೂ ಡಾಮಿನಿಕ್ ರಾಬ್​ರನ್ನು ನೂತನ ಉಪಪ್ರಧಾನಿ ಹಾಗೂ ಜೆರೆಮಿ ಹಂಟ್​ರನ್ನು ಹೊಸ ವಿತ್ತ ಸಚಿವರನ್ನಾಗಿ ನೇಮಿಸಿದ್ದಾರೆ. ಇದು ಹೊಸ ಸಂಪುಟ ರಚನೆ ಕಸರತ್ತಿನ ಮುನ್ನುಡಿಯಾಗಿದೆ. ಟ್ರಸ್ ಸಂಪುಟದಲ್ಲಿದ್ದ ವಾಣಿಜ್ಯ ಸಚಿವ ಜೇಕಬ್ ರೀಸ್-ಮೋಗ್, ನ್ಯಾಯಾಂಗ ಮಂತ್ರಿ ಬ್ರಾಂಡನ್ ಲೂವಿಸ್, ಕಾಮಗಾರಿ ಮತ್ತು ಪಿಂಚಣಿ ಸಚಿವ ಛ್ಲೋ ಸ್ಮಿತ್ ಮತ್ತು ಅಭಿವೃದ್ಧಿ ಸಚಿವ ವಿಕಿ ಫೋರ್ಡ್ ಸಹಿತ ಹಲವರಿಗೆ ಪದತ್ಯಾಗ ಮಾಡುವಂತೆ ಸೂಚಿಸಲಾಗಿದೆ.

    ಒಬಾಮಾಗೆ ಹೋಲಿಕೆ

    ಸುನಕ್ ಬ್ರಿಟನ್ ಪ್ರಧಾನಿಯಾಗಿರುವುದು ‘ಬ್ರಿಟನ್ ಹಿಂದುಗಳಿಗೆ ಒಬಾಮಾ ಕ್ಷಣ’ ಎಂದು ಬ್ರಿಟನ್​ನ ಹಿಂದು ದೇವಾಲಯವೊಂದರ ಮುಖ್ಯಸ್ಥರು ಹೇಳಿದ್ದಾರೆ. ಲಂಡನ್​ನಿಂದ 110 ಕಿ.ಮೀ. ದೂರದಲ್ಲಿರುವ ಸೌತಾಂಪ್ಟನ್​ನಲ್ಲಿರುವ ವೇದಿಕ್ ಸೊಸೈಟಿ ಹಿಂದು ದೇವಸ್ಥಾನದ ಮುಖ್ಯಸ್ಥರು ಹೇಳುವಂತೆ ಈ ದೇವಾಲಯವನ್ನು ಸುನಕ್​ರ ಅಜ್ಜ ರಾಮದಾಸ್ ಸುನಕ್ 1971ರಲ್ಲಿ ಸ್ಥಾಪಿಸಿದ್ದರು. ಅವರ ಮಗ, ಅಂದರೆ ಸುನಕ್​ರ ತಂದೆ ಯಶ್ ಸುನಕ್ 1980ರ ದಶಕದಲ್ಲೂ ಮಂದಿರದ ಟ್ರಸ್ಟಿಯಾಗಿ ಕಾರ್ಯ ನಿರ್ವಹಿಸಿದ್ದರು.

    ಆಫ್ರಿಕಾ ಮೂಲದ ಬರಾಕ್ ಒಬಾಮಾ ಅಮೆರಿಕದ ಅಧ್ಯಕ್ಷರಾಗಿದ್ದು ಆಫ್ರಿಕನ್ನರಿಗೆ ಹೇಗೆ ಮಹತ್ವದ ಕ್ಷಣವಾಗಿತ್ತೋ ಹಾಗೇ ಸುನಕ್ ಪ್ರಧಾನಿ ಆಗಿದ್ದು ಇಲ್ಲಿನ ಹಿಂದುಗಳಿಗೆ ಅಪೂರ್ವ ಗಳಿಗೆಯಾಗಿದೆ ಎಂದು ದೇವಾಲಯ ಮುಖ್ಯಸ್ಥರು ಹೇಳಿದರು. 2019 ಡಿಸೆಂಬರ್ 12ರಂದು ಬ್ರಿಟನ್ ಸಂಸತ್ತಿಗೆ ಸಾರ್ವತ್ರಿಕ ಚುನಾವಣೆ ನಡೆದು ಕನ್ಸರ್ವೆಟಿವ್ ಪಕ್ಷ ಜಯಭೇರಿ ಬಾರಿಸಿತ್ತು. 2024ರಲ್ಲಿ ಮುಂದಿನ ಚುನಾವಣೆ ನಡೆಯಲಿದೆ. ಸುನಕ್ ಅಧಿಕಾರಕ್ಕೆ ಸಂಚಕಾರ ಬಾರದಿದ್ದರೆ ಅವರು ಎರಡು ವರ್ಷ ಪ್ರಧಾನಿಯಾಗಿ ಮುಂದುವರಿಯಬಹುದು.

    ಇನ್ಪಿ ನಾರಾಯಣ ಮೂರ್ತಿ ಸಂತಸ

    ಅಳಿಯ ರಿಷಿ ಸುನಕ್ ಬ್ರಿಟನ್ ಪ್ರಧಾನಿ ಆಗಿರುವುದಕ್ಕೆ ಮೊದಲ ಬಾರಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಐಟಿ ದಿಗ್ಗಜ ಕಂಪನಿ ಇನ್ಪೋಸಿಸ್ ಸಹಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ, ‘ಅವರ ಬಗ್ಗೆ ನಮಗೆ ಹೆಮ್ಮೆಯಿದ್ದು ಯಶಸ್ಸು ಕೋರುತ್ತೇವೆ. ಬ್ರಿಟನ್ ಜನತೆಗೆ ಒಳಿತನ್ನು ಮಾಡಲು ಅವರು ಗರಿಷ್ಠ ಪ್ರಯತ್ನ ಮಾಡುತ್ತಾರೆಂಬ ನಂಬಿಕೆಯಿದೆ’ ಎಂದು ಪಿಟಿಐಗೆ ಇಮೇಲ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

    ತರೂರ್, ಚಿದುಗೆ ಬಿಜೆಪಿ ಗುದ್ದು

    ಅಲ್ಪಸಂಖ್ಯಾತನೊಬ್ಬ ಒಂದು ದೇಶದ ಅತಿ ಪ್ರಬಲ ಅಧಿಕಾರ ಸ್ಥಾನದಲ್ಲಿ ವಿರಾಜಮಾನ ಆಗುವುದು ಅತಿ ಅಪರೂಪ. ಭಾರತದಲ್ಲೂ ಅದು ಸಾಧ್ಯವಾಗಬಹುದೇ ಎಂದು ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗಿರುವುದಕ್ಕೆ ಕಾಂಗ್ರೆಸ್ ಸಂಸದ ಶಶಿ ತರೂರ್ ಪ್ರತಿಕ್ರಿಯಿಸಿದ್ದಾರೆ. ತರೂರ್​ರ ಈ ಅಭಿಪ್ರಾಯಕ್ಕೆ ಅನೇಕ ಟ್ವಿಟರ್ ಬಳಕೆದಾರರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಕೆಲವರಂತೂ ತರೂರ್​ರ ಪ್ರಖ್ಯಾತ ಶೈಕ್ಷಣಿಕ ಹಿನ್ನೆಲೆ ಬಗ್ಗೆ ವಾಗ್ದಾಳಿ ಮಾಡಿದ್ದಾರೆ. ಮೊದಲು ಕಮಲಾ ಹ್ಯಾರಿಸ್, ಈಗ ಸುನಕ್ ಅವರು ಕ್ರಮವಾಗಿ ಅಮೆರಿಕ ಹಾಗೂ ಬ್ರಿಟನ್​ನಲ್ಲಿ ಮಹತ್ವದ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇದರಿಂದ ಭಾರತದಲ್ಲಿ ಬಹುಸಂಖ್ಯಾತರನ್ನು ಓಲೈಸುವ ಪಕ್ಷಗಳು ಪಾಠ ಕಲಿಯ ಬೇಕಿದೆ ಎಂದು ಪಿ.ಚಿದಂಬರಂ ಟ್ವೀಟ್ ಮಾಡಿದ್ದಾರೆ. ತರೂರ್ ಮತ್ತು ಚಿದಂಬರಂ ಟೀಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ, ದೇಶ ಮೂವರು ಮುಸ್ಲಿಂ ಹಾಗು ಓರ್ವ ಸಿಖ್ ಸಮುದಾಯದ ಅಧ್ಯಕ್ಷರನ್ನು ಕಂಡಿದೆ. ಮನಮೋಹನ್ ಸಿಂಗ್ ಪ್ರಧಾನಿ ಕೂಡ ಆಗಿದ್ದರು ಎಂದಿದೆ.

    ವಾಣಿಜ್ಯ ಒಪ್ಪಂದ ಚರ್ಚೆಗೆ ವೇಗ

    ಭಾರತ ಮೂಲದ ರಿಷಿ ಸುನಕ್ ಮಂಗಳವಾರ ಪ್ರಧಾನಿ ಯಾಗಿ ಅಧಿಕಾರ ಸ್ವೀಕರಿಸಿರುವುದರಿಂದ ಭಾರತ-ಬ್ರಿಟನ್ ಮುಕ್ತ ವಾಣಿಜ್ಯ ಒಪ್ಪಂದ (ಎಫ್​ಟಿಎ) ಕುರಿತ ಮಾತುಕತೆಗೆ ಹೆಚ್ಚಿನ ವೇಗ ಸಿಗಬಹುದೆಂದು ನಿರೀಕ್ಷಿಸಲಾಗಿದೆ. ರಾಜಕೀಯ ಅಲ್ಲೋಲಕಲ್ಲೋಲದ ಕಾರಣ, ದೀಪಾವಳಿಯೊಳಗೆ ಒಪ್ಪಂದ ಪೂರ್ಣಗೊಳ್ಳಬೇಕೆಂಬ ಗಡುವು ಮುಂದಕ್ಕೆ ಹೋಗಿತ್ತು. ಬ್ರಿಟನ್​ನ ಅಂದಿನ ಪ್ರಧಾನಿ ಬೋರಿಸ್ ಜಾನ್ಸನ್​ನ ಏಪ್ರಿಲ್​ನಲ್ಲಿ ಭಾರತಕ್ಕೆ ಭೇಟಿ ನೀಡಿದ್ದಾಗ ಅಕ್ಟೋಬರ್ ಗಡುವನ್ನು ನಿಗದಿಪಡಿಸಲಾಗಿತ್ತು. ಆಗ ಬ್ರಿಟನ್​ನ ಹಣಕಾಸು ಸಚಿವರಾಗಿದ್ದ ಸುನಕ್ ಈ ಒಪ್ಪಂದ ರೂಪುಗೊಳ್ಳುವುದಕ್ಕೆ ಬದ್ಧತೆಯನ್ನು ಘೋಷಿಸಿದ್ದರು. ಈಗ ಅವರೇ ದೇಶದ ಚುಕ್ಕಾಣಿ ಹಿಡಿದಿರುವುದರಿಂದ ಒಡಂಬಡಿಕೆ ರೂಪುಗೊಳ್ಳುವ ಪ್ರಕ್ರಿಯೆ ತ್ವರಿತಗೊಳ್ಳುವ ಆಶಾವಾದ ಮೂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts