More

    ಓದುವ ಹವ್ಯಾಸ ಜ್ಞಾನವೃದ್ಧಿಗೆ ರಹದಾರಿ

    ವಿಜಯವಾಣಿ ಸುದ್ದಿಜಾಲ ಚನ್ನರಾಯಪಟ್ಟಣ
    ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಓದುವ ಹವ್ಯಾಸ ಬೆಳೆಸಿಕೊಂಡರೆ ಭವಿಷ್ಯದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಬಹುದು ಎಂದು ನಲ್ಲೂರು ಗ್ರಾಪಂ ಅಧ್ಯಕ್ಷ ಗಂಗಾಧರ್ ಮೂರ್ತಿ ಅಭಿಪ್ರಾಯಪಟ್ಟರು.
    ಹೋಬಳಿಯ ನಲ್ಲೂರು ಗ್ರಾಪಂ ಗ್ರಂಥಾಲಯ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಓದುವ ಬೆಳಕು ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ’ ಕಾರ್ಯಕ್ರಮದ ಸಮಾರೋಪದಲ್ಲಿ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿದರು. ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ಸಿಗುವ ಎಲ್ಲ ಮಾಹಿತಿಯೂ ಗುಣಮಟ್ಟದಿಂದ ಕೂಡಿರುವುದಿಲ್ಲ. ಆದ್ದರಿಂದ ಬಿಡುವಿನ ಸಮಯದಲ್ಲಿ ಗ್ರಂಥಾಲಯಕ್ಕೆ ಭೇಟಿ ನೀಡಿ ಪುಸ್ತಕ ಓದು ಒಡನಾಟ ಬೆಳೆಸಿಕೊಳ್ಳಬೇಕು. ಮೇರು ಲೇಖಕರ ಕತೆ, ಕಾದಂಬರಿಗಳನ್ನು ಓದುವ ಮೂಲಕ ಅದರ ಸಾರಾಂಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
    ದಿನಪತ್ರಿಕೆಗಳ ಮೂಲಕ ಪ್ರಚಲಿತ ವಿದ್ಯಮಾನಗಳ ಕುರಿತು ತಿಳಿದು ಸಾಮಾನ್ಯಜ್ಞಾನ ವೃದ್ಧಿಸಿಕೊಂಡರೆ ಸಮಾಜದ ನೈಜ್ಯ ಚಿತ್ರಣ ಅರಿವಿಗೆ ಬರುತ್ತದೆ. ನಿಯತಕಾಲಿಕೆಗಳಲ್ಲಿ ಬರುವ ಪ್ರಬಂಧಗಳನ್ನು ಓದುವ ಜತೆಗೆ ಅವುಗಳಲ್ಲಿರುವ ಪದಬಂಧವನ್ನು ಬಗೆಹರಿಸುವುದನ್ನು ಕಲಿಯಬೇಕು ಎಂದರು.
    ಪಿಡಿಒ ಸುಶೀಲಮ್ಮ ಮಾತನಾಡಿ, ಗ್ರಾಪಂನ ಗ್ರಂಥಾಲಯದ ಸಹಯೋಗದಲ್ಲಿ ಬೇಸಿಗೆ ಶಿಬಿರ ಆಯೋಜಿಸಿರುವುದು ಅನುಕರಣೀಯವಾಗಿದ್ದು, ಇದರಿಂದ ಚಿಕ್ಕವಯಸ್ಸಿನಿಂದಲೇ ಸ್ಥಳೀಯ ಸರ್ಕಾರದೊಂದಿಗೆ ಮಕ್ಕಳು ತಮ್ಮನ್ನು ತೊಡಗಿಸಿಕೊಳ್ಳಲು ಸಹಕಾರಿಯಾಗುತ್ತದೆ. ಎಲ್ಲರೂ ಒಂದೆಡೆ ಸೇರಿ ಸ್ನೇಹ ಬೆಳೆಸಿಕೊಳ್ಳುವುದರಿಂದ ಭವಿಷ್ಯದಲ್ಲಿ ಸಂಘರ್ಷ ರಹಿತ ಸಮಾಜ ನಿರ್ಮಿಸಬಹುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts