More

    ದೃತರಾಷ್ಟ್ರ ವ್ಯಾಮೋಹವು ಬೇಡ, ಗಾಂಧಾರಿ ಸಮರ್ಥನೆಯು ಬೇಡ

    ತುಮಕೂರು: ‘‘ನೀವು ದೇವರಸೃಷ್ಟಿ, ಮಕ್ಕಳು ನಿಮ್ಮ ಸೃಷ್ಟಿ. ನಿಮ್ಮ ಸೃಷ್ಟಿಯನ್ನು ದೇವರಸೃಷ್ಟಿಗೆ ಒಪ್ಪಿಸುವ ಮುನ್ನ ನಿಮ್ಮ ಸೃಷ್ಟಿಯನ್ನು ಅಚ್ಚುಕಟ್ಟುಗೊಳಿಸುವ ಮತ್ತು ಅಂದಗೊಳಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಹಿರೇಮಠಾಧ್ಯಕ್ಷ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ನಗರದ ಚಿಕ್ಕಪೇಟೆಯ ಹಿರೇಮಠದಲ್ಲಿ ಆಯೋಜಿಸಿದ್ದ ‘ಕಲಿಸು ಗುರುವೆ ಕಲಿಸು’ ಮಕ್ಕಳ ಬೇಸಿಗೆ ಶಿಬಿರವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಮಕ್ಕಳು ನೀವು ಬರೆದ ಸುಂದರ ಕಲಾಕೃತಿ. ಚಿಕ್ಕವಿದ್ದಾಗ ಅವುಗಳನ್ನು ಹೇಗಾದರೂ ಸರಿ, ತಿದ್ದಬಹುದು, ತೀಡಬಹುದು. ಕಂದಮ್ಮಗಳು ಕುಮಾರಾವಸ್ಥೆಗೆ ಬರುವುದಕ್ಕೆ ಮುಂಚೆ ಅವು ನಿಮ್ಮಧೀನ ಎಂದರು.

    ಮಕ್ಕಳು ನಿಮ್ಮನ್ನು ಕೇಳಿ ಕಲಿಯುವುದಿಲ್ಲ. ಅವು ನಿಮ್ಮನ್ನು ನೋಡಿ ಕಲಿಯುತ್ತವೆ. ಹಾಗಾಗಿ, ಬೆಳೆಯುತ್ತಿರುವ ಮಕ್ಕಳ ಮುಂದೆ ಹುಷಾರಾಗಿರಿ. ಮಕ್ಕಳ ವಿಷಯದಲ್ಲಿ ದೃತರಾಷ್ಟ್ರ ವ್ಯಾಮೋಹವೂ ಬೇಡ. ಹಾಗೇನೇ ಅವರ ವಿಷಯದಲ್ಲಿ ಗಾಂಧಾರಿ ಸಮರ್ಥನೆಯೂ ಬೇಡ. ಮಕ್ಕಳೇ, ನಿಮ್ಮನ್ನು ಬೇಸಿಗೆಯ ಬಿಡುವಿನಲ್ಲೂ ನಿಮ್ಮ ತಂದೆ, ತಾಯಿ ಅದ್ಯಾಕೆ ಅಷ್ಟೊಂದು ‘ಎಂಗೇಜ್’ ಮಾಡುತ್ತಾರೆ, ಗೊತ್ತಾ? ನೀವು ಕ್ಷಣಕ್ಷಣಕ್ಕೂ ಕಲಿಯುತ್ತ ಇರುತ್ತೀರಿ. ನಿಮ್ಮ ಆ ಕಲಿಕೆಯ ಕ್ಷಣಗಳು ಸಾರ್ಥಕ ಕಲಿಕೆಗೆ ಸಾಕ್ಷಿಯಾಗಲಿ ಎಂದು ನಿಮ್ಮ ತಂದೆ, ತಾಯಿ ಮತ್ತು ಗುರುಹಿರಿಯರು ಬಯಸುತ್ತಾರೆ ಎಂದು ತಿಳಿಸಿದರು.

    ಕಲಿಕೆ ನಿಮ್ಮ ಹಕ್ಕೂ ಅಹುದು, ಅದು ನಿಮ್ಮ ಕರ್ತವ್ಯವೂ ಅಹುದು. ಕಲಿಕೆಯೇ ನಿಮ್ಮ ಭವಿಷ್ಯತ್ತಿನ ಸಂಗಾತಿ. ಕಲಿಕೆ ಇದು, ನಿಮ್ಮ ಭವಿಷ್ಯತ್ತಿನ ಅಹುದು ಮತ್ತು ಅದು ನಿಮ್ಮ ಆತ್ಮನಿರ್ಭರಸಂಗಾತಿಯೂ ಅಹುದು. ಹಿರೇಮಠವು ಭವ್ಯಭಾರತ ನಿರ್ಮಾಣಕ್ಕೆ ಮತ್ತು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಯಾವಾಗಲೂ ಹಂಬಲಿಸಿಕೊಂಡಿದೆ ಎಂದು ಹೇಳಿದರು.

    ಶಿಬಿರ ಸಂಯೋಜಕ ಬಾಲಚಂದ್ರ, ಕೆ. ಆರ್. ಜಗನ್ನಾಥ್, ಶಿಬಿರ ಮಾರ್ಗದರ್ಶಕರಾದ ಜಯರತ್ನಾ, ಶಾಂತಮ್ಮ , ಶಿವಮ್ಮ ಉಪಸ್ಥಿತರಿದ್ದರು. ಮಕ್ಕಳಿಗೆ ಶಿಬಿರಗೀತೆ ಮತ್ತು ಶಿಬಿರಪ್ರತಿಜ್ಞೆಯನ್ನು ಹೇಳಿಕೊಟ್ಟರು. ನಂತರ ಮಕ್ಕಳಿಗೆ ಡಾ. ಗುರು ಬಸವರಾಜ್ ದೈನಂದಿನ ಶಿಸ್ತು ಮತ್ತು ದೈಹಿಕ ಶಿಸ್ತಿನ ಕುರಿತು ಪಾಠಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts