More

    ಮುಗಿಯದ ಸುಳ್ಯ- ನಾರ್ಕೋಡು- ಬಂದಡ್ಕ ರಸ್ತೆ ಕಾಮಗಾರಿ

    ಗಣೇಶ್ ಮಾವಂಜಿ, ಸುಳ್ಯ
    ಸುಳ್ಯ- ಕೇರಳ ಸಂಪರ್ಕಿಸುವ ಅತಿ ಹತ್ತಿರದ ರಸ್ತೆಗಳಲ್ಲಿ ಸುಳ್ಯ- ನಾರ್ಕೋಡು- ಬಂದಡ್ಕ ರಸ್ತೆಯೂ ಒಂದು. ಈ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭಿಸಿ 2 ವರ್ಷ ಕಳೆದಿದ್ದು ಇನ್ನೂ ಅರ್ಧದಲ್ಲೇ ಇದೆ.
    ಅರಣ್ಯ ಇಲಾಖೆಯಿಂದ ಸಿಗದ ಅನುಮತಿ, ಖಾಸಗಿ ಜಾಗದವರು ಜಾಗ ಬಿಟ್ಟುಕೊಡಲು ನಕಾರ ವ್ಯಕ್ತಪಡಿಸಿದ್ದರಿಂದ ರಸ್ತೆ ಅಭಿವೃದ್ಧಿ ಕಾಣುವಲ್ಲಿ ತೊಡಕಾಗಿದೆ. ವರ್ಷದ ಹಿಂದೆಯೇ ಕೆಲಸ ಪೂರ್ಣಗೊಳ್ಳಬೇಕಾಗಿತ್ತಾದರೂ ಇನ್ನೂ ಕುಂಟುತ್ತಿದೆ.

    ಸುಳ್ಯ ಶಾಸಕ ಎಸ್.ಅಂಗಾರ ಅವರ ಶಿಫಾರಸ್ಸಿನ ಮೇರೆಗೆ ಸುಮಾರು 10.5 ಕೋಟಿ ರೂ. ವೆಚ್ಚದಲ್ಲಿ ಕಲ್ಲೆಂಬಿಯಿಂದ ಕನ್ನಡಿ ತೋಡುವರೆಗೆ ರಸ್ತೆ ವಿಸ್ತರಣೆ ಮತ್ತು ಡಾಂಬರು ಕಾಮಗಾರಿಗೆ 2019ರಲ್ಲಿ ಟೆಂಡರ್ ಮುಗಿಸಿ ಗುದ್ದಲಿ ಪೂಜೆ ಕೂಡ ಆಗಿತ್ತು. ನಾರ್ಕೋಡಿನಿಂದ ಕಲ್ಲೆಂಬಿ ತನಕ ಈಗಾಗಲೇ ಅಭಿವೃದ್ಧಿ ಕಂಡಿದೆ.

    ಕರೊನಾ ಬಿಕ್ಕಟ್ಟು, ಅರಣ್ಯ ಇಲಾಖೆಯಿಂದ ಸಿಗದ ಅನುಮತಿ, ಮೂಲ ಕಾಮಗಾರಿಯಲ್ಲಿ ಆದ ಬದಲಾವಣೆಗಳಿಂದ ಕೆಲಸ ಮುಂದೆ ಸಾಗಿಲ್ಲ ಎಂಬುದು ಕಾಮಗಾರಿ ಗುತ್ತಿಗೆ ವಹಿಸಿಕೊಂಡ ಜೆ.ಡಿ.ಸುವರ್ಣ ಆ್ಯಂಡ್ ಕಂಪನಿ ನೀಡುವ ಕಾರಣ. ಕಲ್ಲೆಂಬಿಯಿಂದ ಕನ್ನಡಿತೋಡುವರೆಗಿನ ರಸ್ತೆ ವಿಸ್ತರಣೆಗೆ ಹೆಚ್ಚಿನ ಖಾಸಗಿ ಜಮೀನು ಮಾಲೀಕರು ಸ್ವಇಚ್ಛೆಯಿಂದ ರಸ್ತೆಗೆ ಬೇಕಾದಷ್ಟು ಜಾಗ ಬಿಟ್ಟುಕೊಟ್ಟಿದ್ದಾರೆ. ಆದರೆ ಬಾರ್ಪಣೆ ಎಂಬಲ್ಲಿ ಮಾತ್ರ ಇಬ್ಬರು ವ್ಯಕ್ತಿಗಳು ರಸ್ತೆಗೆ ತಕರಾರು ಮಾಡಿದ್ದರಿಂದ ಕಾಮಗಾರಿಗೆ ಅಡ್ಡಿಯಾಗಿದೆ.

    ಮಳೆಗಾಲದಲ್ಲಿ ಸಂಚಾರ ಕಷ್ಟ: ರಸ್ತೆ ವಿಸ್ತರಣೆಗಾಗಿ ಮರ, ವಿದ್ಯುತ್ ಕಂಬಗಳ ಸ್ಥಳಾಂತರ ಕೆಲಸ ಇನ್ನೂ ಪ್ರಾರಂಭ ಆಗಿಲ್ಲ. ಕಾಮಗಾರಿ ವೇಳೆ ಆಲೆಟ್ಟಿ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಕುಡಿಯುವ ನೀರು ಯೋಜನೆಯ ಎರಡು ಕೊಳವೆ ಬಾವಿಗಳು, ಸುಮಾರು ನಾಲ್ಕು ಸಾವಿರ ಮೀಟರ್ ಪೈಪ್‌ಗಳು ನಾಶವಾಗಿವೆ. ಈ ಭಾಗದಲ್ಲಿ ಈಗಾಗಲೇ ಕುಡಿಯುವ ನೀರಿನ ಅಭಾವ ಉಂಟಾಗಿದೆ. ಅಲ್ಲಲ್ಲಿ ಮೋರಿ ಅಳವಡಿಕೆ, ಚರಂಡಿ ನಿರ್ಮಾಣ ಕಾಮಗಾರಿಯೂ ಆಗಿಲ್ಲ. ಅರೆಬರೆ ರಸ್ತೆ ಕಾಮಗಾರಿಯಿಂದ ಮಳೆಗಾಲದಲ್ಲಿ ರಸ್ತೆಯಲ್ಲಿ ಕೆಸರು ತುಂಬಿ ಸಂಚಾರಕ್ಕೆ ಮತ್ತಷ್ಟು ತೊಂದರೆಯಾಗಬಹುದು ಎಂಬುದು ಸ್ಥಳೀಯರ ಆತಂಕ.

    ಈಗಾಗಲೇ ಮುಗಿಯಬೇಕಾಗಿದ್ದ ಕಾಮಗಾರಿ ಇನ್ನೂ ಪ್ರಾರಂಭ ಹಂತದಲ್ಲೇ ಇದೆ. ಈ ರಸ್ತೆ ಸುಳ್ಯವನ್ನು ಕೇರಳದೊಂದಿಗೆ ಬೆಸೆಯುವದರಿಂದ ಹಾಗೂ ಸಾವಿರಾರು ಜನರಿಗೆ ಅನುಕೂಲವಾಗುವುದರಿಂದ ರಸ್ತೆ ಕಾಮಗಾರಿಯನ್ನು ಆದಷ್ಟು ಶೀಘ್ರವಾಗಿ ಮುಗಿಸಬೇಕು.

    -ದಿನೇಶ್ ಕಣಕ್ಕೂರು , ಆಲೆಟ್ಟಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ

    ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಎರಡು ವರ್ಷಗಳು ಕಳೆದಿದೆಯಾದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಮಳೆಗಾಲಕ್ಕೆ ಮೊದಲು ಕಾಮಗಾರಿ ಪೂರ್ಣಗೊಳ್ಳದಿದ್ದರೆ ಈ ರಸ್ತೆಯನ್ನೇ ಅವಲಂಬಿಸಿರುವ ಕೇರಳ ಹಾಗೂ ಕರ್ನಾಟಕದ ಮಂದಿ ಕಷ್ಟಪಡಬೇಕಾಗಬಹುದು. ಇನ್ನೆರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡು ರಸ್ತೆಯನ್ನು ಸಾರ್ವಜನಿಕರ ಉಪಯೋಗಕ್ಕೆ ಬಿಟ್ಟುಕೊಡದಿದ್ದಲ್ಲಿ ಹೋರಾಟ ನಡೆಸಲಾಗುವುದು
    -ಧರ್ಮಪಾಲ ಕೊಂಯ್ಗಜೆ , ಆಲೆಟ್ಟಿ ಗ್ರಾಪಂ ಸದಸ್ಯ

    ಟೆಂಡರ್ ಪ್ರಕ್ರಿಯೆಗಳು ಮುಗಿದ ಕೂಡಲೇ ಕರೊನಾದಿಂದ ಕೆಲಸಕ್ಕೆ ಅಡ್ಡಿಯಾಯಿತು. ಒಟ್ಟು 10 ಕಿ.ಮೀ. ರಸ್ತೆಯಲ್ಲಿ 8 ಕಿ.ಮೀ. ರಸ್ತೆ ಮೀಸಲು ಅರಣ್ಯಪ್ರದೇಶದ ವ್ಯಾಪ್ತಿಗೆ ಒಳಪಡುತ್ತದೆ. ಹಲವಾರು ಬಾರಿ ಅರಣ್ಯಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆದಿದೆಯಾದರೂ ವಿಸ್ತರಣೆಗೆ ಅನುಮತಿ ದೊರಕಿಲ್ಲ. ಅನುಮತಿ ಸಿಕ್ಕ ಒಂದೇ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು.
    -ಪೃಥ್ವಿರಾಜ್, ಗುತ್ತಿಗೆದಾರ ಕಂಪನಿ ಮ್ಯಾನೇಜರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts