More

    ಕಬ್ಬಿನ ಬಾಕಿ 15 ದಿನಗಳಲ್ಲಿ ಪಾವತಿಸಿ

    ಬೆಳಗಾವಿ: ಜಿಲ್ಲೆಯಲ್ಲಿ 17 ಸಕ್ಕರೆ ಕಾರ್ಖಾನೆಗಳು ಕಬ್ಬಿನ ಹಣ ಪಾವತಿಸಿದ್ದು, ಶೇ. 96ರಷ್ಟು ಬಿಲ್ ಮೊತ್ತ ರೈತರಿಗೆ ನೀಡಲಾಗಿದೆ. ಕಾರ್ಖಾನೆಗಳು ಬಾಕಿ ಉಳಿಸಿರುವ ಕಬ್ಬಿನ ಹಣವನ್ನು 15 ದಿನಗಳಲ್ಲಿ ರೈತರಿಗೆ ಪಾವತಿಸಬೇಕು ಎಂದು ಸಕ್ಕರೆ ಮತ್ತು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಸೂಚಿಸಿದರು.

    ಸಕ್ಕರೆ ಮತ್ತು ಕಾರ್ಮಿಕ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಇಲ್ಲಿನ ಸುವರ್ಣ ವಿಧಾನಸೌಧಕ್ಕೆ ಸಕ್ಕರೆ ಸಚಿವಾಲಯ ಸ್ಥಳಾಂತರ ಮಾಡಬೇಕೆಂಬ ಮನವಿ ಬರುತ್ತಿದ್ದು, ಒಂದೇ ಇಲಾಖೆ ಸ್ಥಳಾಂತರಿಸಲು ಆಗುವುದಿಲ್ಲ. ಹಾಗಾಗಿ ಇಲಾಖೆಗಳು ವಿಲೀನಗೊಳಿಸುವಾಗ ಸಕ್ಕರೆ ಇಲಾಖೆಯ ಕಚೇರಿ ಸ್ಥಳಾಂತರಿಸುವ ಬಗ್ಗೆ ಚರ್ಚಿಸಲಾಗುವುದು. ಜೋಳ ಬೆಳದ ರೈತರಿಗೆ ಪರಿಹಾರವಾಗಿ 5 ಸಾವಿರ ರೂ. ನೀಡಲಾಗುತ್ತಿದ್ದು, ಈ ಯೋಜನೆಯಿಂದ 40 ಲಕ್ಷ ರೈತರಿಗೆ ಅನುಕೂಲ ಆಗಲಿದೆ ಎಂದರು.

    ಕಾರ್ಖಾನೆ ಬಂದ್ ಮಾಡುವಂತಿಲ್ಲ: 100ಕ್ಕಿಂತ ಹೆಚ್ಚು ಕಾರ್ಮಿಕರು ಇರುವ ಕಾರ್ಖಾನೆಯ ಮಾಲೀಕರು ಸರ್ಕಾರಕ್ಕೆ ತಿಳಿಸದೆ ತಮ್ಮ ಕಾರ್ಖಾನೆ ಮುಚ್ಚುವಂತಿಲ್ಲ. ಅನೇಕ ಕಾರ್ಖಾನೆಗಳು ಸಂಬಳ ನೀಡದೆ ಕಾರ್ಮಿಕರಿಗೆ ಅನ್ಯಾಯ ಮಾಡಿವೆ. ಅದರ ಬಗ್ಗೆ ಮಾಹಿತಿ ಕಲೆಹಾಕಿ ಕಾರ್ಮಿಕರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಸರ್ಕಾರ ಈಗಾಗಲೇ ಘೋಷಣೆ ಮಾಡಿರುವಂತೆ ಕಾರ್ಮಿಕರಿಗೆ 5,000 ರೂ. ಪರಿಹಾರ ಧನ ವಿತರಿಸಲಾಗುತ್ತಿದೆ. 20 ದಿನಗಳಲ್ಲಿ ಪರಿಹಾರ ಧನ ಕಾರ್ಮಿಕರಿಗೆ ಮುಟ್ಟಿಸಲು ಅಧಿಕಾರಿಗಳು ಶ್ರಮಿಸಬೇಕು. ಮುಂದಿನ 10 ದಿನಗಳಲ್ಲಿ ಪರಿಹಾರ ನೀಡುವ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದರು.

    ದಾಖಲೆ ಬೇಕಿಲ್ಲ; ಕಾರ್ಮಿಕ ಕಾರ್ಡ್ ಹೊಂದಿರದ 7 ಲಕ್ಷ 80 ಸಾವಿರ ಕಾರ್ಮಿಕರಿದ್ದು, 3 ಲಕ್ಷ 34 ಸಾವಿರ ಕಾರ್ಮಿಕ ದತ್ತಾಂಶ ಸಂಗ್ರಹಿಸಲಾಗಿದೆ. ಉಳಿದ ಕಾರ್ಮಿಕರ ದತ್ತಾಂಶ ಸಂಗ್ರಹಿಸಿ ಅವರಿಗೂ ಪರಿಹಾರ ಒದಗಿಸಲಾಗುತ್ತದೆ.

    ಕ್ಷೌರಿಕರು ಮತ್ತು ಅಗಸರು ಪರಿಹಾರ ಧನ ಪಡೆಯಲು ಯಾವುದೇ ದಾಖಲೆ ನೀಡುವ ಅವಶ್ಯಕತೆ ಇಲ್ಲ. ಸ್ಥಳೀಯ ಮಟ್ಟದಲ್ಲಿ ಅಥವಾ ಗ್ರಾಪಂ ಮಟ್ಟದಲ್ಲಿ ಪಿಡಿಒ ನೇತೃತ್ವದಲ್ಲಿ ಪರಿಶೀಲನೆ ಮಾಡಿ ಅವರಿಗೆ ಪರಿಹಾರ ನೀಡಬೇಕು ಎಂದು ಜಿ.ಪಂ. ಸಿಇಒ ಡಾ. ರಾಜೇಂದ್ರ ಅವರಿಗೆ ಸೂಚಿಸಿದರು.

    ಶಾಸಕ ಅಭಯ ಪಾಟೀಲ ಮಾತನಾಡಿ, ಅಕ್ಕಸಾಲಿಗರಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಪರಿಹಾರ ನೀಡಬೇಕು ಮತ್ತು ನೇಕಾರರಿಗೆ ಘೋಷಣೆ ಮಾಡಿರುವ 2 ಸಾವಿರ ಪರಿಹಾರ ಧನವನ್ನು 5 ಸಾವಿರಕ್ಕೆ ಏರಿಕೆ ಮಾಡಬೇಕು ಎಂದು ಮನವಿ ಮಾಡಿದರು. ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕ ಅನಿಲ ಬೆನಕೆ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts