More

    ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನಶ್ಚೇತನ ನಿರೀಕ್ಷೆ

    ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ

    ಉಡುಪಿ ಹಾಗೂ ದ.ಕ. ಜಿಲ್ಲೆಯ ರೈತರ ಮತ್ತು ಸಾವಿರಾರು ಕಾರ್ಮಿಕ ಕುಟುಂಬಗಳಿಗೆ ಆಶ್ರಯವಾಗಿದ್ದ ಬ್ರಹ್ಮಾವರ ಸಹಕಾರಿ ಸಕ್ಕರೆ ಕಾರ್ಖಾನೆಯ ಪುನರಾರಂಭಕ್ಕೆ ಯೋಜನೆ ಸಿದ್ಧಗೊಳ್ಳುತ್ತಿದ್ದು, ಆರ್ಥಿಕ ನೆರವು ಒದಗಿಸುವಂತೆ ಕಾರ್ಖಾನೆ ಆಡಳಿತ ಮಂಡಳಿ ಮುಖ್ಯಮಂತ್ರಿಗೆ ಮನವಿ ಮಾಡಿದೆ.

    ಸಕ್ಕರೆ ಕಾರ್ಖಾನೆ ಪುನರ್ ನಿರ್ಮಾಣದ ಬಗ್ಗೆ ಜರ್ಮನ್ ಮೂಲದ ಕೈಗಾರಿಕಾ ಸಂಸ್ಥೆಯೊಂದಿಗೆ ಮಾತುಕತೆ ನಡೆಸಿ ಸಕ್ಕರೆ ಉತ್ಪಾದನೆ ಜತೆಗೆ ಇಥೆನಾಲ್, ವಿದ್ಯುತ್ ಉತ್ಪಾದನೆ, ಎಲ್.ಪಿ.ಸಿ. ತಯಾರಿಕಾ ಘಟಕಗಳನ್ನು ಪ್ರಾರಂಭಿಸಲು 100 ಕೋಟಿ ರೂ. ಅಂದಾಜಿನಲ್ಲಿ ಯೋಜನೆ ರೂಪಿಸಲಾಗಿದೆ.

    ಈ ಮಧ್ಯೆ ಕಾರ್ಖಾನೆ ಪುನರಾರಂಭ ನಿಟ್ಟಿನಲ್ಲಿ 100 ಕೋಟಿ ರೂ. ಆರ್ಥಿಕ ನೆರವು ನೀಡುವಂತೆ ಆಡಳಿತ ಮಂಡಳಿ ಮುಖ್ಯಮಂತ್ರಿಗೆ ಮನವಿ ಮಾಡಿದೆ. ಈ ಹಿಂದೆ ಕಾರ್ಖಾನೆಯ ನೆರವಿಗಾಗಿ 30 ಕೋಟಿ ರೂ. ಸಾಲ ನೀಡಿದ್ದು, ಈಗ ಬಡ್ಡಿ ಸಹಿತ 65 ಕೋಟಿ ರೂ. ಆಗಿದೆ. ಇದನ್ನು ಮನ್ನಾ ಮಾಡಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ.
    1985ರಲ್ಲಿ ಸಕ್ಕರೆ ಉತ್ಪಾದನಾ ಕಾರ್ಯ ಆರಂಭಿಸಿದ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ದಿನವೊಂದಕ್ಕೆ 1250 ಮೆಟ್ರಿಕ್ ಟನ್ ಕಬ್ಬು ಅರೆಯುವ ಸಾಮರ್ಥ್ಯ ಹೊಂದಿತ್ತು. ವಾರಾಹಿ ನೀರಿನ ಯೋಜನೆ ನಿಗದಿತ ಕಾಲದಲ್ಲಿ ಅನುಷ್ಠಾನ ಆಗದ ಕಾರಣ ಬೆಳೆಗಾರರಿಂದ ಕಬ್ಬು ಬೆಳೆ ಕೊರತೆ ಉಂಟಾಗಿ 2006ರಲ್ಲಿ ಕಾರ್ಖಾನೆ ಸ್ಥಗಿತಗೊಂಡಿತ್ತು. 168 ಕಾರ್ಮಿಕರನ್ನು ಸೇವೆಯಿಂದ ಮುಕ್ತಿಗೊಳಿಸಿ ಬಳಿಕ 30 ವರ್ಷಗಳ ಅವಧಿಗೆ 31.68 ಕೋಟಿ ರೂ. ಲೀಸಿಗೆ ರಾಮಿ ಶುಗರ್ಸ್‌ನವರಿಗೆ ನೀಡಿದ್ದರೂ ಕರಾರಿನ ಷರತ್ತುಗಳನ್ನು ಪಾಲಿಸಲು ವಿಫಲರಾಗಿ ಅವರು ಹಿಂದೆ ಸರಿದಿದ್ದರು. ರೈತರ ಕಬ್ಬಿನ ಬಾಕಿ, ಕಾರ್ಮಿಕರ ವೇತನ ಮತ್ತು ಬಾಕಿ ಹಾಗೂ ಪ್ರಾಥಮಿಕ ಸಹಕಾರಿ ಸಂಸ್ಥೆಗಳು ಕಾರ್ಖಾನೆಗೆ ನೀಡಿದ ಠೇವಣಿಯನ್ನು ಮರುಪಾವತಿಸಲು ಸರ್ಕಾರ 2013ರಲ್ಲಿ 12 ಕೋಟಿ ರೂ. ಸಾಲ ಮಂಜೂರು ಮಾಡಿ ಬಾಕಿ ಹಣ ಪಾವತಿಸಿತ್ತು.

    2015ರಿಂದ ಇದುವರೆಗೆ ವಾರಾಹಿ ನೀರಾವರಿ ಯೋಜನೆಗೆ ಒತ್ತು ನೀಡಿದ್ದರಿಂದ ಕರಾವಳಿಯ 8 ಸಾವಿರ ಎಕರೆ ಕೃಷಿ ಭೂಮಿಗೆ ನೀರು ದೊರೆತಿರುವುದರಿಂದ ಕಾರ್ಖಾನೆಯ ಕಾರ್ಯವ್ಯಾಪ್ತಿಯಲ್ಲಿ ರೈತರು ಸಾಕಷ್ಟು ಕಬ್ಬು ಬೆಳೆದಲ್ಲಿ ಕಾರ್ಖಾನೆ ಅಭಿವೃದ್ಧಿಯಾಗಲಿದೆ.
    ಭತ್ತದ ಬೆಳೆಗಿಂತ ಕಬ್ಬು ಬೆಳೆಯು ಲಾಭದಾಯಕವಾಗಿರುವುದರಿಂದ ರೈತರು ಬ್ರಹ್ಮಾವರದಲ್ಲಿ ನಿಲುಗಡೆಗೊಂಡ ಸಕ್ಕರೆ ಕಾರ್ಖಾನೆಯನ್ನು ಪುನಃ ಪ್ರಾರಂಭಿಸುವಂತೆ ಆಗ್ರಹಿಸುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

    ಬೀಜೋತ್ಪಾದನೆಗೆ ಕಬ್ಬು ಬೆಳೆ ಆರಂಭ
    ಕಬ್ಬು ಅಭಿವೃದ್ಧಿ ಪಡಿಸುವ ಸಲುವಾಗಿ ಪ್ರಸ್ತುತ ಕಾರ್ಖಾನೆಯ ಕಾರ್ಯ ವ್ಯಾಪ್ತಿಯಲ್ಲಿರುವ ರೈತರ ಹೊಲಗಳಲ್ಲಿ ಕಬ್ಬಿನ ಬೀಜೋತ್ಪಾದನೆಗಾಗಿ ಉತ್ತಮ ತಳಿಯ ಹಾಗೂ ಅಧಿಕ ಇಳುವರಿಯ ಕಬ್ಬಿನ ಬೀಜವನ್ನು ಮಂಡ್ಯದಿಂದ ತರಿಸಿ ರೈತರಿಗೆ 2018ರಿಂದ ಕಬ್ಬಿನ ಬೀಜ, ಸಸಿಯನ್ನು ವಿತರಣೆ ಮಾಡಲಾಗಿದೆ. ನೂತನ ಆಡಳಿತ ಮಂಡಳಿ ಕಬ್ಬು ಬೆಳೆಗಾರರ ಅಪೇಕ್ಷೆಯಂತೆ ಕಾರ್ಖಾನೆಯನ್ನು ಪುನರ್ ನಿರ್ಮಾಣ ಮಾಡುವ ಸಂಕಲ್ಪ ಮಾಡಿದ್ದು, ಪ್ರಥಮ ಹಂತದಲ್ಲಿ ಉಡುಪಿ ಜಿಲ್ಲೆಯಲ್ಲಿ 2 ಸಾವಿರ ಎಕರೆ ಜಾಗದಲ್ಲಿ ಕಬ್ಬು ಬೆಳೆಯವ ಗುರಿ ಹೊಂದಿದೆ.

    ಈಗ ಪ್ರತೀ ದಿನ 400 ಕೆ.ಜಿ. ಬೆಲ್ಲ ತಯಾರಿಯಾಗುತ್ತದೆ. ಹಾವಂಜೆ, ಸೂಡ ಕೆಂಜೂರು ಭಾಗದ ಬೆಳೆಗಾರರಿಂದ ಕಬ್ಬು ತರಿಸಿಕೊಂಡು ಬೆಲ್ಲ ಮಾಡುತ್ತಿದ್ದೇವೆ. ಭತ್ತದ ಬೆಳೆಗಿಂತ ಕಬ್ಬು ಹೆಚ್ಚು ಲಾಭದಾಯಕ ಎನ್ನುವುದನ್ನು ಇಲ್ಲಿನ ರೈತರು ಕಂಡುಕೊಂಡಿದ್ದಾರೆ. ಮುಂದಿನ ದಿನದಲ್ಲಿ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಯಾವಾಗ ಆರಂಭಗೊಳ್ಳುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ ನಮ್ಮ ರೈತರು.
    ಬೈಕಾಡಿ ಸುಪ್ರಸಾದ್ ಶೆಟ್ಟಿ, ಅಧ್ಯಕ್ಷರು, ದ.ಕ ಸಹಕಾರಿ ಸಕ್ಕರೆ ಕಾರ್ಖಾನೆ ಬ್ರಹ್ಮಾವರ

    27ರಂದು ಆಲೆಮನೆ ಆರಂಭ
    20 ಕಾಲ ಸ್ಥಗಿತಗೊಂಡಿದ್ದ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ ಕಾರ್ಖಾನೆಯ ಆಡಳಿತ ಮಂಡಳಿಯ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ನೇತೃತ್ವದಲ್ಲಿ ಪ್ರಾಯೋಗಿಕವಾಗಿ ಆಲೆಮನೆ ಆರಂಭವಾಗಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕಬ್ಬು ಬೆಳೆಗಾರರಲ್ಲಿ ಆಶಾ ಭಾವನೆ ಮೂಡಿದೆ. ಶುದ್ಧ ಬೆಲ್ಲವನ್ನು ಕಡಿಮೆ ದರದಲ್ಲಿ ಮಾರಾಟ ಮಾಡುವ ವ್ಯವಸ್ಥೆಯನ್ನೂ ಮಾಡಲಾಗಿದ್ದು, ಜ.27ರಂದು ಅಧಿಕೃತವಾಗಿ ಆಲೆಮನೆ ಆರಂಭಗೊಳ್ಳಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts