More

    ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಆತ್ಮಹತ್ಯೆಯು ಪರಿಹಾರವಲ್ಲ, ಸಮರ್ಥವಾಗಿ ಸವಾಲುಗಳನ್ನು ನಿಭಾಯಿಸಿ

    ಚಿಕ್ಕಬಳ್ಳಾಪುರ: ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಆತ್ಮಹತ್ಯೆಯು ಪರಿಹಾರವಲ್ಲ. ಸಮರ್ಥವಾಗಿ ಸವಾಲುಗಳನ್ನು ನಿಭಾಯಿಸುವುದೇ ಮುಖ್ಯ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಅರುಣಾ ಕುಮಾರಿ ಅಭಿಪ್ರಾಯಪಟ್ಟರು.
    ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿ.ಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕೈಗೊಂಡಿದ್ದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
    ಪ್ರತಿಯೊಬ್ಬರು ಸಹ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಕ್ರಿಯಾಶೀಲ ವ್ಯಾಯಾಮ ಹಾಗೂ ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ನೆಮ್ಮದಿಯ ಜೀವನ ನಡೆಸಬೇಕು. ಆಗ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.
    ಜೀವನ ಹೀಗೆ ಇರಬೇಕೆಂಬುದಾಗಿ ಭಾವಿಸುವುದು ತಪ್ಪಲ್ಲ. ಆದರೆ, ನಿರೀಕ್ಷೆಯಂತೆ ಸಾಧ್ಯವಾಗದಿದ್ದಲ್ಲಿ ಕೊರಗಿ, ಖಿನ್ನತೆಗೆ ಒಳಗಾಗುವುದು ಸರಿಯಲ್ಲ. ಬದುಕಿನಲ್ಲಿ ವೈಫಲ್ಯ ಹೊಂದುವುದು ಸಹಜ. ಇದನ್ನು ಸಮರ್ಥವಾಗಿ ಅರ್ಥೈಸಿಕೊಳ್ಳಬೇಕು ಎಂದರು.
    ಭಾರತೀಯ ದಂಡ ಪ್ರಕ್ರಿಯೆ ಸಂಹಿತೆಯ ಪ್ರಕಾರ ಆತ್ಮಹತ್ಯೆ ಪ್ರಯತ್ನ, ಪ್ರಚೋದನೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬಹುದು. ಇದಕ್ಕೆ ಅವಕಾಶ ನೀಡಬಾರದು ಎಂದರು.
    ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ.ಕೆ.ಮಂಜುಳಾ ದೇವಿ ಮಾತನಾಡಿ, ಸಾಮಾನ್ಯವಾಗಿ 15-24 ರ ವಯೋಮಾನದವರಲ್ಲಿ, ಅದರಲ್ಲೂ ಹೆಣ್ಣು ಮಕ್ಕಳಲ್ಲಿ ಹೆಚ್ಚಿಗೆ ಆತ್ಮಹತ್ಯೆ ಶರಣಾಗುತ್ತಿದ್ದಾರೆ. ಇದಕ್ಕೆ ನಕಾರಾತ್ಮಕ ಚಿಂತನೆ, ದುಶ್ಚಟಗಳು ಮತ್ತು ಮಾರ್ಗದರ್ಶನದ ಕೊರತೆಯೇ ಪ್ರಮುಖ ಕಾರಣ. ಈ ಸಮಸ್ಯೆಯ ನಿವಾರಣೆಗೆ ಪಾಲಕರು ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕು ಎಂದರು. .
    ಈ ಸಂದರ್ಭದಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ಶಿವಕುಮಾರ್, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಜಿ.ಡಿ.ಚಂದ್ರಯ್ಯ, ವಕೀಲರ ಸಂಘದ ಜಂಟಿ ಕಾರ್ಯದರ್ಶಿ ಅಭಿಲಾಷ್ ಮತ್ತಿತರರು ಇದ್ದರು.

    *ಜಾಗೃತಿ ಭಿತ್ತಿ ಪತ್ರ ಬಿಡುಗಡೆ
    ಕಾರ್ಯಕ್ರಮದಲ್ಲಿ ಆತ್ಮಹತ್ಯೆ ತಡೆಗಟ್ಟುವ ಕುರಿತು ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಹಾಗೆಯೇ ಜನರಲ್ಲಿ ಜಾಗೃತಿ ಮೂಡಿಸುವ ಕರಪತ್ರಗಳು ಹಾಗೂ ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಲಾಯಿತು. ಮಾನಸಿಕ ಖಿನ್ನತೆಗೆ ಒಳಗಾದವರು ಉಚಿತ ಮಾನಸಿಕ ಆರೋಗ್ಯ ಸಹಾಯವಾಣಿಯಾದ 14416 (ಟೆಲಿಮನಸ್) ಗೆ ಕರೆ ಮಾಡುವುದರೊಂದಿಗೆ ಸಲಹೆಗಳನ್ನು ಪಡೆಯುವ, ಜಿಲ್ಲಾಸ್ಪತ್ರೆಯ ಜಿಲ್ಲಾ ಮಾನಸಿಕ ರೋಗ ಚಿಕಿತ್ಸೆ ಕೇಂದ್ರ ಮತ್ತು ವಾಪಸಂದ್ರ ನಗರ ಆರೋಗ್ಯ ಕೇಂದ್ರದಲ್ಲಿ ಲಭ್ಯ ಸೇವೆ, ಆಸ್ಪತ್ರೆಗಳಲ್ಲಿ ಕೌನ್ಸೆಲಿಂಗ್ ಮಾಡಿ, ಚಿಕಿತ್ಸೆ ನೀಡುವುದರ ಬಗ್ಗೆ ತಿಳಿಸಲಾಯಿತು.

    *ಮನೋ ವೈದ್ಯರ ಮಾರ್ಗದರ್ಶನ
    ಮಾನಸಿಕ ಖಿನ್ನತೆ, ಆತ್ಮಹತ್ಯೆಯ ಯೋಚನೆಗಳು, ಲಕ್ಷಣಗಳು, ಚಿಕಿತ್ಸೆ ಮತ್ತು ಸವಲತ್ತುಗಳು, ಕುಟುಂಬ ಮತ್ತು ಸಮುದಾಯದ ಜವಾಬ್ದಾರಿಯ ಬಗ್ಗೆ ಮನೋ ವೈದ್ಯರು ಸಲಹೆ ಸೂಚನೆಗಳನ್ನು ನೀಡಿದರು.
    ಸದಾ ಒತ್ತಡ, ಬೇಸರ, ಕೆಲಸದಲ್ಲಿ ನಿರಾಸಕ್ತಿ, ನಿರಂತರ ಆಯಾಸ, ನಿದ್ರೆ, ಒಂಟಿಯಾಗಿ ಇರುವುದು, ಹಸಿವಿನಲ್ಲಿ ಏರು ಪೇರು, ತೂಕದಲ್ಲಿ ವ್ಯತ್ಯಾಸವು ಮಾನಸಿಕ ಖಿನ್ನತೆಯಲ್ಲಿರುವವರಲ್ಲಿ ಕಂಡು ಬರುವ ಪ್ರಮುಖ ಲಕ್ಷಣಗಳು ಎಂದು ಮನೋವೈದ್ಯೆ ಡಾ.ಎ.ಲಾವಣ್ಯ ತಿಳಿಸಿದರು. ಯಾವುದೇ ಸಮಸ್ಯೆ ಇಲ್ಲವೇ ಕಷ್ಟಕ್ಕೆ ಕುಗ್ಗದೇ ಧೈರ್ಯದಿಂದ ಎದುರಿಸಬೇಕು ಎಂದು ಮನೋವೈದ್ಯ ಡಾ.ಜಿ.ಹೇಮಂತ್ ಕುಮಾರ್ ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts