More

    ಸಶಸ್ತ್ರ ಮೀಸಲು ಪಡೆ ಎಎಸ್‌ಐ ಆತ್ಮಹತ್ಯೆ

    ಕುಂದಾಪುರ: ಅಮಾಸೆಬೈಲು ಠಾಣೆಯಲ್ಲಿ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಸಶಸ್ತ್ರ ಮೀಸಲು ಪಡೆ ಎಎಸ್‌ಐ ಶುಕ್ರವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಲಬುರಗಿಯ ನೌರುಗಂಜ್ ನಿವಾಸಿ ಮಲ್ಲಿಕಾರ್ಜುನ್ ಗುಬ್ಬಿ(56) ಆತ್ಮಹತ್ಯೆ ಮಾಡಿಕೊಂಡವರು.

    ಕೆಎಸ್‌ಆರ್‌ಪಿ ಎಎಸ್‌ಐ ಆಗಿದ್ದ ಮಲ್ಲಿಕಾರ್ಜುನ್ ಗುಬ್ಬಿ ಮೇ 16 ರಂದು ನಕ್ಸಲ್ ಪೀಡಿತ ಪ್ರದೇಶ ಅಮಾಸೆಬೈಲು ಠಾಣೆಗೆ ಭದ್ರತೆಗಾಗಿ ಬಂದಿದ್ದರು. ಗುರುವಾರ ರಾತ್ರಿ ಊಟ ಮುಗಿಸಿ ಕ್ವಾರ್ಟರ್ಸ್‌ನಲ್ಲಿ ಮಲಗಿದ್ದು, ಬೆಳಗ್ಗೆ ಕ್ವಾರ್ಟರ್ಸ್‌ನಲ್ಲಿ ಇರಲಿಲ್ಲ. ತಕ್ಷಣ ಸಿಬ್ಬಂದಿ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಡೇರಿಗೆ ಹಾಲು ಹಾಕಲು ಹೋಗುತ್ತಿದ್ದ ವ್ಯಕ್ತಿಯೋರ್ವರು ಎಎಸ್‌ಐ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಠಾಣೆಗೆ ಮಾಹಿತಿ ನೀಡಿದ್ದರು.

    29 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಲ್ಲಿಕಾರ್ಜುನ ಗುಬ್ಬಿ ಮೂರು ತಿಂಗಳ ಹಿಂದಷ್ಟೇ ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ಗೆ ವರ್ಗಾವಣೆಗೊಂಡು ಅಲ್ಲಿ ಸೇವೆ ಮುಂದುವರಿಸಿದ್ದರು. ಕೆಎಸ್‌ಆರ್‌ಪಿ ಬ್ಯಾಚ್ ಸಿಬ್ಬಂದಿಯನ್ನು ಹದಿನೈದು ದಿನಕ್ಕೊಮ್ಮೆ ನಕ್ಸಲ್ ಪ್ರದೇಶದ ಪೊಲೀಸ್ ಠಾಣೆಗಳಿಗೆ ನಿಯುಕ್ತಿಗೊಳಿಸಲಾಗುತ್ತದೆ. ಮಲ್ಲಿಕಾರ್ಜುನ್ ಅವರನ್ನು ಮೇ 16 ರಂದು ಅಮಾಸೆಬೈಲು ಠಾಣೆಯಲ್ಲಿ ಭದ್ರತೆಗಾಗಿ ನಿಯೋಜಿಸಲಾಗಿತ್ತು. ಶನಿವಾರವಷ್ಟೇ ಮಲ್ಲಿಕಾರ್ಜುನ್ ಅಮಾಸೆಬೈಲು ಠಾಣೆಯಿಂದ ಬಿಡುಗಡೆಗೊಂಡು ಮುನಿರಾಬಾದ್‌ಗೆ ತೆರಳುವವರಿದ್ದರು.

    ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದು, ಆರೋಗ್ಯ ಸಮಸ್ಯೆ ಅಥವಾ ಇನ್ನಾವುದೋ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಅಂದಾಜಿಸಲಾಗಿದ್ದು, ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts