More

    ಗ್ರಾಹಕರ ಇಷ್ಟಗಳನ್ನು ಅರಿತರಷ್ಟೇ ಯಶಸ್ಸು

    ಶಿವಮೊಗ್ಗ: ಗ್ರಾಹಕರಿಗೆ ಎಲ್ಲ ಆಯಾಮಗಳಿಂದಲೂ ಇಷ್ಟವಾಗಬಲ್ಲ ಅಂಶಗಳನ್ನು ಒಳಗೊಂಡು ಉತ್ಪನ್ನಗಳನ್ನು ಸಿದ್ಧಪಡಿಸಿದರೆ ಮಾತ್ರ ಉದ್ಯಮದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ, ಕೈಗಾರಿಕೋದ್ಯಮಿ ಎಸ್.ರುದ್ರೇಗೌಡ ಹೇಳಿದರು.

    ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ ಹಾಗೂ ಕೈಗಾರಿಕಾ ಸಂಘದ ಕೌಶಲ ಅಕಾಡೆಮಿ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ಐದು ದಿನಗಳ ಮಾರಾಟ ಮತ್ತು ಡಿಜಿಟಲ್ ಮಾರುಕಟ್ಟೆ ವ್ಯವಸ್ಥೆ ಕುರಿತ ಉಪನ್ಯಾಸಕ್ಕೆ ಚಾಲನೆ ನೀಡಿ ಮಾತನಾಡಿದರು.
    ಮಾರುಕಟ್ಟೆ ವ್ಯವಸ್ಥೆ ಕುರಿತು ಅರಿತುಕೊಂಡು ಸಂಶೋಧನೆ ನಡೆಸಬೇಕು. ಮಾರುಕಟ್ಟೆಯಲ್ಲಿರುವ ಅವಕಾಶಗಳ ಬಗ್ಗೆ ತಿಳಿದುಕೊಳ್ಳಬೇಕು. ಗ್ರಾಹಕರಿಗೆ ಉತ್ಪನ್ನಗಳನ್ನು ತಲುಪಿಸಲು ಅಗತ್ಯವಿರುವ ಎಲ್ಲ ಮಾರುಕಟ್ಟೆ ವಿಧಾನಗಳನ್ನು ಬಳಸಬೇಕು ಎಂದರು.
    ಶೇ.30 ಆರ್ಥಿಕ ಶಕ್ತಿಯನ್ನು ದೇಶಕ್ಕೆ ಕೊಡುಗೆ ನೀಡುತ್ತಿರುವ ಕ್ಷೇತ್ರ ಎಂಎಸ್‌ಎಂಇ (ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮ). ಆರ್ಥಿಕ ಶಕ್ತಿ ಬಲಪಡಿಸುವ ಜತೆಗೆ ಲಕ್ಷಾಂತರ ಕುಟುಂಬಗಳಿಗೆ ಉದ್ಯೋಗ ನೀಡುವ ಮುಖಾಂತರ ಬದುಕು ಕಟ್ಟಿಕೊಟ್ಟಿದೆ. ಎಂಎಸ್‌ಎಂಇ ಕ್ಷೇತ್ರವು ಭವಿಷ್ಯದಲ್ಲಿ ಮಹತ್ತರ ಪಾತ್ರವಹಿಸಲಿದೆ ಎಂದು ತಿಳಿಸಿದರು.
    ಎಂಎಸ್‌ಎಂಇ ಉಪನಿರ್ದೇಶಕ ಶಶಿಕುಮಾರ್ ಮಾತನಾಡಿ, ಉದ್ಯಮಿಗಳು ಬಂಡವಾಳ ಹೂಡಿ ಉತ್ಪನ್ನಗಳ ಸಿದ್ಧಪಡಿಸುವ ಜತೆಗೆ ಮಾರುಕಟ್ಟೆಯಲ್ಲಿ ಉತ್ಪನ್ನಗಳಿಗೆ ಬೇಡಿಕೆ ಸೃಷ್ಟಿಸಿಕೊಳ್ಳುವ ಮಾರುಕಟ್ಟೆ ಕೌಶಲ ಹೊಂದುವುದು ತುಂಬ ಮುಖ್ಯ ಎಂದು ಹೇಳಿದರು.
    ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ತಂತ್ರಜ್ಞಾನ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಮಾರುಕಟ್ಟೆಗೆ ಅವಶ್ಯವಿರುವ ಕೌಶಲಗಳನ್ನು ಯುವ ಜನರಲ್ಲಿ ಬೆಳೆಸುವ ದೃಷ್ಟಿಯಿಂದ ವಾಣಿಜ್ಯ ಮತ್ತು ಕೈಗಾರಿಕಾ ಸಂಘವು ಕೌಶಲ ಅಕಾಡೆಮಿ ಸ್ಥಾಪಿಸಿದೆ ಎಂದರು.
    ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ವಸಂತ್ ಹೋಬಳಿದಾರ್, ಉಪಾಧ್ಯಕ್ಷ ಬಿ.ಗೋಪಿನಾಥ್, ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್, ನಿರ್ದೇಶಕ ರಮೇಶ್ ಹೆಗ್ಡೆ, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕೌಶಲ ಅಕಾಡೆಮಿ ಸಿಇಒ ಸವಿತಾ ಮಾಧವ್, ತರಬೇತುದಾರ ಪ್ರಜ್ವಲ್ ಜೈನ್ ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts