More

    ಎಲ್ಲ ತಾಲೂಕುಗಳಲ್ಲಿ ಮಕ್ಕಳಿಗೆ ವಿಶೇಷ ಆಸ್ಪತ್ರೆ ; ಕಂದಾಯ ಸಚಿವ ಆರ್.ಅಶೋಕ್ ಭರವಸೆ

    ಕೊರಟಗೆರೆ : ಕರೊನಾ 3ನೇ ಅಲೆ ಮಕ್ಕಳಿಗೆ ಕಾಡುವ ಸಾಧ್ಯತೆಯಿದ್ದು, ಮುಂಜಾಗ್ರತಾ ಕ್ರಮವಾಗಿ ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆಯಲ್ಲಿ ಪ್ರಾಯೋಗಿಕವಾಗಿ ಮಕ್ಕಳ ಆಸ್ಪತ್ರೆ ತೆರೆಯಲು ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

    ಶುಕ್ರವಾರ ಉಪನೋಂದಣಿ ಕಚೇರಿ ಕಟ್ಟಡ ಉದ್ಘಾಟನಾ ಕಾರ್ಯಕ್ರಮದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಅಗತ್ಯವಿದ್ದರೆೆ ಎಲ್ಲ ತಾಲೂಕುಗಳಲ್ಲಿಯೂ ಮಕ್ಕಳಿಗೆ ವಿಶೇಷ ಆಸ್ಪತ್ರೆ ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದರು. ತುಮಕೂರು ಜಿಲ್ಲೆಯಲ್ಲಿ 65 ಮಕ್ಕಳ ತಜ್ಞರಿದ್ದಾರೆ, 10 ದಿನಗಳೊಳಗಾಗಿ ಮಕ್ಕಳ ವೈದ್ಯರು ಸೇರಿದಂತೆ ಎಲ್ಲ ವೈದ್ಯರಿಗೂ ಕರೊನಾ ಸೋಂಕು ತಗುಲಿದ ಸಂದರ್ಭದಲ್ಲಿ ಮಕ್ಕಳ ಆರೈಕೆ, ಔಷಧೋಪಚಾರ, ಚಿಕಿತ್ಸೆ ನೀಡುವ ಬಗ್ಗೆ ಸೂಕ್ತ ತರಬೇತಿ ಹಮ್ಮಿಕೊಳ್ಳಲು ಸೂಚಿಸಲಾಗಿದೆ ಎಂದರು.

    ಮಕ್ಕಳ ಆಸ್ಪತ್ರೆ ತೆರೆಯಲು ಔಷಧ, ಐಸಿಯು, ಆಮ್ಲಜನಕ ಹಾಸಿಗೆ, ವೆಂಟಿಲೇಟರ್ ಸೇರಿ ಅಗತ್ಯ ಚಿಕಿತ್ಸಾ ಉಪಕರಣ ಖರೀದಿಗಾಗಿ ಮತ್ತು ಮಕ್ಕಳ ಆಸ್ಪತ್ರೆಗೆ ಅಗತ್ಯವಿರುವ ಅನುದಾನವನ್ನು ವಿಪತ್ತು ನಿರ್ವಹಣಾ ನಿಧಿಯಡಿ ಕಂದಾಯ ಇಲಾಖೆಯಿಂದಲೇ ಬಿಡುಗಡೆ ಮಾಡಲಾಗುವುದು ಎಂದರು. 4 ವರ್ಷದೊಳಗಿನ ಮಕ್ಕಳು ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಚಿಕಿತ್ಸೆಗೆ ಅನುವಾಗುವಂತೆ ಮಕ್ಕಳೊಂದಿಗೆ ಪಾಲಕರೊಬ್ಬರು ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗುವುದು, ಪಾಲಕರು ಕಡ್ಡಾಯವಾಗಿ ಕರೊನಾ ಲಸಿಕೆ ಪಡೆದಿರಬೇಕು, ವರ್ಷಾಂತ್ಯದೊಳಗೆ ಅಂತ್ಯದೊಳಗೆ ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವ ವಿಶ್ವಾಸವಿದೆ ಎಂದರು. ರಾಜ್ಯದಲ್ಲಿ ಸರ್ಕಾರ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳಿಂದ ಸೋಂಕು ಇಳಿಮುಖವಾಗಿದ್ದು, ಜನ ಜೀವನ ಸಹಜ ಸ್ಥಿತಿಗೆ ಬರುತ್ತಿದೆ. ಸೋಂಕಿನ ಪ್ರಮಾಣ ಕಡಿಮೆಯಾಗಿ ಸಹಜ ಸ್ಥಿತಿಗೆ ಬಂದ ಬಳಿಕ ಜಿಲ್ಲೆಗಳಲ್ಲಿ ಹಂತಹಂತವಾಗಿ ಲಾಕ್​ಡೌನ್, ಸೆಮಿಲಾಕ್​ಡೌನ್ ತೆರವುಗೊಳಿಸುವ ಬಗ್ಗೆ ಸಿಎಂ ನಿರ್ಣಯ ತೆಗೆದುಕೊಳ್ಳಲಿದ್ದಾರೆ.

    ಆಧಾರ್ ಮಾಹಿತಿ ಆಧರಿಸಿ 40000 ಫಲಾನುಭವಿಗಳಿಗೆ ವೃದ್ಧಾಪ್ಯವೇತನ ತಲುಪಿಸಲಾಗಿದೆ. ಫಲಾನುಭವಿಗಳು ಪಿಂಚಣಿಗಾಗಿ ಅಲೆದಾಡಬಾರದೆಂಬ ದೃಷ್ಟಿಯಿಂದ ಅವರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯವನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ ಎಂದರು. ಕಂದಾಯ, ನೋಂದಣಿ, ಸರ್ವೆ ಇಲಾಖೆಗಳು ಸಮನ್ವಯತೆಯ ಕೊರತೆಯನ್ನು ನೀಗಿಸಲು ಆನ್​ಲೈನ್ ನೋಂದಣಿ ಪದ್ಧತಿ ಜಾರಿಗೆ ತರಲಾಗಿದೆಯಲ್ಲಿದೆ, ನೋಂದಣಿ ಪ್ರಕ್ರಿಯೆಯಲ್ಲಿ ವಿಧಿಸಿರುವ ನಿಬಂಧನೆಗಳನ್ನು ಸರಳೀಕರಣಗೊಳಿಸಲಾಗಿದೆ. ಯಾವುದೇ ಸರ್ಕಾರಿ ಜಮೀನಿನ ಅಕ್ರಮ ಬಳಕೆಗೆ ಅವಕಾಶ ನೀಡದಂತೆ 3 ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು ಎಂದರು.

    ಡಾ.ಜಿ.ಪರಮೇಶ್ವರ ಅವರನ್ನು ಹಾಡಿಹೊಗಳಿದ ಅಶೋಕ್ : ತಾಲೂಕಿನ ಉಪನೋಂದಣಾಧಿಕಾರಿ ಕಚೇರಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್ ಅವರು ಕಾಂಗ್ರೆಸ್ ಶಾಸಕ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಅವರನ್ನು ಹಾಡಿಹೊಗಳಿದ್ದು ಅಚ್ಚರಿ ಮೂಡಿಸಿತು. ಡಾ.ಜಿ.ಪರಮೇಶ್ವರ್ ರಾಜ್ಯ ಕಂಡ ಸರಳ, ಸಜ್ಜನಿಕೆಯ, ಅಜಾತ ಶತ್ರು ರಾಜಕಾರಣಿ. ಶುದ್ಧ ಚಿನ್ನದ ವ್ಯಕ್ತಿತ್ವದ ವ್ಯಕ್ತಿ. ಪರಮೇಶ್ವರ್ ಯಾವುದೇ ಪಕ್ಷದಲ್ಲಿದ್ದರೂ ಅವರಿಗೆ ಬೆಲೆ ಇದ್ದೇ ಇರುತ್ತದೆ, ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂಬ ಕಾರಣಕ್ಕೆ ಅವರ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಎಂದರು.ಬಹುಕೋಟಿ ವೆಚ್ಚದಲ್ಲಿ ತಾಲೂಕಿನಲ್ಲಿ ನಿಮಾಣವಾಗುತ್ತಿರುವ ಎತ್ತಿನಹೊಳೆ ಬಫರ್ ಡ್ಯಾಂನಲ್ಲಿ ಭೂಮಿ ಕಳೆದುಕೊಳ್ಳುವ ರೈತರಿಗೆ ದೊಡ್ಡಬಳ್ಳಾಪುರ ತಾಲೂಕಿಗೆ ಒಂದು ರೀತಿ ಪರಿಹಾರ, ಕೊರಟಗೆರೆ ತಾಲೂಕಿಗೆ ಒಂದು ರೀತಿ ಪರಿಹಾರ ನೀಡುತ್ತಿರುವ ಬಗ್ಗೆ ದೂರು ಕೇಳಿಬಂದಿದ್ದು ಇದನ್ನು ಪರಿಶೀಲಿಸಿ ರೈತರಿಗೆ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

    ಅಶೋಕ್ ದಕ್ಷತೆ ಇತರ ಸಚಿವರಿಗೆ ಅನುಕರಣೀಯ : ರಾಜ್ಯ ಕಂದಾಯ ನೂತನ ಅನುಷ್ಠಾನ ಕಾರ್ಯಕ್ರಮದಲ್ಲಿ ದೇಶದಲ್ಲಿ ಮುಂಚೂಣಿಯಲ್ಲಿದೆ. ಪ್ರಸ್ತುತ ರೈತರಿಗೆ ಪಹಣಿ ನೀಡುವ ಕೆಲಸ ಹಿಂದೆ ಪ್ರಾರಂಭಗೊಂಡಾಗ ಟೀಕೆ ಟಿಪ್ಪಣಿಗಳು ಬಂದವು. ಆದರೆ ಇಡೀ ದೇಶವೇ ಈಗ ಅದನ್ನು ಅನುಸರಿಸುತ್ತಿದೆ. ಅಶೋಕ್ ದಕ್ಷತೆ ಇತರ ಸಚಿವರಿಗೆ ಅನುಕರಣೀಯ ಎಂದು ಶಾಸಕ ಡಾ.ಜಿ.ಪರಮೇಶ್ವರ್ ಹೇಳಿದರು. ಪಪಂ ಅಧ್ಯಕ್ಷೆ ಮಂಜುಳಾ, ಜಿಲ್ಲಾ ನೋಂದಣಾಧಿಕಾರಿ ಸೈಯದ್ ಪಾಷಾ, ತಾಲೂಕು ಉಪ ನೋಂದಣಾಧಿಕಾರಿ ಅನಿತಾ, ಪಪಂ ಸದಸ್ಯ ಕೆ.ಆರ್.ಓಬಳರಾಜು, ಎ.ಡಿ.ಬಲರಾಮಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವತ್ಥ ನಾರಾಯಣ, ಅರಕೆರೆ ಶಂಕರ್, ಮಹಿಳಾ ಅಧ್ಯಕ್ಷೆ ಜಯಮ್ಮ, ಜಿಪಂ ಮಾಜಿ ಸದಸ್ಯ ಟಿ.ಸಿ.ಪ್ರಸನ್ನಕುಮಾರ್, ಚಿಕ್ಕರಂಗಯ್ಯ ಇದ್ದರು.

    ರಾಜ್ಯದಲ್ಲಿ ಬಗರ್​ಹುಕುಂ ಅಡಿಯಲ್ಲಿ ರೈತರ ಸಾಗುವಳಿ 5 ಲಕ್ಷ ಅರ್ಜಿಗಳು ಬಾಕಿಯಿದ್ದು, ವಿಲೇವಾರಿಗೆ ಆದ್ಯತೆ ನೀಡಲಾಗಿದೆ. ಎಲ್ಲಾ ತಾಲೂಕಿನಲ್ಲಿ ಬಗರ್​ಹುಕುಂ ಸಮಿತಿ ರಚನೆಗೆ ಚಾಲನೆ ನೀಡಲಾಗಿದೆ. ಇನಾಮ್ತಿ ಜಮೀನುಗಳ ಅರ್ಜಿ ವಿಲೇವಾರಿಗೂ ಕ್ರಮವಹಿಸಲಾಗಿದೆ. ಶೀಘ್ರದಲ್ಲಿ ಎಲ್ಲ ರೈತರಿಗೆ ಹಕ್ಕುಪತ್ರ ಸಿಗಲಿದೆ.

    | ಆರ್.ಅಶೋಕ್ ಕಂದಾಯ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts