More

    ಗಬ್ಬೆದ್ದು ನಾರುತ್ತಿವೆ ಇ-ಶೌಚಗೃಹಗಳು..!

    ಬೆಳಗಾವಿ: ನಗರದ ವಿವಿಧ ಕಡೆ ಅಳವಡಿಸಿರುವ ತಂತ್ರಜ್ಞಾನ ಆಧಾರಿತ ಹಾಗೂ ಸ್ವಯಂ ಸ್ವಚ್ಛ ಸಾಮರ್ಥ್ಯವಿರುವ ಇ-ಶೌಚಗೃಹಗಳ ನಿರ್ವಹಣೆಯೇ ಬೆಳಗಾವಿ ಮಹಾನಗರ ಪಾಲಿಕೆಗೆ ಈಗ ತಲೆನೋವಾಗಿ ಪರಿಣಮಿಸಿದೆ.

    ನಗರಕ್ಕೆ ಆಗಮಿಸುವ ಸಾರ್ವಜನಿಕರಿಗೆ ಮೂತ್ರ ಬಾಧೆ ತಪ್ಪಿಸುವ ಹಿನ್ನೆಲೆಯಲ್ಲಿ ಹಾಗೂ ತುರ್ತು ಅಗತ್ಯ ಸೌಕರ್ಯವೆಂದು ಪರಿಗಣಿಸಿ ಸ್ಮಾರ್ಟ್ ಸಿಟಿ ಯೋಜನೆಯಡಿ 1.5 ವರ್ಷದ ಹಿಂದೆ ಲಕ್ಷಾಂತರ ರೂ. ವ್ಯಯಿಸಿ ಪರಿಸರ ಸ್ನೇಹಿ ಇ- ಶೌಚಗೃಹ ನಿರ್ಮಿಸಲಾಗಿದೆ. ಆದರೆ, ನೀರು ಪೂರೈಕೆಯಿಲ್ಲದೆ ಹಾಗೂ ಸ್ವಚ್ಛತೆಯಿಲ್ಲದೆ ಶೌಚಗೃಹಗಳು ಗಬ್ಬೆದ್ದು ನಾರುತ್ತಿವೆ. ಹೀಗಾಗಿ ಇ- ಶೌಚಗೃಹದತ್ತ ಹೋಗಲು ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದಾರೆ.

    ನಿರ್ವಹಣೆ ಸಮಸ್ಯೆ: ನಗರ ವ್ಯಾಪ್ತಿಯಲ್ಲಿ ವ್ಯಾಪಾರಿಗಳು, ಸಾರ್ವಜನಿಕರು ಹಾಗೂ ಪ್ರಯಾಣಿಕರು ಸಾರ್ವಜನಿಕ ಶೌಚಗೃಹ ಸೌಲಭ್ಯವಿಲ್ಲದೆ ಸಮಸ್ಯೆ ಎದುರಿಸುತ್ತಿದ್ದರು. ಹೀಗಾಗಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಗೋವಾವೇಸ್, ಕಾಲೇಜು ರಸ್ತೆ ಸೇರಿದಂತೆ ವಿವಿಧ ಬಸ್ ತಂಗುದಾಣಗಳ ಜತೆಗೆ ಇ-ಶೌಚಗೃಹಗಳನ್ನೂ ನಿರ್ಮಿಸಲಾಗಿದೆ. ಆದರೆ, ಸೂಕ್ತ ನಿರ್ವಹಣೆಯಿಲ್ಲದೆ ಅವು ಗಬ್ಬೆದ್ದು ನಾರುತ್ತಿವೆ.

    ಪಾಲಿಕೆಗೆ ಹಸ್ತಾಂತರ: ಈಗಾಗಲೇ ಸ್ಮಾರ್ಟ್ ಸಿಟಿ ಅಧಿಕಾರಿಗಳು ನಗರದಲ್ಲಿ ನಿರ್ಮಿಸಿರುವ ಐದು ಇ-ಶೌಚಗೃಹಗಳನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸಿದ್ದಾರೆ. ಆದರೆ, ಅನುದಾನ ಕೊರತೆ ಇನ್ನಿತರ ಸಮಸ್ಯೆ ಎದುರಿಸುತ್ತಿರುವ ಪಾಲಿಕೆಗೆ ಇ- ಶೌಚಗೃಹಗಳ ನಿರ್ವಹಣೆ ತೊಡಕಾಗಿದೆ. ಒಟ್ಟಿನಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಿರುವ ಇ-ಶೌಚಗೃಹ ಸವಕರ್ಯದಿಂದ ಸಾರ್ವಜನಿಕರಿಗೆ ಯಾವುದೇ ಪ್ರಯೋಜನ ಇಲ್ಲ. ಬಸ್ ತಂಗುದಾಣದ ಪಕ್ಕದಲ್ಲಿಯೇ ಇರುವ ಇ-ಶೌಚಗೃಹದಿಂದ ನಿರಂತರ ಕೆಟ್ಟ ವಾಸನೆ ಬರುತ್ತಿರುವುದರಿಂದ ಪ್ರಯಾಣಿಕರೂ ಬಸ್ ತಂಗುದಾಣಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ.

    ಜನರಿಗೆ ಸೌಕರ್ಯ ಒದಗಿಸುವ ಯೋಜನೆಯ ಅನುಷ್ಠಾನಕ್ಕಾಗಿ ರಚನೆಯಾಗಿರುವ ಸ್ಪೆಷಲ್ ಪರ್ಪಸ್ ವೆಹಿಕಲ್ ಕಂಪನಿ ಇದ್ದೂ ಇಲ್ಲದಂತಾಗಿದೆ. ಪರಿಣಾಮ ನಗರದ ಜೀವನದ ಗುಣಮಟ್ಟ ಹೆಚ್ಚಿಸಲು ವಿನ್ಯಾಸಗೊಳ್ಳುತ್ತಿರುವ ಸ್ಮಾರ್ಟ್‌ಸಿಟಿ ಯೋಜನೆ ಇಂತಹ ಅನೇಕ ಕಾರಣಗಳಿಂದ ನಗರದಲ್ಲಿ ಸಂಪೂರ್ಣ ಸೊರಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸ್ಮಾರ್ಟ್‌ಸಿಟಿ ಯೋಜನೆಯಡಿ ನಗರದ ವಿವಿಧ ಐದು ಇ-ಶೌಚಗೃಹ ನಿರ್ಮಿಸಿ ಮಹಾನಗರ ಪಾಲಿಕೆಗೆ ಹಸ್ತಾಂತರಿಸಲಾಗಿದೆ. ಅವುಗಳನ್ನು ನಿರ್ವಹಣೆ ಮಾಡುವುದು ಪಾಲಿಕೆ ಜವಾಬ್ದಾರಿ. ಒಂದು ವೇಳೆ ಇ- ಶೌಚಗೃಹಗಳು ಹಾಳಾಗಿದ್ದರೆ ಅಥವಾ ದುರಸ್ತಿಗೆ ಬಂದಿದ್ದರೆ ಮಾತ್ರ ಸ್ಮಾರ್ಟ್ ಸಿಟಿ ಯೋಜನೆಯಡಿ ಕ್ರಮ ಕೈಗೊಳ್ಳಲಾಗುವುದು. ಸದ್ಯ ಧಾರಾಕಾರ ಮಳೆ, ಕಾರ್ಮಿಕರ ಸಮಸ್ಯೆಯಿಂದಾಗಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳು ಸ್ಥಗಿತಗೊಂಡಿವೆ. ಸಣ್ಣ ಪುಟ್ಟ ಕಾಮಗಾರಿಗಳನ್ನು ತಡಮಾಡದೆ ಕೈಗೊಳ್ಳಲಾಗಿದೆ.
    | ಶಶಿಧರ ಕುರೇರ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ, ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts