More

    ಕುಡಿಯುವ ನೀರಿಗಾಗಿ ವಾಹನ ಸಂಚಾರ ತಡೆದ ವಿದ್ಯಾರ್ಥಿಗಳು

    ಗುತ್ತಲ: ಶಾಲೆಗೆ ಸರಬರಾಜಾಗುತ್ತಿದ್ದ ಕುಡಿಯುವ ನೀರಿನ ಪೂರೈಕೆ 4 ದಿನಗಳಿಂದ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಅಂಬೇಡ್ಕರ್ ನಗರದ ಸರ್ಕಾರಿ ಪ್ರಾಥಮಿಕ ಶಾಲೆಯ ನೂರಾರು ವಿದ್ಯಾರ್ಥಿಗಳು ನೀರು ಪೂರೈಕೆಗೆ ಆಗ್ರಹಿಸಿ ಶಿರಸಿ-ಮೊಳಕಾಲ್ಮೂರ ರಸ್ತೆ ತಡೆದು ಗುರುವಾರ ಪ್ರತಿಭಟನೆ ನಡೆಸಿದರು.

    ಪಟ್ಟಣದ ಕುಡಿಯುವ ನೀರಿನ ಮುಖ್ಯ ಪೈಪ್​ಲೈನ್ ಅನ್ನು ಗ್ಯಾಸ್ ಸಿಲಿಂಡರ್ ಪೈಪ್ ಲೈನ್ ಅಳವಡಿಸುವ ವೇಳೆ ಒಡೆದಿದ್ದು, 4ದಿನವಾದರೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ದುರಸ್ತಿಗೆ ಮುಂದಾಗಲಿಲ್ಲ. ಈ ಹಿನ್ನೆಲೆಯಲ್ಲಿ ಅಂಬೇಡ್ಕರ್ ನಗರದ ನಿವಾಸಿಗಳು ಪ.ಪಂ. ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೆ, ದುರಸ್ತಿ ವಿಳಂಬವಾಗಿದ್ದು, ಕೊಳವೆ ಬಾವಿಯ ನೀರು ಪೂರೈಕೆಗೂ ಕ್ರಮ ಕೈಗೊಳ್ಳಲಿಲ್ಲ. ಇದರಿಂದ ಕಳೆದ ನಾಲ್ಕು ದಿನಗಳಿಂದ ಶಾಲೆಗೆ ನೀರು ಪೂರೈಕೆಯಾಗಿಲ್ಲ. ನಿತ್ಯ ನೀರಿನ ಸಮಸ್ಯೆಯಿಂದ ಬೇಸತ್ತ ವಿದ್ಯಾರ್ಥಿಗಳು ಶಾಲೆಯ ಪಕ್ಕದಲ್ಲಿಯೇ ಬರುವ ಶಿರಸಿ-ಮೊಳಕಾಲ್ಮೂರ (ಗುತ್ತಲ-ಹಾವನೂರ-ಮೈಲಾರ) ರಸ್ತೆಯಲ್ಲಿ ರಸ್ತೆ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ಮೇಲೆಯೇ ನಿಂತು ನಮಗೆ ನೀರು ಬೇಕೇ ಬೇಕು ಎಂದು ಘೊಷಣೆ ಕೂಗಿದರು. ಇದರಿಂದ ಈ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ವ್ಯತ್ಯಯವಾಯಿತು. ವಿದ್ಯಾರ್ಥಿಗಳ ಪ್ರತಿಭಟನೆಗೆ ಅಂಬೇಡ್ಕರ್ ನಗರ ಹಾಗೂ ವಾಲ್ಮೀಕಿ ನಗರದ ನಿವಾಸಿಗಳು ಸಾಥ್ ನೀಡಿದರು.

    ನಂತರ ಸ್ಥಳಕ್ಕೆ ಆಗಮಿಸಿದ ಪಪಂ ಮುಖ್ಯಾಧಿಕಾರಿ ಶೇಖರಪ್ಪ ಈಳಗೇರ ಅವರೊಂದಿಗೆ ಸಾರ್ವಜನಿಕರು ವಾಗ್ವಾದ ನಡೆಸಿದರು. ಪ.ಪಂ. ಸದಸ್ಯ ಪ್ರದೀಪ ಸಾಲಗೇರಿ, ಅಜ್ಜಯ್ಯ ಬಂಡಿವಡ್ಡರ ಮಾತನಾಡಿ, ಗ್ಯಾಸ್ ಪೈಪ್​ಲೈನ್ ಕಾರ್ಯ ಕೈಗೊಂಡವರು ನೀರಿನ ಪೈಪ್​ಲೈನ್ ಒಡೆದ ನಂತರ ದುರಸ್ತಿ ಮಾಡಲು ಮುಂದಾಗಲಿಲ್ಲ. ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದರೆ ಇಂಥ ಪರಿಸ್ಥಿತಿ ಬರುತ್ತಿರಲಿಲ್ಲ. ಪೈಪ್​ಲೈನ್ ಅಳವಡಿಸುವ ಕಾಮಗಾರಿ ಮುಗಿಯುವವರೆಗೆ ಪಪಂ ಸಿಬ್ಬಂದಿ ನಿಗಾ ವಹಿಸಬೇಕು ಎಂದು ಮುಖ್ಯಾಧಿಕಾರಿಗೆ ಆಗ್ರಹಿಸಿದರು.

    ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಕೆಗೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

    ಪ್ರತಿಭಟನೆಯಲ್ಲಿ ಪಪಂ ಮಾಜಿ ನಾಮ ನಿರ್ದೇಶಿತ ಸದಸ್ಯ ಅಜ್ಜಪ್ಪ ಮಲಿಯಣ್ಣನವರ, ರವಿ ಆರಿಕಟ್ಟಿ, ನೀಲಕಂಠ ಹೊನ್ನಪ್ಪನವರ, ಬಸಣ್ಣ ಪಸಗಿ, ಕುಮಾರ ಸಿದ್ದಣ್ಣನವರ, ಶಿವಪ್ಪ ಆರಿಕಟ್ಟಿ, ಹೊನ್ನಪ್ಪ ಸೂರಣಗಿ, ಚೌಡಪ್ಪ ಜಾಲಮ್ಮನವರ, ಪರಮೇಶ ಮಲ್ಲೇಶಣ್ಣನವರ, ಪುಟ್ಟಪ್ಪ ಕೋಟೆಹಾಳ, ನೀಲಪ್ಪ ಪುಟ್ಟಪ್ಪನವರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts