More

    ಶಾಲೆಯತ್ತ ವಿದ್ಯಾರ್ಥಿಗಳ ಪಾದಯಾತ್ರೆ!

    ಮುಂಡರಗಿ: ಲಾಕ್​ಡೌನ್ ಸಡಿಲಿಸಿ ಒಂದು ವಾರದ ಹಿಂದೆಯೇ ಪ್ರೌಢಶಾಲೆಯ 9 ಮತ್ತು 10ನೇ ತರಗತಿಗೆ ಸರ್ಕಾರ ಅನುಮತಿ ನೀಡಿದೆ. ಆದರೆ, ಗ್ರಾಮೀಣ ಭಾಗದಲ್ಲಿ ಪೂರ್ಣ ಪ್ರಮಾಣದಲ್ಲಿ ಬಸ್ ಸಂಚಾರ ಆರಂಭವಾಗದ ಕಾರಣ ಮಕ್ಕಳು ನಿತ್ಯ 3-4 ಕಿ.ಮೀ. ಪಾದಯಾತ್ರೆ ಮಾಡಬೇಕಾಗಿದೆ.

    ಗದಗದಿಂದ ಡಂಬಳ, ಮೇವುಂಡಿ, ಹೈತಾಪುರ ಮಾರ್ಗವಾಗಿ ತಾಲೂಕಿನ ಯಕ್ಲಾಸಪುರ ಗ್ರಾಮಕ್ಕೆ ಸಂಚರಿಸುವ ಬಸ್ ಅನ್ನು ಕೆಎಸ್​ಆರ್​ಟಿಸಿ ಗದಗ ಘಟಕ ಸ್ಥಗಿತಗೊಳಿಸಿದೆ. ಹೀಗಾಗಿ, ಯಕ್ಲಾಸಪುರ ಹಾಗೂ ಸುತ್ತಮುತ್ತಲಿನ ವಿದ್ಯಾರ್ಥಿಗಳು ಶಾಲೆಗೆ ಸರಿಯಾದ ಸಮಯಕ್ಕೆ ಹೋಗಲು ಕಷ್ಟವಾಗುತ್ತಿದೆ.

    ಹೈತಾಪುರ, ವೆಂಕಟಾಪುರ ಗ್ರಾಮಗಳ ವಿದ್ಯಾರ್ಥಿಗಳು ಯಕ್ಲಾಸಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಬರುತ್ತಾರೆ. ಈಗ ಲಾಕ್​ಡೌನ್ ಸಡಿಲಿಕೆಯಾಗಿದ್ದರೂ ಗದಗನಿಂದ ಯಕ್ಲಾಸಪುರ ಗ್ರಾಮಕ್ಕೆ ಬಸ್ ಸಂಚಾರ ಆರಂಭಿಸಿಲ್ಲ. ನಿಗದಿತ ಸಮಯಕ್ಕೆ ಬಸ್ ಸೌಲಭ್ಯವಿಲ್ಲದ್ದರಿಂದ ಕೆಲ ವಿದ್ಯಾರ್ಥಿಗಳನ್ನು ಪಾಲಕರು ಬೈಕ್​ನಲ್ಲಿ ಕರೆದುಕೊಂಡು ಬಂದರೆ ಮತ್ತೆ ಕೆಲವು ವಿದ್ಯಾರ್ಥಿಗಳು ನಡೆದುಕೊಂಡು ಹೋಗಬೇಕಾಗಿದೆ.

    ಮುಂಡರಗಿ ಪಟ್ಟಣದ ಕೆಎಸ್​ಆರ್​ಟಿಸಿ ಘಟಕದಿಂದ ಯಕ್ಲಾಸಪುರಕ್ಕೆ ಬಸ್​ಗಳ ಸೌಕರ್ಯವಿದೆ. ಆದರೆ, ಶಾಲೆ ಸಮಯಕ್ಕೆ ಇಲ್ಲ. ಗದಗನಿಂದ ಯಕ್ಲಾಸಪುರಕ್ಕೆ ಬರುವ ಬಸ್ ಮಕ್ಕಳ ಶಾಲೆ ಸಮಯಕ್ಕೆ ಸರಿಯಾಗಿ ಬರುವಂತೆ ಕ್ರಮ ಕೈಗೊಂಡರೆ ವ್ಯಾಪಾರ-ವಹಿವಾಟಿಗೆ ಗದಗಿಗೆ ತೆರಳುವ ವಿವಿಧ ಗ್ರಾಮದ ಜನರಿಗೆ, ರೈತರಿಗೂ ಅನುಕೂಲವಾಗಲಿದೆ. ಇನ್ನು ಹೈತಾಪುರ, ಯಕ್ಲಾಸಪುರ ಗ್ರಾಮಗಳು ಮೇವುಂಡಿ ಗ್ರಾ.ಪಂ. ವ್ಯಾಪ್ತಿಗೆ ಒಳಪಡುತ್ತವೆ. ಗ್ರಾ.ಪಂ. ಮತ್ತು ಕೆವಿಜಿ ಬ್ಯಾಂಕ್ ವ್ಯವಹಾರಕ್ಕೆ ಎರಡು ಗ್ರಾಮಸ್ಥರು ಮೇವುಂಡಿಗೆ ತೆರಳುತ್ತಾರೆ. ಗದಗನಿಂದ ಯಕ್ಲಾಸಪುರಕ್ಕೆ ಬಸ್ ಆರಂಭಿಸುವುದರಿಂದ ಶಾಲೆ ಮಕ್ಕಳ ಜೊತೆಗೆ ಗ್ರಾಮಸ್ಥರ ವ್ಯವಹಾರಕ್ಕೂ ಅನುಕೂಲವಾಗಲಿದೆ.

    ಗದಗನಿಂದ ಮೇವುಂಡಿ ಮಾರ್ಗವಾಗಿ ಯಕ್ಲಾಸಪುರಕ್ಕರೆ ಬಸ್ ಸಂಚರಿಸುವುದರಿಂದ ಶಾಲೆ ತರಗತಿ ಸಮಯಕ್ಕೆ ಹೋಗುವುದಕ್ಕೆ ಅನುಕೂಲವಾಗುತ್ತದೆ. ಸರಿಯಾದ ಸಮಯಕ್ಕೆ ಬಸ್ ಇಲ್ಲದ ಕಾರಣ ಶಾಲೆಗೆ ನಡೆದುಕೊಂಡು ಹೋಗಬೇಕಾಗಿದೆ. ಸಮಯಕ್ಕೆ ಸರಿಯಾಗಿ ತರಗತಿಗೆ ಹಾಜರಾಗಲು ಆಗುತ್ತಿಲ್ಲ.

    | ಅನಸೂಯಾ ಕವಲೂರ, ಸುದೀಪ ಹಲವಾಗಲಿ, ವಿದ್ಯಾರ್ಥಿಗಳು

    ಗದಗನಿಂದ ಯಕ್ಲಾಸಪುರಕ್ಕೆ ಬರುತ್ತಿದ್ದ ಬಸ್​ನಿಂದ ಶಾಲೆ ಮಕ್ಕಳು ಮತ್ತು ಗ್ರಾಮಸ್ಥರಿಗೆ ತುಂಬಾ ಅನುಕೂಲವಾಗಿತ್ತು. ಆದರೆ, ಲಾಕ್​ಡೌನ್ ಸಂದರ್ಭದಲ್ಲಿ ಗ್ರಾಮಕ್ಕೆ ಬಸ್ ಸಂಚಾರ ಸ್ಥಗಿತಗೊಳಿಸಿದ್ದರಿಂದ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಗದಗನಿಂದ ಬಸ್ ಸಂಚಾರ ಆರಂಭಿಸಿ ಶಾಲೆ ವಿದ್ಯಾರ್ಥಿಗಳಿಗೆ ಮತ್ತು ಗ್ರಾಮಸ್ಥರಿಗೂ ಅನುಕೂಲ ಮಾಡಿಕೊಡಬೇಕು.

    | ಮಹಾಂತೇಶ ಮುಗಳಿ, ಯಕ್ಲಾಸಪುರ ಗ್ರಾಮಸ್ಥ

    ಗದಗನಿಂದ ಡಂಬಳ, ಮೇವುಂಡಿ, ಹೈತಾಪುರ ಮಾರ್ಗವಾಗಿ ಯಕ್ಲಾಸಪುರ ಗ್ರಾಮಕ್ಕೆ ಪುನಃ ಬಸ್ ಸಂಚಾರ ಆರಂಭಿಸುವ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗುತ್ತದೆ. ಶಾಲಾವಧಿ ಸಮಯಕ್ಕೆ ಯಕ್ಲಾಸಪುರಕ್ಕೆ ಬಸ್ ಬಿಡುವುದರ ಬಗ್ಗೆ ರ್ಚಚಿಸಿ ಸಮಸ್ಯೆ ಸರಿಪಡಿಸಲು ಪ್ರಯತ್ನಿಸಲಾಗುತ್ತದೆ.

    | ಎಚ್.ಟಿ. ಬಳೂಟಗಿ, ಕೆಎಸ್​ಆರ್​ಟಿಸಿ ಘಟಕ ವ್ಯವಸ್ಥಾಪಕ, ಮುಂಡರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts