More

    ಸಮಾಜವನ್ನು ಶೈಕ್ಷಣಿಕವಾಗಿ ಮುಂದೆ ತರಲು ಶ್ರಮಿಸಿ

    ರಾಯಚೂರು: ಸಮಾಜವನ್ನು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಮುಂದೆ ತರುವ ನಿಟ್ಟಿನಲ್ಲಿ ಸಮಾಜದ ಪ್ರತಿಯೊಬ್ಬರು ಶ್ರಮಿಸಬೇಕು. ಹಾಗಿದ್ದಾಗ ಮಾತ್ರ ಸಮಾಜ ಅಭಿವೃದ್ಧಿಯತ್ತ ಸಾಗಲು ಸಾಧ್ಯವಾಗಲಿದೆ ಎಂದು ಸಹಾಯಕ ಆಯುಕ್ತ ಎಸ್.ಎಸ್.ಸಂಪಗಾವಿ ಹೇಳಿದರು.
    ಸ್ಥಳೀಯ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತದಿಂದ ಶುಕ್ರವಾರ ಏರ್ಪಡಿಸಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರು ಸವಿತಾ ಮಹರ್ಷಿ ತತ್ತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
    ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವ ನಿಟ್ಟಿನಲ್ಲಿ ಉತ್ತಮ ಸಂದೇಶಗಳನ್ನು ನೀಡಿ, ಕ್ಷೌರಿಕ ಸಮಾಜದ ಉದ್ದಾರಕ್ಕಾಗಿ ಶ್ರಮಿಸಿ ಮೂಲ ಪುರುಷ ಸವಿತಾ ಮಹರ್ಷಿಯಾಗಿದ್ದಾರೆ. ಸಮಾಜದ ಜನರು ಅವರು ಹಾಕಿಕೊಟ್ಟ ಹಾದಿಯಲ್ಲಿ ಸಾಗಬೇಕು ಎಂದು ತಿಳಿಸಿದರು.
    ತಹಸೀಲ್ದಾರ್ ಸುರೇಶ ವರ್ಮಾ ಮಾತನಾಡಿ, ಮನುಕುಲದ ಉದ್ಧಾರಕ್ಕಾಗಿ ಜನ್ಮವೆತ್ತಿ, ಸಮ ಸಮಾಜದ ಸಂದೇಶವನ್ನು ಸಾರುವ ಮೂಲಕ ಮನುಷ್ಯನ ದೈಹಿಕ ಮತ್ತು ಮಾನಸಿಕ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಸವಿತಾ ಮಹರ್ಷಿಗಳು ಕೆಲಸ ಮಾಡಿದ್ದಾರೆ ಎಂದರು.
    ಸವಿತಾ ಸಮಾಜದ ತಾಲೂಕು ಅಧ್ಯಕ್ಷ ಭೀಮೇಶ ಮಾತನಾಡಿ, ರಥಸಪ್ತಮಿ ದಿನದಂದು ಜಗತ್ತಿಗೆ ಬಂದ ಸವಿತಾ ಮಹರ್ಷಿಗಳು ಸಮಾಜದಲ್ಲಿ ಎಲ್ಲರೂ ಒಂದೇ ಎಂಬ ಸಂದೇಶವನ್ನು ಸಾರಿದರು. ಅವರ ಜೀವನ ಹಾಗೂ ಸಂದೇಶಗಳನ್ನು ಮಕ್ಕಳಿಗೆ ತಿಳಿಸುವ ಮೂಲಕ ಅವರನ್ನು ಉತ್ತಮ ಪ್ರಜೆಗಳನ್ನಾಗಿ ಮಾಡಬೇಕು ಎಂದು ಹೇಳಿದರು.
    ಇದಕ್ಕೂ ಮುಂಚೆ ಸವಿತಾ ಮಹರ್ಷಿ ವೃತ್ತದಲ್ಲಿ ಪೂಜೆ ಸಲ್ಲಿಸಿದ ನಂತರ ರಂಗಮಂದಿರದವರೆಗೆ ಸವಿತಾ ಮಹರ್ಷಿ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಳಾ ನಾಯಕ, ಸಮಾಜದ ಮುಖಂಡರಾದ ರಾಘವೇಂದ್ರ ಇಟಗಿ, ವಿಜಯಭಾಸ್ಕರ ಇಟಗಿ, ಸುಮಾ ಗಸ್ತಿ, ನರಸರೆಡ್ಡಿ, ಆರ್.ನಾಗರಾಜ, ವಿ.ಗೋವಿಂದ, ವೆಂಕಟೇಶ, ಕೆ.ಶ್ರೀನಿವಾಸ, ರಘುಕುಮಾರ, ಗಾಯತ್ರಿ, ವೀರೇಶ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts