More

    ಶಿರಸಿಯಲ್ಲೊಂದು ಸಹಕಾರಿ ಯಶೋಗಾಥೆ

    ಖಾಸಗಿ ಹಾಗೂ ಸರ್ಕಾರಿ ಮಧ್ಯವರ್ತಿಗಳ ಕೈಯಲ್ಲಿ ಸಿಲುಕಿ ಹೈರಾಣಾಗಿರುವ ಗ್ರಾಮೀಣ ಕೃಷಿಕರನ್ನು ಸೇರಿಸಿಕೊಂಡು ಸಹಕಾರಿ ಮಂತ್ರ ಪಠಿಸುವ ಸೂಕ್ತ ವ್ಯಕ್ತಿಗಳು ಪ್ರತಿ ಊರಲ್ಲೂ ಸಿಕ್ಕಲ್ಲಿ ಭಾರತದ ಕೃಷಿಕರ ಬದುಕಿಗೆ ವರದಾನವಾಗಬಲ್ಲ ಚೇತೋಹಾರಿ ಮಾರ್ಗವೊಂದು ತನ್ನಿಂತಾನೇ ತೆರೆದುಕೊಳ್ಳಬಹುದು.

    ಶಿರಸಿಯಲ್ಲೊಂದು ಸಹಕಾರಿ ಯಶೋಗಾಥೆಎಂಬತ್ತರ ದಶಕದಲ್ಲಿ ನನ್ನ ಕಾಲೇಜು ಪ್ರಾಧ್ಯಾಪಕರಾದ, ಸಹಕಾರಿ ತತ್ವಗಳನ್ನು ಪ್ರತಿಪಾದಿಸುತ್ತಿದ್ದ ಮುತ್ಸದ್ದಿ, ಶಿರಸಿ ಕಾಲೇಜಿನ ಆಗಿನ ಪ್ರಾಂಶುಪಾಲ ಹಾಗೂ ಪ್ರಖರ ವಾಗ್ಮಿಯಾಗಿದ್ದ ಎಲ್. ಟಿ. ಶರ್ಮಾ ಅವರು ಹೇಳುವ ಮಾತೊಂದು ನನ್ನ ಮನಸ್ಸಿಗೆ ನಾಟಿತ್ತು- “In India co operative movement has failed, but it must
    succeed’’. ಅತ್ತ ಬಂಡವಾಳಶಾಹಿ ಅರ್ಥವ್ಯವಸ್ಥೆಯೂ ಅಲ್ಲದ ಪೂರ್ಣ ಸರ್ಕಾರಿ ಸ್ವಾಮ್ಯದ ಅರ್ಥವ್ಯವಸ್ಥೆಯೂ ಅಲ್ಲದ ಎಡಬಿಡಂಗಿ ಮಿಶ್ರ ಆರ್ಥಿಕ ವ್ಯವಸ್ಥೆಯನ್ನು ಅಪ್ಪಿಕೊಂಡು mixed economy is confused economy ಎಂಬ ಟೀಕೆಗೊಳಗಾಗಿದ್ದ ಭಾರತದ ಅರ್ಥವ್ಯವಸ್ಥೆಗೆ ಸೂಕ್ತ ಪರ್ಯಾಯ ವ್ಯವಸ್ಥೆಯಾಗಿ ಒದಗಿ ಬರಲು ಶಕ್ತಿ ಇರುವುದು ಸಹಕಾರಿ ರಂಗಕ್ಕೆ ಮಾತ್ರ ಎಂಬ ತತ್ವವನ್ನು ಪ್ರತಿಪಾದಿಸಿದ ಅನೇಕ ಅರ್ಥಶಾಸ್ತ್ರಜ್ಞರು ಅಂದು ಪ್ರಬಲವಾಗಿದ್ದರು. ಗುಜರಾತಿನ ಅಮುಲ್ ಎಂಬ ಸಹಕಾರಿ ಸಂಸ್ಥೆ ಸಾಧಿಸಿದ ಸ್ಥಿರವಾದ ಅಪೂರ್ವ ಯಶಸ್ಸನ್ನು ಕಂಡ ಅನೇಕರು ಸಹಕಾರಿ ತತ್ವಕ್ಕೆ ಮಾರುಹೋಗಿದ್ದರು. ನಮ್ಮ ದೇಶದ ಪ್ರಜಾಪ್ರಭುತ್ವ ಮಾದರಿಯ ಆಡಳಿತಕ್ಕೂ ದೇಶದಲ್ಲಿ ಮನೆ ಮಾಡಿಕೊಂಡಿದ್ದ ಅನಕ್ಷರತೆ, ಜನಸಂಖ್ಯಾ ಸ್ಪೋಟ, ಬಡತನ, ಕೃಷಿಕ್ಷೇತ್ರದ ಬಿಕ್ಕಟ್ಟು, ದಲ್ಲಾಳಿಗಳ ಹಿಡಿತ, ಮಾರುಕಟ್ಟೆಯ ಅವ್ಯವಹಾರಗಳು ಇವುಗಳಿಗೆಲ್ಲ ಸೂಕ್ತ ಪರಿಹಾರದ ಒಂದೇ ಮಾಗೋಪಾಯವೆಂದರೆ ಸಹಕಾರಿ ತತ್ವವನ್ನು ಬಲಪಡಿಸುವುದು ಎಂಬುದು ಅಂದಿಗೂ ಇಂದಿಗೂ ಅರ್ಥಶಾಸ್ತ್ರಜ್ಞರ ವಾದವಾಗಿದೆ.

    ಅಂದು ಅರ್ಥಶಾಸ್ತ್ರವನ್ನು ಅಭ್ಯಸಿಸುತ್ತಿದ್ದ ವಿದ್ಯಾರ್ಥಿಗಳನೇಕರ ಕಿವಿಯ ಮೇಲೆ ಆಗಾಗ ಬೀಳುತ್ತಿದ್ದ ಈ ಮಾತು ಶಿರಸಿಯಲ್ಲಿಯೇ ಸಹಕಾರಿ ತತ್ವದ ಯಶೋಗಾಥೆಯೊಂದರ ಅನಾವರಣವಾಗಿದೆ ಎಂಬುದನ್ನು ಮನಗಂಡು ಹೆಮ್ಮೆಪಡುವಂತಾಗಿದ್ದು ಹಳೆಯ ಮಾತು.

    ಉತ್ತರ ಕನ್ನಡ ಜಿಲ್ಲೆಯ ಶಿರಸಿ ಪಟ್ಟಣ ವಾಣಿಜ್ಯ ಬೆಳೆಗಳಾದ ಅಡಕೆ, ಯಾಲಕ್ಕಿ, ಕಾಳುಮೆಣಸುಗಳ ವ್ಯಾಪಾರೀ ಸ್ಥಳವಾಗಿ ಪರಿಣಮಿಸಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಮಧ್ಯಮ ಹಾಗೂ ಚಿಕ್ಕ ಹಿಡುವಳಿದಾರರೇ ತುಂಬಿದ್ದ ಅಡಕೆ ಕೃಷಿಕರು ಶಿರಸಿ ಪಟ್ಟಣಕ್ಕೆ ಬೆಳೆಗಳನ್ನು ತಂದು ಮಾರುತ್ತಿದ್ದ ಪರಿಸ್ಥಿತಿ ತೃಪ್ತಿದಾಯಕವಾಗಿ ಏನೂ ಇರಲಿಲ್ಲ. ಅನುವಂಶೀಯವಾಗಿ ಅಡಕೆ ದಲ್ಲಾಳಿಗಳಾಗಿದ್ದ ಅನೇಕ ಬಲಾಢ್ಯ ಶ್ರೀಮಂತರ ಬಳಿ ಬೆಳೆಯನ್ನು ವಿಕ್ರಯಿಸಿ ತಮ್ಮದೇ ಬೆಳೆಯ ಹಣವನ್ನು ಪಡೆಯಲು ಸಾಲುಗಟ್ಟಿ ನಿಂತು ಸಂಜೆ ಆಗುವಾಗ ‘ಹಣ ತಂದಿದ್ದು ಖಾಲಿಯಾಗಿದೆ ನಾಳೆ ಬನ್ನಿ’ ಎಂಬ ಮಾತನ್ನೋ, ‘ಈಗೆಂತಕಾ ನಿಂಗೆ ಹತ್ತು ಸಾವಿರ ರೂಪಾಯಿ? ಮುಂದಿನ ತಿಂಗಳು ನೋಡೋಣ’ ಎಂಬ ದಬಾವಣೆಯನ್ನೋ ಕೇಳಿಕೊಂಡು ಮುಖ ತಗ್ಗಿಸಿ ನಿಲ್ಲುತ್ತಿದ್ದ ಅನಕ್ಷರಸ್ಥ ಮುಗ್ಧ ಬೆಳೆಗಾರರು ಪಟ್ಟಣದುದ್ದಕ್ಕೂ ಕಂಡುಬರುತ್ತಿದ್ದರು. ವಾಣಿಜ್ಯ ಚಟುವಟಿಕೆಗಳು ಹಳ್ಳಿಗಳನ್ನು ಇನ್ನೂ ಪ್ರವೇಶಿಸದಿದ್ದ ಕಾಲದಲ್ಲಿ ಬಡತನವನ್ನು ನಿಭಾಯಿಸುತ್ತ ಗೌರವ ಕಾಯ್ದುಕೊಳ್ಳುತ್ತ ಹಿತಮಿತವಾದ ಸಂಸಾರಗಳನ್ನು ಸಾಗಿಸುವ ಹೊಣೆಗಾರಿಕೆ ಅಂದಿನ ಕೃಷಿಕ ಮಹಿಳೆಯರ ಮೇಲೆ ಇತ್ತು. ಖಾಸಗಿ ವ್ಯಾಪಾರಿಗಳ ಹಿಡಿತದಿಂದ ರೈತರನ್ನು ಕಾಪಾಡಿ ಸೂಕ್ತ ಬೆಲೆ, ಸೌಲಭ್ಯಗಳನ್ನು ಒದಗಿಸುವ ಸಾಮರ್ಥ್ಯವಿರುವ ಸಹಕಾರಿ ಸಂಸ್ಥೆಗಳಿಗೆ ಅಂದು ಎಲ್ಲಿಲ್ಲದ ಪ್ರಾಶಸ್ಱ ಪ್ರಾಪ್ತವಾಗಿತ್ತು. ಶಿರಸಿ ಪಟ್ಟಣದಲ್ಲಿಯೇ ಇಂಥದ್ದೊಂದು ಶ್ರೇಷ್ಠ ಹಿರಿಮೆಯನ್ನು ಸ್ಥಾಪಿಸಿದ ಸಹಕಾರಿ ಸಂಸ್ಥೆಯೊಂದು ಸದ್ದಿಲ್ಲದೆ ಕೆಲಸ ಮಾಡತೊಡಗಿತ್ತು. ಅದೇ ತೋಟಗಾರ್ಸ್ ಕೋ ಆಪರೇಟಿವ್ ಸೇಲ್ ಸೊಸೈಟಿ. ಜನಪ್ರಿಯವಾಗಿದ್ದು ಟಿಎಸ್​ಎಸ್ ಎಂಬ ಹೆಸರಿನಲ್ಲಿ.

    ನಮ್ಮ ದೇಶದಲ್ಲಿ ಬೇರೆ ಬೇರೆ ನಿರ್ದಿಷ್ಟ ಉದ್ದೇಶಗಳಿಗಾಗಿ ಸ್ಥಾಪಿಸಲಾದ ಅನೇಕ ಸಹಕಾರ ಸಂಘಗಳು ಇವೆ. ಆದರೆ ಸ್ಥಾಪಿತ ಮೂಲ ಉದ್ದೇಶವನ್ನು ಯಶಸ್ವಿಯಾಗಿ ಪೂರೈಸುವುದರ ಜೊತೆಗೆ ಸದಸ್ಯರ ಅಗತ್ಯಗಳ ಈಡೇರಿಕೆಗಾಗಿ ವೈವಿಧ್ಯಮಯ ಸೇವೆಗಳನ್ನು ಸಮರ್ಥವಾಗಿ ಒದಗಿಸುವ ಮೂಲಕ ಸಹಕಾರಿ ಕ್ಷೇತ್ರದಲ್ಲಿ ವಿಶಿಷ್ಟವಾಗಿ ಗುರುತಿಸಲ್ಪಡುತ್ತಿರುವ ಹಾಗೂ ಇತರೆ ಸಹಕಾರಿ ಸಂಘಗಳಿಗೆ ಮಾದರಿಯಾಗಿರುವ ಸಂಸ್ಥೆ ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ ಎನ್ನಬಹುದು.

    1923ರಲ್ಲಿ ಅಡಕೆಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಮುಖ್ಯ ಉದ್ದೇಶದೊಂದಿಗೆ ಆರಂಭಗೊಂಡ ಸಂಘವು ಇಂದು ಅಡಕೆ, ಕಾಳುಮೆಣಸು, ಯಾಲಕ್ಕಿ ಇತ್ಯಾದಿ ತೋಟದ ಬೆಳೆಗಳಿಗೆ ಪಾರದರ್ಶಕ ಮಾರುಕಟ್ಟೆ ವ್ಯವಸ್ಥೆ, ಸದಸ್ಯರು ಸಂಘದ ಮೂಲಕ ಮಾಡುವ ವಿಕ್ರಿ ಆಧರಿಸಿ ಸಾಲ ಸೌಲಭ್ಯ, ಸದಸ್ಯರಿಂದ ಆಕರ್ಷಕ ಬಡ್ಡಿ ದರದಲ್ಲಿ ಠೇವಣಿ ಸಂಗ್ರಹಣೆ, ದೈನಂದಿನ ಅಗತ್ಯದ ದಿನಸಿ ಸಾಮಗ್ರಿಗಳಿಂದ ಹಿಡಿದು ಕೃಷಿ ಸಲಕರಣೆಗಳು, ರಸಗೊಬ್ಬರ, ಕೀಟನಾಶಕಗಳು, ಪಶು ಆಹಾರ, ಗೃಹೋಪಯೋಗಿ ಸಾಧನಗಳು, ನೀರಾವರಿ ಯಂತ್ರೋಪಕರಣಗಳು ಇತ್ಯಾದಿಗಳನ್ನು ಸ್ಪರ್ಧಾತ್ಮಕ ದರದಲ್ಲಿ ಸದಸ್ಯರಿಗೆ ಪೂರೈಸುವ ವ್ಯವಸ್ಥೆ ಹೊಂದಿದೆ. ಅಡಕೆ ದರ ಸ್ಥಿರೀಕರಣಕ್ಕಾಗಿ ಖರೀದಿ, ಖರೀದಿಸಿದ ಅಡಕೆಯನ್ನು ಟಿಎಸ್​ಎಸ್ ಬ್ರಾ್ಯಂಡ್​ನಲ್ಲಿ ಮಾರಾಟ ಮಾಡುವುದು, ಮೌಲ್ಯವರ್ಧಿತ ಉತ್ಪನ್ನವಾಗಿ ಪರಿವರ್ತಿಸಿ ಮಾರಾಟ ಮಾಡುವುದು, ಅಕ್ಕಿ ಗಿರಣಿ ವ್ಯವಸ್ಥೆ, ಅತಿಥಿಗೃಹ, ಸರಕು ಸಾಗಾಣಿಕೆ ವಾಹನಗಳ ವ್ಯವಸ್ಥೆ, ಮಾರುಕಟ್ಟೆ ಮಾಹಿತಿ ಪಡೆಯಲು ಎಸ್​ಎಂಎಸ್ ಸೇವೆ… ಹೀಗೆ ಸಂಘ ನೀಡುತ್ತಿರುವ ಸೇವೆಗಳ ಯಾದಿ ಬೆಳೆಯುತ್ತಲೇ ಇದೆ.

    ಸಂಘವು ಕಳೆದ ಐದಾರು ವರ್ಷಗಳಿಂದೀಚೆಗೆ ಸಾಂಪ್ರದಾಯಿಕ ದಲಾಲಿ ವಹಿವಾಟನ್ನು ವಿಸ್ತರಿಸಿರುವುದು ಗಮನಾರ್ಹ. ಇತ್ತಿಚಿನ ಬೆಳವಣಿಗೆ ಎಂದರೆ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ತಾಲೂಕುಗಳಾದ ಶಿರಸಿ, ಸಿದ್ದಾಪುರ ಹಾಗೂ ಯಲ್ಲಾಪುರಗಳಲ್ಲಿ ಸೂಪರ್ ಮಾರ್ಕೆಟ್​ಗಳನ್ನು ಪ್ರಾರಂಭಿಸುವುದರ ಮೂಲಕ ಸದಸ್ಯರ ಅಗತ್ಯದ ಗೃಹೋಪಯೋಗಿ ಸಾಮಗ್ರಿಗಳು, ಕಿರಾಣಿ ಸಾಮಗ್ರಿಗಳು ಹಾಗೂ ಕೃಷಿ ಅಗತ್ಯಗಳು ಒಂದೆಡೆ ಸಿಗುವಂತೆ ಮಾಡಿದೆ. ಈ ಮೂಲಕ ಖಾಸಗಿ ವರ್ತಕರ ಕೈಯಲ್ಲಿ ರೈತರ ಶೋಷಣೆಯನ್ನು ತಪ್ಪಿಸುವ ಪ್ರಯತ್ನದಲ್ಲಿದೆ. ಸಹಕಾರಿ ತತ್ವವೇ ತಾನು ಎಲ್ಲರಿಗಾಗಿ ಎಲ್ಲರೂ ತನಗಾಗಿ ಎಂಬ ಉದಾರ ಮಂತ್ರದ ಅನುಷ್ಠಾನ.

    ಉತ್ತರ ಕನ್ನಡ ಜಿಲ್ಲೆಯ ಅಡಕೆ ಕೃಷಿಕರ ಮನೆಯಲ್ಲಿ ದೇವರ ಫೋಟೋದ ಹಾಗೆಯೇ ಜಗಲಿಯಲ್ಲಿ ಇನ್ನೊಂದು ಫೋಟೋ ಇರುತ್ತದೆ. ಅದು ಸಹಕಾರಿ ಸಾಧಕ ಕಡವೆ ಶ್ರೀಪಾದ ಹೆಗಡೆಯವರದ್ದು. 1952 ರಿಂದ 1995ರ ತನಕದ ಅತಿ ದೀರ್ಘ ಸಮಯದವರೆಗೆ ಕಡವೆಯವರ ಮುಂದಾಳತ್ವದಲ್ಲಿ ಟಿಎಸ್​ಎಸ್ ತನ್ನ ಸುವರ್ಣ ಸಮಯವನ್ನು ದಾಖಲಿಸಿತು. 1972 ರಲ್ಲಿ ಅಡಕೆ ಬೆಳೆಗಾರರ ಹಿತರಕ್ಷಣೆಗಾಗಿಯೆ ಜನ್ಮ ತಾಳಿದ ಕ್ಯಾಂಪ್ಕೋ ಸ್ಥಾಪನೆಯಲ್ಲಿಯೂ ಕಡವೆಯವರು ಪರಿಶ್ರಮ ವಹಿಸಿದ್ದರು. 1995 ರಿಂದ ಈಚೆಗೆ ಶೀಗೆಹಳ್ಳಿ ಶಾಂತಾರಾಮ ಹೆಗಡೆ ನೇತೃತ್ವದಲ್ಲಿ ಟಿಎಸ್​ಎಸ್ ಕಡವೆಯವರು ಹಾಕಿಕೊಟ್ಟ ಪಥದಲ್ಲಿಯೇ ಮುಂದುವರಿದು ಬಂದಿದೆ. 30,000ಕ್ಕೂ ಮಿಕ್ಕ ಸದಸ್ಯರನ್ನು ಹೊಂದಿರುವ ಈ ಸಹಕಾರಿ ಸಂಸ್ಥೆ ಭಾರತದ ಸಹಕಾರಿ ಪಟದಲ್ಲಿ ವಿಶಿಷ್ಟ ಸ್ಥಾನ ಗಳಿಸಿದೆ. ಬೆಳೆಗಾರರ ಬದುಕಿಗೆ ಬೇಕಾಗುವ ಎಲ್ಲ ಸವಲತ್ತುಗಳನ್ನು ಹೊಂದಿದ್ದು ವಾರ್ಷಿಕ 790 ಕೋಟಿ ರೂ. ವಹಿವಾಟು ಹೊಂದಿದೆ.

    ಸಹಕಾರಿ ಸಂಘಗಳ ಯಶಸ್ಸಿನ ಸೂತ್ರ ಇರುವುದು ಸದಸ್ಯರ ನಂಬಿಕೆಯನ್ನು ಗಳಿಸುವುದರಲ್ಲಿ. ಈ ನಂಬಿಕೆ ಬರುವುದು ಸಂಘದ ಚಟುವಟಿಕೆಗಳಲ್ಲಿ ಪಾಲಿಸಲಾಗುವ ಪಾರದರ್ಶಕತೆಯಿಂದಾಗಿ. ಟಿಎಸ್​ಎಸ್ ಇದರಿಂದಾಗಿ ಮನೆಮಾತಾಗಿದೆ.

    ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಸದಸ್ಯರಿಗೆ ಆಗುವ ಶೋಷಣೆ ತಪ್ಪಿಸಲು ಮಧ್ಯವರ್ತಿಗಳನ್ನು ನಿವಾರಿಸುವ ಉದ್ದೇಶದಿಂದ ಬಹುತೇಕ ವಸ್ತುಗಳನ್ನು ತಯಾರಿಕಾ ಹಂತದಿಂದ ಖರೀದಿಸಿ ಸದಸ್ಯರಿಗೆ ಕಡಿಮೆ ದರದಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳುತ್ತಿರುವ ಸಂಸ್ಥೆ ಅಡಕೆ, ತಂಬಾಕುರಹಿತ ಸಿಹಿ ಅಡಿಕೆ ಪುಡಿ, ಪಶು ಆಹಾರ, ಸಾವಯವ ಗೊಬ್ಬರ, ದಿನಸಿಗಳು, ಕೃಷಿಸುಣ್ಣ, ಮೈಲುತುತ್ತ, ಅಗರಬತ್ತಿ, ಉಪ್ಪಿನಕಾಯಿ, ಬೆಲ್ಲ, ಮಕ್ಕಳ ಆಹಾರ, ಸೋಪು… ಹೀಗೆ ಅನೇಕ ವಸ್ತುಗಳನ್ನು ಸ್ವಂತ ಬ್ರಾಂಡಿನಲ್ಲಿ ತಯಾರಿಸುವ ಮೂಲಕ ಇನ್ನೊಂದು ಹೆಜ್ಜೆ ಮುಂದಿಟ್ಟಿದೆ.

    ಸೂಪರ್ ಮಾರ್ಕೆಟ್​ನಲ್ಲಿ ಜನೌಷಧಿ ಕೇಂದ್ರ ತೆರೆಯಲಾಗಿದೆ. ಇದರ ಜೊತೆಯಲ್ಲಿ ಬ್ರಾ್ಯಂಡೆಡ್ ಔಷಧಗಳನ್ನು ಕಡಿಮೆ ದರದಲ್ಲಿ ಪೂರೈಸಲಾಗುತ್ತಿದೆ. ಔಷಧ ತಯಾರಕರೊಂದಿಗೆ ಒಪ್ಪಂದ ಮಾಡಿಕೊಂಡು ತನ್ನ ಸ್ವಂತ ಬ್ರಾ್ಯಂಡ್​ನಲ್ಲಿ ಔಷಧಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು ಕಾಯಂ ಔಷಧ ತೆಗೆದುಕೊಳ್ಳಬೇಕಾಗಿರುವ ರಕ್ತದೊತ್ತಡ, ಕೊಬ್ಬು ಹಾಗೂ ಮಧುಮೇಹಿಗಳಿಗೆ ಅನುಕೂಲವಾಗಿದೆ.

    ಖಾಸಗಿ ಹಾಗೂ ಸರ್ಕಾರಿ ಮಧ್ಯವರ್ತಿಗಳ ಕೈಯಲ್ಲಿ ಸಿಲುಕಿ ಹೈರಾಣಾಗಿರುವ ಗ್ರಾಮೀಣ ಕೃಷಿಕರನ್ನು ಸೇರಿಸಿಕೊಂಡು ಸಹಕಾರಿ ಮಂತ್ರ ಪಠಿಸುವ ಸೂಕ್ತ ವ್ಯಕ್ತಿಗಳು ಪ್ರತಿ ಊರಲ್ಲೂ ಸಿಕ್ಕಲ್ಲಿ ಭಾರತದ ಕೃಷಿಕರ ಬದುಕಿಗೆ ವರದಾನವಾಗಬಲ್ಲ ಚೇತೋಹಾರಿ ಮಾರ್ಗವೊಂದು ತನ್ನಿಂತಾನೇ ತೆರೆದುಕೊಳ್ಳಬಹುದು.

    (ಲೇಖಕರು ಅರ್ಥಶಾಸ್ತ್ರ ಉಪನ್ಯಾಸಕರು, ಖ್ಯಾತ ಹಾಸ್ಯ ಸಾಹಿತಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts