More

    ಯೋಧನ ಆಗಮನಕ್ಕೆ ಶಬರಿಯಂತೆ ಕಾದಿದ್ದಾರೆ ಅಜ್ಜಿ

    ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
    ಸೈನಕ್ಕೆ ಸೇರಿದ ಮೊಮ್ಮಗ ಮನೆಗೆ ಬರುತ್ತಾನೆ ಎಂಬ ನಿರೀಕ್ಷೆಯಲ್ಲಿ ಅಜ್ಜಿ ಶಬರಿಯಂತೆ ಕಾಯುತ್ತಿದ್ದಾಳೆ. ಕೈತುತ್ತು ಕೊಟ್ಟು ಜತನ ಮಾಡಿದ ಮೊಮ್ಮಗನನ್ನು ಸೈನಿಕರ ಸಮವಸ್ತ್ರದಲ್ಲಿ ನೋಡಬೇಕು ಎಂದು ಅಜ್ಜಿ ಕಾಯುವಿಕೆಯಲ್ಲಿ ಸಾವಿರ ಭರವಸೆಗಳ ಬೆಳಕಿದೆ.

    ಕುಂದಾಪುರ ತಾಲೂಕು ಹಕ್ಲಾಡಿ ಗ್ರಾಮ ಯಳೂರು ಮಕ್ಕಿಮನೆ ದಿ.ಚಿಕ್ಕಮ್ಮ ಶೆಡ್ತಿ -ಮಹಾಬಲ ಶೆಟ್ಟಿ ದಂಪತಿ ಪುತ್ರ ಮಂಜುನಾಥ ಶೆಟ್ಟಿ ಯೋಧ. ನೀಲಮ್ಮ ಶೆಟ್ಟಿ ಮೊಮ್ಮಗನ ನಿರೀಕ್ಷೆಯಲ್ಲಿರುವ ಅಜ್ಜಿ. ಚಿಕ್ಕ ವಯಸ್ಸಲ್ಲೇ ಮಂಜುನಾಥ ಶೆಟ್ಟಿ ತಾಯಿ ಮೃತಪಟ್ಟರೆ, ತಂದೆ ಕಾಣೆಯಾಗಿದ್ದು, ಯಾವುದೇ ಮಾಹಿತಿ ಇಲ್ಲ. ಮಂಜುನಾಥ ಶೆಟ್ಟಿ ಹಾಗೂ ಇಬ್ಬರು ಅಕ್ಕಂದಿರು ಬೆಳೆದಿದ್ದು ಅಜ್ಜಿ ನೀಲಮ್ಮ ಮಡಿಲಲ್ಲಿ. ಬಡತನದಲ್ಲಿಯೇ ಮೊಮ್ಮಕ್ಕಳಿಗೆ ಕಲಿಸಿದ್ದಾರೆ. ಹೆಣ್ಣು ಮಕ್ಕಳ ಮದುವೆ ಮಾಡಿದ್ದು, ಮಂಜುನಾಥ ಪದವೀಧರನಾಗಿರುವುದರಲ್ಲಿ ಅಜ್ಜಿಯ ತ್ಯಾಗದ ಫಲವಿದೆ.

    ಮಂಜುನಾಥ ಪದವೀಧರನಾಗಿದ್ದು, ಶಿವಮೊಗ್ಗದಲ್ಲಿ ಫಾರ್ಮಸಿಸ್ಟ್ ವ್ಯಾಸಂಗ ಮಾಡಿ, ಬ್ಯಾಂಕಿಂಗ್ ಪರೀಕ್ಷೆ ಬರೆದಿದ್ದರು. ಕೊನೆಗೆ ಎಲ್ಲವನ್ನೂ ಬಿಟ್ಟು ಸೈನಿಕ ಪರೀಕ್ಷೆಯಲ್ಲಿ ಆಯ್ಕೆ ಆಗಿದ್ದರು. ಗೋವಾದಲ್ಲಿ ತರಬೇತಿ ಮುಗಿಸಿದ್ದು, ಶನಿವಾರ ಊರಿಗೆ ಬರುವ ಹಿನ್ನೆಲೆಯಲ್ಲಿ ಮಂಜುನಾಥ ಶೆಟ್ಟಿ ಮನೆಯಲ್ಲಿ ಸಂಭ್ರಮವಿದೆ. ಯಳೂರು ದುರ್ಗಾ ಫ್ರೆಂಡ್ಸ್ ಹಾಕಿದ ಸ್ವಾಗತ ಬ್ಯಾನರ್ ಅನ್ನು ಅಜ್ಜಿ ದಿನವೂ ಸ್ವಚ್ಛ ಮಾಡುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಬ್ಯಾನರ್ ಸ್ವಚ್ಛ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

    ದೇಶ ಕಾಯೋದಂದ್ರೆ ಸುಮ್ಮನೆ ಆಪುದಲ್ಲ!: ಅಜ್ಜಿ ಹತ್ತಿರ ನಿಮ್ಮ ಮೊಮ್ಮಗ ಮಿಲ್ಟ್ರಿ ಸೇರಿದ್ದಾನಲ್ಲ ಎಂದರೆ ಅಚ್ಚರಿ ಮೂಡುತ್ತದೆ. ಯೋಧ, ಆರ್ಮಿ ಎಂದರೆ ಅಜ್ಜಿ ಕಣ್ಣಲ್ಲಿ ಅಚ್ಚರಿ. ನಿಮ್ಮ ಮೊಮ್ಮಗ ಸೈನ್ಯ ಸೇರಿದ್ದಾನೆ ಎಂದರೆ ಅರ್ಥವಾಗುತ್ತದೆ.. ‘ಸೈನ್ಯಕ್ಕೆ ಸೇರಿ ದೇಶ ಕಾಯೋದು ಅಂದ್ರೆ ಸುಮ್ಮನೆ ಆಪುದಲ್ಲ. ಗೋವಾಕ್ಕೆ ಹೋತೆ.. ನಂಗೆ ಕೆಲಸ ಸಿಕ್ಕೀತು ಅಂತ ಸುಳ್ಳು ಹೇಳಿ ಹೋಯಿದಾ.. ಕಡೀಕೆ ಗೊತ್ತಾತೆ.. ಅವ ಸೈನ್ಯ ಸೇರಿದಾ ಅಂತ.. ಯುದ್ಧ ಮಾಡೂದು ಎಂದ್ರೆ ಎಂಟೆದೆ ಬೇಕಾತ್ತು.. ನನ್ನ ಮೊಮ್ಮಗ ಎಂಟೆದೆ ಬಂಟ ಮಾರ‌್ರೆ’ ಅನ್ನುತ್ತಾರೆ ಅಜ್ಜಿ ನೀಲಮ್ಮ. ಮನೆ ಬಳಿ ಹಾಕಿರುವ ಬ್ಯಾನರ್ ಧೂಳಾಗಬಾರದು ಅಂತ ಕ್ಲೀನ್ ಮಾಡುತ್ತಿದ್ದೇನೆ. ಸೈನಿಕ ಅಂದ್ರೆ ಜಬರ್ದಸ್ತು ಇರಬೇಕು. ಚಿತ್ರದಲ್ಲಿದ್ದ ಸೈನಿಕ ಮೊಮ್ಮಗನ ಫೋಟೊ ಕ್ಲೀನ್ ಮಾಡುವುದೂ ಸೈನಿಕರ ಸೇವೆ ಮಾಡಿದ ಹಾಗೆಯೇ ಎಂದು ಮುಗ್ಧವಾಗಿ ಹೇಳುತ್ತಾರೆ ಅಜ್ಜಿ.

    ಗ್ರಾಮದ ಎರಡನೇ ಸೈನಿಕ: ಹಕ್ಲಾಡಿ ಗ್ರಾಮ ಕುಂದಬಾರಂದಾಡಿಯ ತಿಮ್ಮಯ್ಯ ದೇವಾಡಿಗ ಮಿಲಿಟರಿ ಸೇರಿದ್ದರು. ತಮ್ಮಯ್ಯ ದೇವಾಡಿಗ ಅನಂತರ ಸೈನ್ಯ ಸೇರಿದ ಎರಡನೇ ವ್ಯಕ್ತಿ ಮಂಜುನಾಥ ಶೆಟ್ಟಿ. ಹಾಗಾಗಿ ಹಕ್ಲಾಡಿ ಗ್ರಾಮದವರಿಗೆ ಯೋಧ ಹಾಗೂ ಕುಟುಂಬದವರ ಮೇಲೆ ಗೌರವ, ಅಕ್ಕರೆಯಿದೆ. ನಮ್ಮ ಮನೆ ಹುಡುಗ ಸೈನ್ಯ ಸೇರುವ ಮೂಲಕ ನಮ್ಮ ಘನತೆ ಗೌರವ ಹೆಚ್ಚಿಸಿದ್ದಾನೆ. ಮಂಜುನಾಥನ ಮೇಲೆ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎನ್ನುತ್ತಾರೆ ಯೋಧನ ಸಹೋದರಿ ಗೀತಾ ಶೆಟ್ಟಿ.

    ಹಿಂದೆ ನಮ್ಮೂರಿಂದ ಸೈನ್ಯಕ್ಕೆ ಒಬ್ಬರು ಹೋಗಿದ್ದರೂ ಯೋಧನಾಗಿ ಸೇನೆ ಸೇರಿದ ಮೊದಲ ವ್ಯಕ್ತಿ ಮಂಜುನಾಥ್. ಮಂಜುನಾಥ ಕುಟುಂಬ ಕಷ್ಟದಿಂದ ಬದುಕು ಕಟ್ಟಿಕೊಂಡಿದೆ. ತರಬೇತಿ ಮುಗಿಸಿ ಶನಿವಾರ ಮಂಜುನಾಥ ಊರಿಗೆ ಬರುತ್ತಿದ್ದು, ಹುಟ್ಟೂರಿನಲ್ಲಿ ಯೋಧನಿಗೆ ಅದ್ದೂರಿ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
    ಸತೀಶ್ ಶೆಟ್ಟಿ ಯಳೂರು ಗುಬ್ಯಾಡಿ, ಸದಸ್ಯ ಗ್ರಾಪಂ ಹಕ್ಲಾಡಿ

    ಮೊಮ್ಮಗ ಸೈನ್ಯ ಸೇರಿದ್ದು ಸಂತೋಷದ ಜತೆ ಒಳಗೊಳಗೆ ಆತಂಕವೂ ಇದೆ. ಅವ ಇಷ್ಟಪಟ್ಟು ಆಯ್ಕೆ ಮಾಡಿಕೊಂಡ ಹಾದಿಯದು. ಸೈನ್ಯ ಸೇರಿ ಸೇವೆ ಮಾಡೋದು ದೇಶದ ಎಲ್ಲರಿಗೂ ಸಿಗೋದಿಲ್ಲ. ನಮ್ಮ ಮೊಮ್ಮಗ ದೇಶಕಾಯುವ ಸೈನಿಕ ಆಗುತ್ತಿರುವುದು ನಮ್ಮ ಮನೆ ಘನಸ್ತಿಗೆ ಹೆಚ್ಚಿಸಿದೆ.
    ನೀಲಮ್ಮ ಶೆಟ್ಟಿ, ಯೋಧನ ಅಜ್ಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts