More

    ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಿ, ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಸೂಚನೆ

    ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ಅನಧಿಕೃತ, ಕಾನೂನುಬಾಹಿರ, ಅವೈಜ್ಞಾನಿಕ ಗಣಿಗಾರಿಕೆ ಮತ್ತು ಕಲ್ಲುಪುಡಿ ಮಾಡುವ ಕೆಲಸ ನಡೆಯದಂತೆ ಎಚ್ಚರಿಕೆ ವಹಿಸಬೇಕು. ತನ್ಮೂಲಕ ಯಾವುದೇ ಅಹಿತಕರ ಘಟನೆಗಳು ಆಗದಂತೆ ಜಾಗ್ರತೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ದೇವನಹಳ್ಳಿ ಸಮೀಪದ ಜಿಲ್ಲಾಡಳಿತ ಭವನದಲ್ಲಿ ಶನಿವಾರ ಆಯೋಜನೆಗೊಂಡಿದ್ದ ಜಿಲ್ಲಾ ಕಾರ್ಯಪಡೆ (ಗಣಿ) ಸಮಿತಿ ಮತ್ತು ಜಿಲ್ಲಾ ಕಲ್ಲುಪುಡಿ ಘಟಕಗಳ ಲೈಸೆನ್ಸಿಂಗ್ ಮತ್ತು ನಿಯಂತ್ರಣ ಪ್ರಾಧಿಕಾರ ಸಭೆಯಲ್ಲಿ ಮಾತನಾಡಿದರು. ಕಲ್ಲುಪುಡಿ ಮಾಡುವವರು ಸರ್ಕಾರದಿಂದ ಪರವಾನಗಿ ಪಡೆದು, ಪರಿಣಿತಿ ಮತ್ತು ತಂತ್ರಜ್ಞಾನದ ಅರಿವು ಹೊಂದಿರಬೇಕು ಎಂದರು.

    ಅಕ್ರಮವಾಗಿ ನಡೆಯುತ್ತಿರುವ ಕಲ್ಲು ಕ್ವಾರಿ ಮತ್ತು ಬ್ಲಾಸ್ಟಿಂಗ್ ಚಟುವಟಿಕೆಗಳು ಸಂಪೂರ್ಣ ಸ್ಥಗಿತವಾಗಬೇಕು. ಈ ಸಂಬಂಧ ತಾಲೂಕು ಮಟ್ಟದಲ್ಲಿ ಸಮಿತಿ ರಚಿಸಿ, ನಿಯಮಗಳ ಪಾಲನೆ ಕುರಿತು ಪರಿಶೀಲಿಸಬೇಕು ಎಂದು ತಿಳಿಸಿದರು.

    ಸ್ಪೋಟಕ ಸಾಗಣೆ ವೇಳೆ ಮಾಹಿತಿ ಸಂಗ್ರಹ: ಸ್ಪೋಟಕ ವಸ್ತುಗಳನ್ನು ಸಾಗಣೆ ಮಾಡುವಾಗ ಯಾವ ಸ್ಥಳದಿಂದ ಯಾವ ಸ್ಥಳಕ್ಕೆ ಸಾಗಣೆ ಮಾಡಲಾಗುತ್ತಿದೆ, ಪ್ರಮಾಣ ಎಷ್ಟು ಎಂಬ ಬಗ್ಗೆ ಸಂಬಂಧಪಟ್ಟವರು ಸ್ಥಳೀಯ ಠಾಣೆಗೆ ಪೂರ್ವ ಮಾಹಿತಿ ನೀಡಿರಬೇಕು ಎಂದು ಡಿಸಿ ಹೇಳಿದರು.

    ಸುರಕ್ಷತೆ ಗಮನದಲ್ಲಿರಲಿ: ಕೇವಲ ಆದಾಯ ನೋಡದೆ, ಜನರ ಜೀವದ ಸುರಕ್ಷತೆ ಗಮನದಲ್ಲಿಟ್ಟುಕೊಳ್ಳದೆ, ಕ್ವಾರಿ ನಡೆಸಲಾಗುತ್ತಿದೆ. ಇದರಿಂದ ಅನಾಹುತ ಹೆಚ್ಚುವ ಜತೆಗೆ ಸ್ಥಳೀಯವಾಗಿ ಬೆಳೆ ಹಾಗೂ ಸಾರ್ವಜನಿಕರಿಗೂ ತೊಂದರೆ ಆಗುತ್ತಿದೆ. ಆದ್ದರಿಂದ, ಈ ಬಗ್ಗೆ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂದು ಎಸ್​ಪಿ ರವಿ ಡಿ.ಚನ್ನಣ್ಣನವರ್ ಸೂಚನೆ ನೀಡಿದರು.

    ಕ್ವಾರಿ ಬ್ಲಾಸ್ಟ್​ನಿಂದ ಬೆಳೆ ನಾಶವಾಗುತ್ತಿದೆ. ರಾತ್ರಿ ವೇಳೆ ಅಕ್ರಮ ಕ್ವಾರಿ ಬ್ಲಾಸ್ಟ್ ಮಾಡುತ್ತಿರುವ ಬಗ್ಗೆ ಹಲವು ದೂರುಗಳು ಬಂದಿವೆ. ಇಂಥ ಅಕೃತ್ಯಗಳನ್ನು ಎಸಗುತ್ತಿರುವವರ ವಿರುದ್ಧ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

    ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್ ಕೆ.ನಾಯಕ, ಉಪ ಅರಣ್ಯಸಂರಕ್ಷಣಾಧಿಕಾರಿ ಆಂಥೋನಿ ಮರಿಯಪ್ಪನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷೀ ಗಣೇಶ್, ಎಸಿ ಅರುಳ್​ಕುಮಾರ್, ಡಿವೈಎಸ್ಪಿ ಟಿ.ರಂಗಪ್ಪ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts