More

    “ಗುಂಡು ಹಾರಿಸಿ” ಎಂಬ ಹೇಳಿಕೆಗಳನ್ನು ನೀಡಬಾರದಿತ್ತು: ದೆಹಲಿ ಚುನಾವಣೆ ಸೋಲಿನ ಬಗ್ಗೆ ಅಮಿತ್​ ಷಾ ಅವಲೋಕನ

    ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ನಿರೀಕ್ಷಿತ ಗುರಿಯನ್ನು ಮುಟ್ಟಲಾಗದೆ ಬಿಜೆಪಿ ಕೇವಲ 8 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಬಿಜೆಪಿಯ ಈ ವೈಫಲ್ಯಕ್ಕೆ ಕಾರಣವೇನು ಎಂಬುದನ್ನು ಚುನಾವಣಾ ಪ್ರಚಾರ ಜವಾಬ್ದಾರಿಯನ್ನು ಹೊತ್ತಿದ್ದ ಕೇಂದ್ರ ಗೃಹಸಚಿವ ಅಮಿತ್​ ಷಾ ಅವರು ಗುರುವಾರ ಬಹಿರಂಗಪಡಿಸಿದ್ದಾರೆ.

    ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್​ ಷಾ, “ಗುಂಡು ಹಾರಿಸಿ” ಮತ್ತು “ಇಂಡೋ-ಪಾಕ್​ ಪಂದ್ಯ”ದಂತಹ ಹೇಳಿಕೆಗಳನ್ನು ಬಿಜೆಪಿ ನಾಯಕರು ನೀಡಬಾರದು. ಅಲ್ಲದೆ, ದೆಹಲಿ ಚುನಾವಣೆಯಲ್ಲಿ ಇಂತಹ ಹೇಳಿಕೆಗಳಿಂದ ಪಕ್ಷವು ಅಂತರ ಕಾಯ್ದುಕೊಂಡಿದ್ದು ಬಹುಶಃ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ ಎಂದಿದ್ದಾರೆ.

    ದೆಹಲಿ ಚುನಾವಣೆ ಕುರಿತಾದ ನನ್ನ ಕಾರ್ಯಸೂಚಿ ತಪ್ಪಾಗಿದೆ. ಮಿತಿ ಮೀರಿ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡಿದ ನಾಯಕರುಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಮುಖವಾಗಿ ಚರ್ಚಿಸಲಾಗಿದೆ. ಇದೇ ಕಾರಣದಿಂದಾಗಿ ನಿರೀಕ್ಷಿತ ಫಲಿತಾಂಶದಿಂದ ಬಿಜೆಪಿ ತೀರಾ ಕೆಳಗೆ ಬಿದ್ದಿದೆ ಎಂದು ಹೇಳಿದರು.

    ಪ್ರಧಾನಿ ಮೋದಿ ಸೇರಿ 270 ಸಂಸದೀಯ ನಾಯಕರು ಒಳಗೊಂಡಂತೆ 70 ಸಚಿವರು ಮತ್ತು ರಾಜ್ಯ ನಾಯಕರ ಬಹುದೊಡ್ಡ ಪ್ರಚಾರ ತಂಡವೇ ದೆಹಲಿ ಚುನಾವಣೆಯ ಅಖಾಡಕ್ಕೆ ಇಳಿದಿತ್ತು. ಆದರೂ ಆಮ್​ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್​ ಕೇಜ್ರಿವಾಲ್​ ವರ್ಚಸ್ಸಿನ ಮುಂದೆ ಬಿಜೆಪಿ ಮಕಾಡೆ ಮಲಗಿತು. ಒಟ್ಟು 70 ವಿಧಾನಸಭಾ ಕ್ಷೇತ್ರದಲ್ಲಿ 62 ಸ್ಥಾನಗಳಲ್ಲಿ ಆಪ್​ ಗೆದ್ದರೆ, ಕೇವಲ 8 ಸ್ಥಾನಗಳಲ್ಲಿ ಮಾತ್ರ ಬಿಜೆಪಿ ಜಯಿಸಿದೆ.

    ಕೇಂದ್ರ ಸಚಿವ ಅನುರಾಗ್​ ಠಾಕೂರ್​, ಸಂಸದ ಪರ್ವೇಶ್​ ವರ್ಮಾ ಸೇರಿದಂತೆ ಅನೇಕ ನಾಯಕರು ಸಿಎಎ ವಿರೋಧಿಸಿ ದೆಹಲಿಯ ಶಾಹೀನ್​ ಬಾಘ್​ನಲ್ಲಿ ನಡೆಯುತ್ತಿರುವ ಪ್ರತಿಭಟನಾಕಾರರನ್ನು ಉದ್ದೇಶಿಸಿ ನೀಡಿದ ಪ್ರಚೋದಾನಾತ್ಮಕ ಹೇಳಿಕೆಗಳೇ ಬಿಜೆಪಿಗೆ ಶಾಪವಾಗಿ ಪರಿಣಮಿಸಿದೆ. ಅಲ್ಲದೆ, ಕೇಜ್ರಿವಾಲ್​ಗೆ ಪಾಕ್​ ನಂಟು ಕಲ್ಪಿಸಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಭಯೋತ್ಪಾದಕ ಎಂದು ಜರಿದಿದ್ದು ಕೂಡ ತೀವ್ರ ಟೀಕೆಗೆ ಗುರಿಯಾಗಿತ್ತು. ಇದೆಲ್ಲಾ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ ಎಂಬುದು ಅಮಿತ್​ ಷಾ ಅವರ ಅಭಿಪ್ರಾಯವಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts