More

    ಪರ್ಯಾಯ ಉದ್ಯೋಗ ಕಲ್ಪಿಸಲು ಆಗ್ರಹ

    ವಿಜಯಪುರ: ರಾಜ್ಯ ಕಾಂಗ್ರೆಸ್ ಗ್ಯಾರಂಟಿ ಯೋಜನೆಯಡಿ ಶಕ್ತಿ ಯೋಜನೆ ಜಾರಿಗೆ ತಂದ ಮೇಲೆ ಸರ್ಕಾರಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿದ್ದು, ಇದರಿಂದ ಖಾಸಗಿ ವಾಹನಗಳನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದ ವಾಹನ ಮಾಲೀಕರು ಹಾಗೂ ಚಾಲಕರ ಹೊಟ್ಟೆ ಮೇಲೆ ಹೊಡೆದಂತಾಗಿದೆ. ಸರ್ಕಾರ ನಮಗೂ ಬೇರೆ ಉದ್ಯೋಗ ಕಲ್ಪಿಸಬೇಕು ಎಂದು ರಾಜ್ಯ ಚಾಲಕರ ಒಕ್ಕೂಟದ ಅಧ್ಯಕ್ಷ ಜಿ. ನಾರಾಯಣಸ್ವಾಮಿ ಒತ್ತಾಯಿಸಿದರು.

    ಬುಧವಾರ ನಗರದ ಅಂಬೇಡ್ಕರ್ ಸರ್ಕಲ್ ಬಳಿ ರಾಜ್ಯ ಚಾಲಕರ ಒಕ್ಕೂಟದ ವತಿಯಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು. ಸಿದ್ಧೇಶ್ವರ ದೇವಸ್ಥಾನದಿಂದ ಆರಂಭಗೊಂಡ ರ‌್ಯಾಲಿ ಗಾಂಧಿವೃತ್ತ, ಬಸವೇಶ್ವರ ಸರ್ಕಲ್ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು.

    ನಂತರ ನಾರಾಯಣಸ್ವಾಮಿ ಮಾತನಾಡಿ, ಕರ್ನಾಟಕ ಖಾಸಗಿ ವಾಹನ ಚಾಲಕರಿಗೆ, ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಬಾಡಿಗೆ ವಾಹನ ಚಾಲಕರಿಗೆ ಮತ್ತು ವಾಹನ ಓಡಿಸಿ ದುಡಿದು ತಿನ್ನುವವರು ಬೀದಿಗೆ ಬಿದ್ದಿದ್ದಾರೆ. ನಾವೆಲ್ಲ ವಾಹನಗಳನ್ನು ಕಂತುಗಳ ಆಧಾರದ ಮೇಲೆ ಖರೀದಿ ಮಾಡಿದ್ದು, ವಾಹನದ ಸಾಲದ ಕಂತು ಭರಿಸಲು ಕಷ್ಟಕರವಾಗಿದೆ. ಇದರ ಜತೆ ಹೆಚ್ಚುವರಿಯಾಗಿ ರಸ್ತೆ ಟ್ಯಾಕ್ಸ್ ವಿಮಾ ಕಂತು ಮತ್ತು ದುಬಾರಿ ನೋಂದಣಿ ಶುಲ್ಕ ಬೇರೆ ಹೆಚ್ಚಳ ಮಾಡಲಾಗಿದೆ. ಏಜೆಂಟ ಸದಸ್ಯರ ಶಿಕ್ಷಣ, ಆರೋಗ್ಯ, ಮನೆ ಬಾಡಿಗೆ ಹಾಗೂ ಇನ್ನಿತರ ಖರ್ಚು ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಕರ್ನಾಟಕ ಚಾಲಕರ ಒಕ್ಕೂಟದ ಜಿಲ್ಲಾಧ್ಯಕ್ಷ ಅಶೋಕ ಖಿಲಾರಿ ಮಾತನಾಡಿ, ಚಾಲಕರದ್ದು ಶ್ರಮಿಕ ವರ್ಗವಾಗಿದೆ. ನಮಗಾಗಿ ಯಾವುದಾದರೂ ಆರ್ಥಿಕ ಯೋಜನೆ ಬಜೆಟ್‌ನಲ್ಲಿ ಘೋಷಿಸಬಹುದು. ಅಂತಾ ನಿರೀಕ್ಷೆಯಲ್ಲಿದ್ದ ನಮಗೆ ನಿರಾಸೆಯಾಗಿದೆ. ಸದ್ಯ ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲದಂತಾಗಿದೆ. ಆದ್ದರಿಂದ ಸರ್ಕಾರ ಕೂಡಲೇ ಶಕ್ತಿ ಯೋಜನೆಯನ್ನು ಕೈ ಬಿಡಬೇಕು. ಇಲ್ಲವಾದರೆ ನಮಗೆ ಬೇರೆ ಉದ್ಯೋಗ ಸೃಷ್ಟಿಸಿಕೊಡಬೇಕು ಎಂದು ಆಗ್ರಹಿಸಿದರು.

    ರಾಜ್ಯ ಪ್ರಧಾನ ಕಾರ್ಯದರ್ಶಿ ಯೋಗೇಶಗೌಡ, ಉಪಾಧ್ಯಕ್ಷ ಗುರುಮೂರ್ತಿ. ಎಂ.ಡಿ. ಮಸ್ತಾನ್, ಜಿಲ್ಲಾ ಉಪಾಧ್ಯಕ್ಷ ಶರಣ ಗಗನಗೌಡ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪವನಗೌಡ ಪಾಟೀಲ, ಪರಶುರಾಮ ಹೊನಕಟ್ಟಿ, ಶ್ರೀಕಾಂತ ಕೋಳಿ, ಯಾಸೀನ್ ಮುಕಾಶಿ, ರಾಜು ಕೋಳಿ, ಬಂದಗಿಸಾಬ ಕೋಳಿ, ಆನಂದ ಯರದಟ್ಟಿ, ಬಸುಗೌಡ ಚಟ್ನಳ್ಳಿ, ಮಂಜು ತಾಳಿಕೋಟಿ ಹಾಗೂ ಜಿಲ್ಲಾ ಹಾಗೂ ತಾಲೂಕಿನ ಪದಾಧಿಕಾರಿಗಳು, ಚಾಲಕರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts