More

    ಉಪಸಮರ ಬಿಜೆಪಿಗೆ ಬಂಡಾಯ ಬೇಗುದಿ

    ಬೆಂಗಳೂರು: ಉಪ ಚುನಾವಣೆಗಳಲ್ಲಿ ಜೈತ್ರ್ರಾಯಾತ್ರೆ ಸಲೀಸು ಎಂದುಕೊಂಡಿದ್ದ ಆಡಳಿತಾರೂಢ ಭಾರತೀಯ ಜನತಾಪಕ್ಷ ಬಂಡಾಯದ ಸುಳಿಗೆ ಸಿಲುಕಿದೆ. ಅತೃಪ್ತಿ ಶಮನಗೊಳಿಸುವ ಮಾಗೋಪಾಯಕ್ಕೆ ತಡಕಾಡುತ್ತಿದೆ. ಬೆಳಗಾವಿ ಲೋಕಸಭೆ, ಬಸವಕಲ್ಯಾಣ ವಿಧಾನಸಭೆ ಕ್ಷೇತ್ರಕ್ಕೆ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಇದ್ದುದು ಆರಂಭಿಕದಲ್ಲಿ ವರವಾಗಿದ್ದರೆ, ಅಧಿಕೃತ ಅಭ್ಯರ್ಥಿ ಹೆಸರು ಪ್ರಕಟಿಸಿದ ನಂತರ ಶಾಪವಾಗಿ ಪರಿಣಮಿಸಿದೆ.

    ಬಸವಕಲ್ಯಾಣದಲ್ಲಿ ‘ಸ್ಥಳೀಯತೆ’ ಮುಂದಿಟ್ಟುಕೊಂಡು ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಸ್ಪರ್ಧಾ ಕಣಕ್ಕೆ ಧುಮುಕಿದ್ದು, ಪಕ್ಷದ ಮುಖಂಡರಿಗೆ ಸಡ್ಡು ಹೊಡೆದಿದ್ದಾರೆ. ಖೂಬಾಗಿಂತ ಅವರ ಬೆಂಬಲಿಗರು ರೊಚ್ಚಿಗೆದ್ದಿದ್ದು, ಹೊರಗಿನವರಾದ ಶರಣು ಸಲಗರ ಅವರನ್ನು ಕ್ಷೇತ್ರದ ಮೇಲೆ ಹೇರಲಾಗಿದೆ ಎಂದು ಬಹಿರಂಗವಾಗಿ ಕಿಡಿಕಾರಿದ್ದಾರೆ. ಡಿಸಿಎಂ ಲಕ್ಷ್ಮಣ ಸವದಿ, ಸಚಿವರಾದ ವಿ.ಸೋಮಣ್ಣ, ಬಸವರಾಜ ಬೊಮ್ಮಾಯಿ ಮೊದಲ ಸುತ್ತಿನ ಮಾತುಕತೆಯೂ ನಿರೀಕ್ಷಿತ ಫಲವನ್ನೇನೂ ನೀಡಿಲ್ಲ. ನಾಮಪತ್ರ ಹಿಂಪಡೆಯಲು ಮಾ.3 ಕೊನೆಯ ದಿನವಾಗಿದ್ದು, ಅಷ್ಟರೊಳಗೆ ಮುನಿಸು ಸುಖಾಂತ್ಯ ಕಾಣಿಸಬೇಕೆಂಬ ತವಕದಲ್ಲಿದ್ದು, ಮನವೊಲಿಸುವುದಕ್ಕಾಗಿ ಪಕ್ಷದ ಮುಖಂಡರು ಬೆವರಿಳಿಸುತ್ತಿದ್ದಾರೆ.

    ಹೊಸಕೋಟೆ ಪಾಠ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ‘ಕಾವೇರಿ’ ನಿವಾಸಕ್ಕೆ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಕರೆಯಿಸಿಕೊಂಡು ರ್ಚಚಿಸಿದ್ದಾರೆ. ಹೊಸಕೋಟೆ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿ ಸ್ಪರ್ಧೆಯಲ್ಲಿ ಉಳಿದ ಕಾರಣ ಪಕ್ಷದ ಅಧಿಕೃತ ಅಭ್ಯರ್ಥಿ ಸೋಲಬೇಕಾಯಿತು ಎಂಬ ಪಾಠವನ್ನು ಹೇಳಿದ್ದಾರೆ. ಬಸವಕಲ್ಯಾಣದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಮಲ್ಲಿಕಾರ್ಜುನ ಖೂಬಾ ಜತೆಗೆ ರಾಜಿ ಸಂಧಾನ ಮಾಡಿ ನಾಮಪತ್ರ ವಾಪಸ್ ಪಡೆಯುವಂತೆ ನೋಡಿಕೊಳ್ಳಬೇಕೆಂಬ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

    ತೆರೆಮರೆ ಕಸರತ್ತು: 3 ಕ್ಷೇತ್ರಗಳಲ್ಲಿ ಗೆಲ್ಲಲೇಬೇಕು ಎಂಬ ಪಣ ತೊಟ್ಟು, ಬಹಿರಂಗವಾಗಿ ಅಬ್ಬರದ ಪ್ರಚಾರಕ್ಕೆ ಬಿಜೆಪಿ ಇಳಿದಿದ್ದರೆ ತೆರೆಮರೆಯಲ್ಲಿ ಅಸಮಾಧಾನಿತರನ್ನು ಓಲೈಸುವ ಕಸರತ್ತು ನಡೆಸಿದೆ. ಬೆಳಗಾವಿ ಹಾಗೂ ಮಸ್ಕಿಯಲ್ಲಿ ಪಕ್ಷದ ಪ್ರಭಾವಿ ಮುಖಂಡರು ಮುನಿಸಿಕೊಂಡಿದ್ದು, ಕಾರಣಗಳನ್ನು ಪತ್ತೆ ಹಚ್ಚಿ ಸರಿಪಡಿಸುವ ಜವಾಬ್ದಾರಿಯನ್ನು ಉಸ್ತುವಾರಿ ಹೊತ್ತವರಿಗೆ ನೀಡಲಾಗಿದೆ. ವರಿಷ್ಠರ ಸೂಚನೆಯಂತೆ ಅತೃಪ್ತರ ಜತೆಗೆ ಕೇಂದ್ರ ಮತ್ತು ರಾಜ್ಯದ ಹಲವು ನಾಯಕರು ನೇರ ಮಾತುಕತೆ ನಡೆಸಿ, ಮುಖಂಡರ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ. ನಾಮಪತ್ರ ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಮುಗಿದು, ಸ್ಪರ್ಧಾ ಅಖಾಡ ನಿಚ್ಚಳವಾಗುವ ಹೊತ್ತಿಗೆ ಎಲ್ಲವೂ ಸರಿಹೋಗಲಿದೆ ಎಂಬ ವಿಶ್ವಾಸವನ್ನು ವರಿಷ್ಠರು ಹೊಂದಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

    ಮಸ್ಕಿ ವಿಧಾನಸಭಾ ಕ್ಷೇತ್ರ, ಬೆಳಗಾವಿ ಲೋಕಸಭಾ ಕೇತ್ರದ ಉಪ ಚುನಾವಣೆಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲುತ್ತಾರೆ. ಮಸ್ಕಿ ಕ್ಷೇತ್ರದಲ್ಲಿ ಕಾರ್ಯಕರ್ತರು ಪರಿಶ್ರಮದಿಂದ ಕೆಲಸ ಮಾಡಿದ್ದಾರೆ. ಎಲ್ಲ ನಾಯಕರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತಿದ್ದೇವೆ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಸಂಘಟನೆ, ಕಾರ್ಯಕರ್ತರ ಪಡೆ ಉತ್ತಮವಾಗಿದೆ, ಹಾಗಾಗಿ ದೊಡ್ಡ ಅಂತರದಲ್ಲಿ ಗೆಲ್ಲುತ್ತೇವೆ.

    | ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯ ಉಪಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts