More

    ಶಿವಮೊಗ್ಗ ಏರ್‌ಪೋರ್ಟ್‌ಗೆ ಸ್ಟಾರ್ ಏರ್‌ಲೈನ್ಸ್ ಬಸ್ ಬಂತು!

    ಶಿವಮೊಗ್ಗ: ಸ್ಟಾರ್ ಏರ್‌ಲೈನ್ಸ್ ಶಿವಮೊಗ್ಗ ಏರ್‌ಪೋರ್ಟ್‌ನಿಂದ ಕಾರ್ಯಾಚರಣೆ ನಡೆಸಲು ಪೂರಕ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಮುಗಿಸಿದ ಸಂಸ್ಥೆ ಇದೀಗ ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರಿಗೆ ಸೇವೆ ಒದಗಿಸಲು ಸ್ಟಾರ್ ಏರ್‌ಲೈನ್ಸ್‌ನಿಂದ ಬಸ್ ಆಗಮಿಸಿದೆ.

    ಶುಕ್ರವಾರ ಬೃಹತ್ ಲಾರಿಯಲ್ಲಿ ಬಸ್‌ವೊಂದನ್ನು ಏರ್‌ಪೋರ್ಟ್‌ಗೆ ತರಲಾಗಿದೆ. ಈ ಬಸ್ ಟರ್ಮಿನಲ್-ಏಪ್ರಾನ್-ಟರ್ಮಿನಲ್ ನಡುವೆ ಜನರನ್ನು ಕರೆದೊಯ್ಯಲಿದೆ. ಇದರೊಂದಿಗೆ ಮತ್ತಷ್ಟು ಲೋಹದ ಹಕ್ಕಿಗಳ ಹಾರಾಟಕ್ಕೆ ಕ್ಷಣಗಣನೆ ಆರಂಭವಾಗಿದೆ.
    ಈಗಾಗಲೇ ಘೋಷಿಸಿರುವಂತೆಯೇ ಸ್ಟಾರ್ ಏರ್‌ಲೈನ್ಸ್ ನ.21ರಿಂದ ಶಿವಮೊಗ್ಗದಿಂದ ಹೈದರಾಬಾದ್, ಗೋವಾ ಹಾಗೂ ತಿರುಪತಿಗೆ ವಿಮಾನ ಸಂಚಾರ ಆರಂಭಿಸಬೇಕು. ಇದಕ್ಕೆ ಡಿಜಿಸಿಎ ಅನುಮತಿ ಸಿಕ್ಕಿದೆ. ಸರ್ಕಾರದ ಹಂತದಲ್ಲಿ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ವಿಮಾನ ನಿಲ್ದಾಣದಲ್ಲಿ ಪ್ರತ್ಯೇಕ ಕಚೇರಿಯನ್ನು ತೆರೆಯಲಾಗಿದೆ. ಆದರೆ ಇದುವರೆಗೂ ಶಿವಮೊಗ್ಗ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಸ್ಟಾರ್ ಏರ್‌ಲೈನ್ಸ್‌ನಿಂದ ಲಿಖಿತವಾಗಿ ಯಾವುದೇ ಮಾಹಿತಿ ಬಂದಿಲ್ಲ. ಹೀಗಾಗಿ ಕಡೇ ಕ್ಷಣದಲ್ಲಿ ವಿಮಾನ ಸಂಚಾರ ಒಂದೆರಡು ದಿನ ತಡವಾದರೂ ಆಶ್ಚರ್ಯಪಡಬೇಕಿಲ್ಲ ಎಂದು ಮೂಲಗಳು ತಿಳಿಸಿವೆ.
    ಈ ಸಂಸ್ಥೆಯ ವಿಮಾನ ಹಾರಾಟಕ್ಕೂ ಮುನ್ನ ಔಪಚಾರಿಕವಾಗಿ ಕಾರ್ಯಕ್ರಮ ಆಯೋಜಿಸುವ ಬಗ್ಗೆಯೂ ಯಾವುದೇ ಸ್ಪಷ್ಟತೆಯಿಲ್ಲ. ಆರಂಭದಲ್ಲಿ ಸಂಸ್ಥೆಯು ನ.17ರಿಂದಲೇ ವಿಮಾನಯಾನ ಆರಂಭಿಸುವುದಾಗಿ ಘೋಷಿಸಿತ್ತು. ಕೆಲ ದಿನಗಳ ಬಳಿಕ ಅದನ್ನು ನ.21ಕ್ಕೆ ಮುಂದೂಡಲಾಯಿತು. ಆದರೆ 21ರಿಂದಲೇ ವಿಮಾನ ಪ್ರಯಾಣಕ್ಕೆ ಈಗಾಗಲೇ ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ಕಿಂಗ್ ಆರಂಭವಾಗಿರುವುದರಿಂದ ಹೊಸ ಮಾರ್ಗಗಳಿಗೆ ಶಿವಮೊಗ್ಗ ಏರ್‌ಪೋರ್ಟ್ ತೆರೆದುಕೊಳ್ಳುವುದು ನಿಶ್ಚಿತವಾಗಿದೆ.
    ಸರ್ಕಾರದ ಹಂತದಲ್ಲಿ ಕ್ರಮ: ಶಿವಮೊಗ್ಗ ಏರ್‌ಪೋರ್ಟ್‌ನಲ್ಲಿ ಕಾರ್ಗೋ ಕಾಂಪ್ಲೆಕ್ಸ್ ನಿರ್ಮಾಣ, ಏಪ್ರಾನ್ ವಿಸ್ತರಣೆ, ಏರೋಸ್ಪೇಸ್ ಪಾರ್ಕ್, ದಕ್ಷಿಣ ಭಾರತದ ಮೊದಲ ಏರ್‌ಬಸ್ ತರಬೇತಿ ಕೇಂದ್ರ ತೆರೆಯುವ ಸಂಬಂಧ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಅವರೊಂದಿಗೆ ಈಗಾಗಲೇ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಚರ್ಚೆ ನಡೆಸಿದ್ದಾರೆ. ರಾತ್ರಿ ವೇಳೆಯೂ ವಿಮಾನ ಲ್ಯಾಂಡ್ ಹಾಗೂ ಟೇಕಾಫ್ ಆಗಲು ಕೆಲವು ಎಲೆಕ್ಟ್ರಿಕಲ್ ಉಪಕರಣಗಳು ಹಾಗೂ ಬೆಳಕಿನ ವ್ಯವಸ್ಥೆ ಒದಗಿಸುವ ಬಗ್ಗೆಯೂ ಸರ್ಕಾರದ ಹಂತದಲ್ಲಿ ಪ್ರಕ್ರಿಯೆಗಳು ಆರಂಭವಾಗಿವೆ. ಇನ್ನು ಒಂದೆರಡು ತಿಂಗಳಲ್ಲಿ ಇದೆಲ್ಲವೂ ಪೂರ್ಣಗೊಳ್ಳುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
    ಎಎಸ್‌ಪಿ-ಬಿಟಿಸಿಪಿ ಬಹುಮುಖ್ಯ:ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಎಎಸ್‌ಪಿ (ಏರೋಡ್ರಮ್ ಸೆಕ್ಯುರಿಟಿ ಪ್ರೋಗ್ರಾಂ) ಹಾಗೂ ಬಿಟಿಸಿಪಿ (ಬಾಂಬ್ ಥ್ರೆಟ್ ಕಾಂಟಿಜೆನ್ಸಿ ಪ್ಲಾನ್) ಅನುಷ್ಟಾನಕ್ಕೆ ಮೂರು ತಿಂಗಳ ಕಾಲಾವಕಾಶವನ್ನು ಬಿಸಿಎಎಸ್(ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯೂರಿಟಿ) ನೀಡಿತ್ತು. ಈ ಅನುಮತಿ ನ.28ಕ್ಕೆ ಮುಕ್ತಾಯವಾಗುತ್ತಿದೆ. ಪ್ರಸ್ತುತ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಎಎಸ್‌ಪಿ ಹಾಗೂ ಬಿಟಿಸಿಪಿ ವ್ಯವಸ್ಥೆ ಮಂಗಳೂರು ಹಾಗೂ ಮೈಸೂರು ಏರ್‌ಪೋರ್ಟ್‌ನಿಂದ ಪಡೆಯಲಾಗುತ್ತಿದೆ. ಆದರೆ ದೀರ್ಘ ಕಾಲದಲ್ಲಿ ಇದು ಸಾಧ್ಯವಿಲ್ಲ. ಹೀಗಾಗಿ ಎಎಸ್‌ಪಿ ಹಾಗೂ ಬಿಟಿಸಿಪಿ ಜಾರಿಗೆ ಕೆಲವು ಉಪಕರಣಗಳನ್ನು ವಿದೇಶದಿಂದಲೂ ತರಿಸಿಕೊಳ್ಳಬೇಕಾಗುತ್ತದೆ. ಇದಕ್ಕೆ ಕಾಲಾವಕಾಶ ಬೇಕು. ತಾತ್ಕಾಲಿಕವಾಗಿ ಬಿಸಿಎಎಸ್ ಅನುಮತಿ ವಿಸ್ತರಣೆಗೆ ಕೇಂದ್ರಕ್ಕೆ ಮನವಿ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts