More

    ಮಸ್ಟರಿಂಗ್ ಕೇಂದ್ರದಲ್ಲಿ ಸಿಬ್ಬಂದಿ ಪ್ರತಿಭಟನೆ

    ಶಿಗ್ಗಾಂವಿ: ಪಟ್ಟಣದ ಜೆಎಂಜೆ ಶಾಲೆ ಆವರಣದಲ್ಲಿನ ಮಸ್ಟರಿಂಗ್ ಕೇಂದ್ರದಲ್ಲಿ ನಿಯೋಜನೆ ಮಾಡಿದ್ದ ಚುನಾವಣಾ ಸಿಬ್ಬಂದಿಗೆ ಸಕಾಲಕ್ಕೆ ಸರಿಯಾಗಿ ಊಟ, ಉಪಹಾರ ನೀಡದ್ದಕ್ಕೆ ನೌಕರರು ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದರು.

    ಎರಡನೇ ಹಂತದ ಮತದಾನದ ಹಿನ್ನೆಲೆಯಲ್ಲಿ ನಿಯೋಜನೆಗೊಂಡಿರುವ 1500ಕ್ಕೂ ಹೆಚ್ಚು ಸಿಬ್ಬಂದಿ ಮತಗಟ್ಟೆಗಳಿಗೆ ತೆರಳಲು ಬೆಳಗ್ಗೆ ಜೆಎಂಜೆ ಶಾಲೆಯ ಮಸ್ಟರಿಂಗ್ ಕೆಂದ್ರಕ್ಕೆ ಆಗಮಿಸಿದ್ದರು. ಬೆಳಗ್ಗೆ 9 ಗಂಟೆಗೆ ಆಗಮಿಸಿರುವ ಸಿಬ್ಬಂದಿಗೆ ಮಧ್ಯಾಹ್ನ ಮೂರು ಗಂಟೆಯಾದರೂ ಊಟದ ವ್ಯವಸ್ಥೆ ಮಾಡಲಿಲ್ಲ. ಬೆಳಗ್ಗೆ ತಿಂಡಿ ಸಹ ನೀಡದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ, ನೌಕರರು ಒಂದು ಗಂಟೆಗೂ ಅಧಿಕ ಹೊತ್ತು ಪ್ರತಿಭಟನೆ ಮಾಡಿದರು.

    ಸ್ಥಳಕ್ಕಾಗಮಿಸಿದ ಜಿಲ್ಲಾ ಚುನಾವಣಾ ವೀಕ್ಷಕ ಡಾ. ರಾಜೇಂದ್ರ ಹೊನ್ನಳ್ಳಿ, ಎಡಿಸಿ ಯೋಗೀಶ್ವರ, ಪ್ರತಿಭಟನಾ ನಿರತ ಸಿಬ್ಬಂದಿಯನ್ನು ಸಮಾಧಾನಪಡಿಸಿ ಘಟನೆ ಕುರಿತು ವಿಷಾದ ವ್ಯಕ್ತಪಡಿಸಿದರು. ಸೂಕ್ತ ತಯಾರಿ ಮಾಡದ ತಹಸೀಲ್ದಾರ್ ಪ್ರಕಾಶ ಕುದರಿಯನ್ನು ತರಾಟೆಗೆ ತೆಗೆದುಕೊಂಡು, ಕೂಡಲೆ ಸಮರ್ಪಕ ಊಟದ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

    ನಂತರ ತರಾತುರಿಯಲ್ಲಿ ಊಟ ಬಡಿಸಲು ಮುಂದಾದ ಸಿಬ್ಬಂದಿ ಪಟ್ಟಣದಿಂದ ತಂದಿದ್ದ ಅನ್ನ, ಸಾರು ಕೆಲ ನಿಮಿಷಗಳಲ್ಲಿ ಖಾಲಿಯಾಯಿತು. ಈ ಅವ್ಯವಸ್ಥೆಯಿಂದ ಬೇಸತ್ತ ಪುರುಷ ನೌಕರರು ಹೋಟೆಲ್​ಗಳಿಗೆ ತೆರಳಿದರೆ, ಮಹಿಳಾ ಸಿಬ್ಬಂದಿ ಊಟಕ್ಕಾಗಿ ಪರದಾಡುವಂತಾಯಿತು. ಕೆಲವರಿಗೆ ಅನ್ನ ಸಿಕ್ಕರೆ, ಮತ್ತೆ ಕೆಲವರಿಗೆ ಸಾರು ಸಿಗಲಿಲ್ಲ. ಇದರಿಂದ ತೀವ್ರ ಅಸಮಾಧಾನಕ್ಕೊಳಗಾದ ನೌಕರರು ತಾಲೂಕು ಆಡಳಿತಕ್ಕೆ ಹಿಡಿಶಾಪ ಹಾಕುತ್ತ ಮತಪೆಟ್ಟಿಗೆಗಳನ್ನು ಹಿಡಿದು ವಾಹನಗಳತ್ತ ತೆರಳಿದರು. ಸಿಬ್ಬಂದಿಗೆ ಸರಿಯಾದ ವ್ಯವಸ್ಥೆ ಮಾಡದ ತಾಲೂಕಾಡಳಿತದ ಬೇಜವಾಬ್ದಾರಿತನದ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಯಿತು.

    ಚುನಾವಣಾ ಸಿಬ್ಬಂದಿಗೆ ಸರಿಯಾದ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಲಾಗಿತ್ತು. ಆದರೂ ಅವ್ಯವಸ್ಥೆಯಾಗಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗುವುದು. ಚುನಾವಣೆ ಮುಗಿಸಿಕೊಂಡು ಬರುವಾಗ ಎಲ್ಲ ಸಿಬ್ಬಂದಿಗೆ ಉತ್ತಮ ಊಟದ ವ್ಯವಸ್ಥೆ ಮಾಡಲಾಗುವುದು.
    | ಡಾ. ರಾಜೇಂದ್ರ ಹೊನ್ನಳ್ಳಿ, ಜಿಲ್ಲಾ ಚುನಾವಣಾ ವೀಕ್ಷಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts