More

    ವಿಷ್ಣು ಭಟ್ ಡೋಂಗ್ರೆಯವರ ಶಿವದರ್ಶನ ಗ್ರಂಥ ಲೋಕಾರ್ಪಣೆ ಮಾಡಿದ ಶ್ರೀರಾಘವೇಶ್ವರ ಸ್ವಾಮೀಜಿ

    ಬೆಂಗಳೂರು : ಭಾರತೀಯರಿಗೆ ಧರ್ಮವೇ ಜೀವನ; ಜೀವನವೇ ಧರ್ಮ. ಧರ್ಮದ ಅನುಸಂಧಾನ ಮತ್ತು ಅನುಷ್ಠಾನದ ಮೂಲಕ ಬದುಕಿನ ಉತ್ಕೃಷ್ಠ ಧ್ಯೇಯವಾದ ದೈವೀಕಾರುಣ್ಯದ ಪ್ರಾಪ್ತಿಯಾಗುತ್ತದೆ. ಇದಕ್ಕಾಗಿ ವ್ಯಕ್ತಿಯಲ್ಲಿ ಸುಪ್ತವಾಗಿ ಹುದುಗಿರುವ ಧಾರ್ಮಿಕಪ್ರಜ್ಞೆ ಮತ್ತು ಅಂತಸ್ಥವಾದ ದೈವಿಕತೆಯನ್ನು ಜಾಗ್ರತೆಗೊಳಿಸಲು ಧಾರ್ಮಿಕ ಗ್ರಂಥಗಳ ಅವಲಂಬನೆ ಅವಶ್ಯ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಅಭಿಪ್ರಾಯಿಸಿದ್ದಾರೆ. ಬೆಂಗಳೂರಿನ ಶ್ರೀರಾಮಾಶ್ರಮದ ಪುನರ್ವಸು ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿದ್ವಾಂಸ ವಿಷ್ಣು ಭಟ್ ಅವರ ಶಿವದರ್ಶನ ಗ್ರಂಥ ಲೋಕಾರ್ಪಣೆ ಮಾಡಿ ಅವರು ಆಶೀರ್ವಚನ ನೀಡಿದರು.

    ಪರಶಿವನ ಪಾರಮ್ಯವನ್ನು ಅರಿತ ನಮ್ಮ ಮಹರ್ಷಿಗಳು ಅದನ್ನು ಗ್ರಂಥವಾಗಿಸಿ ಕೊಟ್ಟಿದ್ದಾರೆ. ಅಂತಹ ಕೃತಿಗಳನ್ನು ಅರಿಯಲು ಮತ್ತು ಅದರ ಮೂಲಕ ಶಿವನನ್ನು ಅರಿಯಲು ವಿರಚಿತವಾದ ಕೃತಿಯೇ ಶಿವದರ್ಶನ. ಬಹುಶ್ರುತ ವಿದ್ವಾಂಸರಾದ ವಿಷ್ಣು ಭಟ್ ಡೋಂಗ್ರೆಯವರ ವಿಶೇಷ ಆಸ್ಥೆಯಿಂದ ಈ ಕೃತಿ ಹೊರಬಂದಿದೆ ಎಂದು ಶ್ರೀಗಳು ತಿಳಿಸಿದರು.

    ಕೃತಿಕಾರರಾದ ವಿಷ್ಣು ಭಟ್ ಡೋಂಗ್ರೆ ಅವರು ಶಿವದರ್ಶನ ಪುಸ್ತಕದ ಕುರಿತು ಮಾತನಾಡಿದರು. ಹವ್ಯಕ ಮಹಾಮಂಡಲದ ಅಧ್ಯಕ್ಷರಾದ ಮೋಹನ ಭಾಸ್ಕರ ಹೆಗಡೆ ಅವರು ಕೃತಿಯ ಸಂಕ್ಷಿಪ್ತ ಪರಿಚಯ ಮಾಡಿದರು. ಕಾರ್ಯಕ್ರಮದಲ್ಲಿ ಶ್ರೀರಾಮಚಂದ್ರಾಪುರ ಮಠದ ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ಡಾಲ್ಫಿನ್ ಇರಿಗೇಶನ್ ಸಂಸ್ಥೆಯ ಗಜಾನನ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ಪ್ರತಿಗಳಿಗಾಗಿ ಶ್ರೀ ಭಾರತೀ ಪ್ರಕಾಶನವನ್ನು (9449595254) ಸಂಪರ್ಕಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts