More

    ನಾವಿದ್ದಲ್ಲಿಗೇ ಬಂದು ಹರಸುವರು ಶ್ರೀರಾಘವೇಂದ್ರ ಸ್ವಾಮಿಗಳು; ಗುರುಸಾರ್ವಭೌಮರ 349ನೇ ಆರಾಧನೆ

    | ಶ್ರೀ ಶ್ರೀ ಸುಬುಧೇಂದ್ರ ತೀರ್ಥರು

    ರಾಯರ ಪೂರ್ವಾರಾಧನೆ ಇಂದು: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಶ್ರೀ ರಾಘವೇಂದ್ರಸ್ವಾಮಿಗಳ 349ನೇ ಆರಾಧನೆ ಮಹೋತ್ಸವದ ಪೂರ್ವಾರಾಧನೆ ಮಂಗಳವಾರ ಜರುಗಲಿದೆ. ತಿರುಮಲ ತಿರುಪತಿ ದೇವಸ್ಥಾನದಿಂದ ಶೇಷವಸ್ತ್ರವನ್ನು ತಂದು ಸಮರ್ಪಿಸಲಾಗುವುದು. ನಂತರ ರಾಯರ ಮೂಲ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ಪೂಜಾ ಕಾರ್ಯಕ್ರಮಗಳು ನಡೆಯಲಿವೆ.

    ಮಂತ್ರಾಲಯ ಶ್ರೀರಾಘವೇಂದ್ರ ತೀರ್ಥ ಗುರುಸಾರ್ವಭೌಮರ ಆರಾಧನೆ ಬಂತೆಂದರೆ ಇಡೀ ದೇಶವೇ ಭಕ್ತಿ, ಸಡಗರ, ಸಂಭ್ರಮದಲ್ಲಿ ತೇಲಾಡುವಂತೆ ಇರುತ್ತಿತ್ತು. ಏಕೆಂದರೆ ಅಗಮ್ಯ ಮಹಿಮರು, ಭಕ್ತ ಜನೋದ್ಧಾರಕರು, ಭಕ್ತಾಭೀಷ್ಟ ಪ್ರದಾತರು ಆದ ಶ್ರೀರಾಘವೇಂದ್ರ ಗುರುಗಳನ್ನು ಕಂಡರೆ ಎಲ್ಲರಿಗೂ ಎಲ್ಲಿಲ್ಲದ ಶ್ರದ್ಧೆ, ಭಕ್ತಿ ಇತ್ಯಾದಿಗಳು ತುಂಬಿ ತುಳುಕುತ್ತಿತ್ತು.

    ತುಂಗಭದ್ರೆಯ ಒಡಲಲ್ಲಿ ನೆಲೆಸಿರುವ ರಾಯರ ಬೃಂದಾವನವನ್ನು ಕಂಡರೆ ಧನ್ಯತೆ, ಜೀವನದ ಸಾರ್ಥಕತೆ ಎನಿಸುವಂತೆ ಆಗುತ್ತದೆ. ಶ್ರೀರಾಯರು ಮಂತ್ರಾಲಯಕ್ಕೆ ಶರಣಾಗಿ ಬಂದ ಭಕ್ತರನ್ನು ಇದುವರೆಗೂ ಕೈಬಿಟ್ಟ ಇತಿಹಾಸವೇ ಇಲ್ಲ. ಸಂತಾನ, ಸಂಪತ್ತು, ಪರಿಶುದ್ಧವಾದ ಭಕ್ತಿ, ತತ್ತ್ವಜ್ಞಾನ, ವಾಕ್​ಪಟುತ್ವ, ದೇಹದಾರ್ಢ್ಯತೆ ಮುಂತಾದ ಫಲಗಳನ್ನು ಕೊಟ್ಟು ಸರ್ವದಾ ಭಕ್ತರ ಪಾಲಿಗೆ ಅನುಗ್ರಹಿಸುವ ಮಹಾಗುರುಗಳಾಗಿ ಕಂಗೊಳಿಸಿರುತ್ತಾರೆ. ಕೇವಲ ಮೇಲ್ಕಂಡ ಫಲಗಳಲ್ಲದೆ ಪಾರಮಾರ್ಥಿಕ ಲೋಕಕ್ಕೆ ಸಾಧನವಾದ ಸಮಗ್ರ ಶಾಸ್ತ್ರಗಳ ಗ್ರಂಥಗಳನ್ನು ರಚನೆ ಮಾಡಿಕೊಟ್ಟಿದ್ದಲ್ಲದೆ, ಜ್ಞಾನಪಿಪಾಸುಗಳಾಗಿ ಬಂದ ಭಕ್ತರಿಗೆ ತತ್ತ್ವಜ್ಞಾನದ ಧಾರೆ ಎರೆದು ಪರಲೋಕದ ದಾರಿ ತೋರಿಸುವ ಮಹಾಪ್ರಭುಗಳಾಗಿದ್ದಾರೆ.

    ಹಾಗಾಗೇ ಅವರನ್ನು ಅಗಮ್ಯಮಹಿಮಾಲೋಕೇ ರಾಘವೇಂದ್ರೋ ಮಹಾಶಯಾಃ ಎಂಬುದಾಗಿ ಅಪ್ಪಣ್ಣಾ ಚಾರ್ಯರು ಕೊಂಡಾಡಿದ್ದಾರೆ. ಅವರಲ್ಲಿ ಶ್ರದ್ಧೆಯಿಂದ ಅವರ ಮೇಲಿನ ಸ್ತೋತ್ರ, ಸ್ತುತಿ ಪದಗಳನ್ನು ಹಾಡಿ, ಕೊಂಡಾಡಿ ಮಹಾಪ್ರಾಕಾರಕ್ಕೆ ಪ್ರದಕ್ಷಿಣೆ ನಮಸ್ಕಾರಾದಿಗಳನ್ನು ಮಾಡಿ ಬೃಂದಾವನಕ್ಕೆ ಅಭಿಷಿಕ್ತವಾದ ಪಾದೋದಕವನ್ನು ಪ್ರಾಶನ ಮಾಡಿ, ಅವರಿಗೆ ಸಮರ್ಪಿಸಿದ ಹಸ್ತೋದಕವನ್ನು ಭುಂಜಿಸಿ, ಅವರ ಮೃತ್ತಿಕೆಯನ್ನು ಲೇಪಿಸಿಕೊಂಡು ಅವರನ್ನೇ ಅನನ್ಯವಾಗಿ ನಂಬಿ, ಅವರು ರಚಿಸಿದ ಗ್ರಂಥಗಳ ಪಾಠಪ್ರವಚನಾದಿಗಳನ್ನು ಮಾಡುತ್ತಾ ಆಚಾರಶೀಲನಾಗಿರುವಂತಹ ವ್ಯಕ್ತಿಗೆ ಸಮಾನನಾಗಿ ಮತ್ತೊಬ್ಬ ವ್ಯಕ್ತಿಯನ್ನು ಊಹಿಸಲೂ ಸಾಧ್ಯವಿಲ್ಲ. ಇಂತಹ

    ಅಪರೋಕ್ಷೀಕೃತಶೀಶರಾದ ಶ್ರೀರಾಘವೇಂದ್ರ ಸ್ವಾಮಿಗಳ 2020ನೇ ವರ್ಷದ ಆರಾಧನೆಯ ಸಂಭ್ರಮಕ್ಕೆ ಕರೊನಾ ತಣ್ಣೀರೆರಚಿದೆ. ಭಕ್ತರ ಮುಗಿಲು ಮುಟ್ಟುವ ಸಂಭ್ರಮಕ್ಕೆ ತಡೆಯೊಡ್ಡಿದೆ.

    ಆದರೇನಂತೆ, ಕರೆದಲ್ಲಿಗೆ ಬರುವ ಎಂಬ ಖ್ಯಾತಿಯುಳ್ಳ ಶ್ರೀರಾಘವೇಂದ್ರ ಸ್ವಾಮಿಗಳವರು ನಾವಿದ್ದಲ್ಲಿಗೆ ಬಂದು ಹರಸುವ ಕಾಮಧೇನುಗಳಾಗಿದ್ದಾರೆ. ಬೇಡಿದ ಇಷ್ಟಾರ್ಥಗಳನ್ನು ಕೊಡುವ ಕಲ್ಪವೃಕ್ಷ ಚಿಂತಾಮಣಿಗಳಾಗಿದ್ದಾರೆ. ಹೀಗಿರುವಾಗ ನಾವೇಕೆ ಚಿಂತಿಸಬೇಕು. ಹತ್ತಿರವಿರುವ ಮಠಗಳಲ್ಲಿ ನಡೆಯುವ ಆರಾಧನೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಾ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿಯಮಗಳನ್ನು ಪಾಲಿಸುತ್ತಾ ಗುರುರಾಯರ ಸೇವೆಗೆ ಅರ್ಪಿಸಿಕೊಳ್ಳೋಣ.

    ಮನೆಯೇ ಮಂತ್ರಾಲಯ: ಕೆಲಕಡೆ ತುಂಬಾ ನಿರ್ಬಂಧವಿದ್ದರೆ ರಾಯರ ಆರಾಧನೆಯ ಮೂರು ದಿವಸಗಳ ಕಾಲ ಮನೆಯನ್ನೇ ಮಂತ್ರಾಲಯವನ್ನಾಗಿ ಮಾಡಿಕೊಳ್ಳೋಣ. ದೇವರ ಜಗುಲಿಯ ಮೇಲೆ ಸಾರಿಸಿ ರಂಗವಲ್ಲಿ ಹಾಕಿ ರಾಯರ ಚಿತ್ರಪಟವನ್ನೋ, ಪ್ರತಿಮೆಯನ್ನೋ, ಲೋಹದ ಬೃಂದಾವನವನ್ನೋ ಇಟ್ಟು ದೀಪಗಳನ್ನು ಹಚ್ಚಿ, ಪುಷ್ಪಗಳಿಂದ ಅಲಂಕರಿಸಿ, ನಮಗೆ ಶಕ್ತಿ ಇದ್ದಷ್ಟು ಹಣ್ಣು-ಕಾಯಿ ಮುಂತಾದ ಪದಾರ್ಥಗಳನ್ನು ಸಮರ್ಪಿಸಿ ಮಂಗಳಾರತಿ ಮಾಡೋಣ. ರಾಯರ ಚಿತ್ರಪಟದ ಮುಂದೆ ಎರಡು ತುಂಬಿದ ಕಾಯಿಗಳನ್ನು ಇಟ್ಟು ಪ್ರಾರ್ಥಿಸಿ ಮನೆಯ ಒಂದು ಶುದ್ಧ ಸ್ಥಳದಲ್ಲಿ ಚಿತ್ರಪಟ ಕಾಯಿಗಳನ್ನು ಇಟ್ಟು ಸಂಕಲ್ಪ ಪುರಸ್ಸರವಾಗಿ ಮೂರು ದಿನಗಳ ಕಾಲ ಪ್ರದಕ್ಷಿಣೆ ನಮಸ್ಕಾರ ಅಷ್ಟೋತ್ತರ ಪಾರಾಯಣ ಭಜನೆ ಮುಂತಾದ ಕಾರ್ಯಕ್ರಮಗಳನ್ನು ಮಾಡುತ್ತಾ ರಾಯರನ್ನು ಭಕ್ತಿಯಿಂದ ಸೇವಿಸಿದರೆ ಮನೆಯೇ ಮಂತ್ರಾಲಯವಾಗುವುದರಲ್ಲಿ ಸಂಶಯವಿಲ್ಲ. ಒಂದು ಮಾತ್ರ ಅವಶ್ಯವಾಗಿ ಎಲ್ಲರೂ ಗಮನದಲ್ಲಿ ಇಟ್ಟುಕೊಳ್ಳಬೇಕು. ಪ್ರತಿವರ್ಷವೂ ರಾಯರ ಆರಾಧನೆ ಸಂದರ್ಭದಲ್ಲಿ ನೀವೆಲ್ಲರೂ ಮಂತ್ರಾಲಯಕ್ಕಾಗಲಿ ಇತರ ಶಾಖಾ ಮಠಗಳಿಗಾಗಲಿ ಸೇವೆಯನ್ನು ಸಲ್ಲಿಸುತ್ತಿದ್ದರೆ ಅದನ್ನು ಭಕ್ತಿಯಿಂದ ಸಮರ್ಪಿಸಿ. ಕೊಟ್ಟದ್ದನ್ನು ಅನಂತಮಾಡಿಕೊಡುವ ಎಂಬ ಹೆಗ್ಗಳಿಕೆಗೆ ಪಾತ್ರರಾದ ಭಗವಂತನ ಏಕಾಂತ ಭಕ್ತರಾದ ಶ್ರೀರಾಘವೇಂದ್ರಸ್ವಾಮಿಗಳವರಿಗೆ ಸಮರ್ಪಿಸಿದ ಪ್ರತಿಯೊಂದು ಇಮ್ಮಡಿ, ಮುಮ್ಮಡಿಯಾಗಿ ನಿಮ್ಮ ಜೀವನದುದ್ದಕ್ಕೂ ತಿರುಗಿ ಬರುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.

    ಈ ನಮ್ಮ ದೇಶಕ್ಕೆ ಒದಗಿ ಬಂದಿರುವ ವಿಪತ್ತು ಬೇಗ ಪರಿಹಾರ ವಾಗಲಿ, ಸಮಗ್ರ ಜನತೆಯು ಸುಖ-ಶಾಂತಿ- ಸಮೃದ್ಧಿಯಿಂದ ಆರೋಗ್ಯವಂತರಾಗಿ ಬಾಳುವಂತಾಗಲಿ ಎಂಬುದಾಗಿ ಶ್ರೀ ಮದ್ರಾಘವೇಂದ್ರತೀರ್ಥ ಗುರ್ವಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ನಮ್ಮ ಉಪಾಸ್ಯಮೂರ್ತಿ ಶ್ರೀಮನ್ಮೂಲ ರಘುಪತಿ ವೇದವ್ಯಾಸ ದೇವರಲ್ಲಿ ಪ್ರಾರ್ಥಿಸುತ್ತೇವೆ.

    ಸರ್ವೆಜನಾಃ ಸುಖಿನೋಭವಂತು |

    ಸಮಸ್ತ ಸನ್ಮಂಗಲಾನಿಭವಂತು ||

    ಇತಿ ನಾರಾಯಣ ಸ್ಮರಣೆಗಳು

    (ಲೇಖಕರು: ಪೀಠಾಧಿಪತಿಗಳು, ಶ್ರೀ ರಾಘವೇಂದ್ರಸ್ವಾಮಿಗಳವರ ಮಠ, ಮಂತ್ರಾಲಯ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts