More

    ಹನಿ-ತುಂತುರು ನೀರಾವರಿಗೆ ಬೇಡಿಕೆ

    ಯಲಬುರ್ಗಾ: ಮಳೆ ಕೊರತೆಯಿಂದ ಕೊಳವೆಬಾವಿಗಳ ಅಂತರ್ಜಲ ಕುಸಿತ, ಅಧಿಕ ಖರ್ಚು, ಬೆಳೆಗಳ ಇಳುವರಿ ಕುಂಠಿತ ಇತರ ಸಮಸ್ಯೆಗಳಿಂದ ತತ್ತರಿಸಿರುವ ರೈತರು ಹನಿ, ತುಂತುರು ನೀರಾವರಿಯತ್ತ ಮುಖ ಮಾಡಿದ್ದು, ಸ್ಪಿಂಕ್ಲರ್ ಮತ್ತು ಡ್ರಿಪ್ ಸೆಟ್‌ಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ.

    ಯಲಬುರ್ಗಾ ಹಾಗೂ ಕುಕನೂರು ತಾಲೂಕಿನಲ್ಲಿ ಮಳೆ ಅಭಾವದಿಂದ ಅನೇಕ ಕೊಳವೆಬಾವಿ, ಹಳ್ಳ-ಕೊಳ್ಳಗಳು ಬತ್ತಿ ಹೋಗಿವೆ. ಅಲ್ಪಸ್ವಲ್ಪ ನೀರಿರುವ ಪಂಪ್‌ಸೆಟ್‌ನ ರೈತರು ತುಂತುರು ನೀರಾವರಿ ಪದ್ಧತಿ ಅಳವಡಿಸಿಕೊಂಡು ಕಡಿಮೆ ಖರ್ಚು, ಕಡಿಮೆ ಭೂಮಿಯಲ್ಲಿ ಹೆಚ್ಚು ಇಳುವರಿ ಪಡೆಯುತ್ತಿದ್ದಾರೆ. ಅವಳಿ ತಾಲೂಕಿನ ರೈತರಿಂದ 2023-24ನೇ ಸಾಲಿನಲ್ಲಿ ಸ್ಪಿಂಕ್ಲರ್ ಪೈಪ್‌ಗಾಗಿ 3400 ಅರ್ಜಿಗಳು ಬಂದಿದ್ದು, ಈವರೆಗೆ ಒಂದು ಸಾವಿರ ಸ್ಪಿಂಕ್ಲರ್ ಸೆಟ್ ವಿತರಣೆಯಾಗಿವೆ. ಇನ್ನೂ 2400ಕ್ಕೂ ಅಧಿಕ ಅರ್ಜಿಗಳು ಇದ್ದು, ಕೃಷಿ ಇಲಾಖೆಯಿಂದ ಸರ್ಕಾರಕ್ಕೆ ಹೆಚ್ಚಿನ ಬೇಡಿಕೆ ಸಲ್ಲಿಸಲಾಗಿದೆ.

    ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳುವ ರೈತರಿಗೆ ಸರ್ಕಾರವೂ ಸಬ್ಸಿಡಿ ನೀಡುತ್ತಿದೆ. ನೀರಾವರಿ ಮೂಲ ಹೊಂದಿದ ಎಲ್ಲ ವರ್ಗದ ರೈತರಿಗೆ ಶೇ.90 ಸಹಾಯಧನದಡಿ ಈಗಾಗಲೇ ಯಲಬುರ್ಗಾ ರೈತ ಸಂಪರ್ಕ ಕೇಂದ್ರದಿಂದ-420, ಹಿರೇವಂಕಲಕುಂಟಾ-330, ಮಂಗಳೂರು-125 ಹಾಗೂ ಕುಕನೂರಿನಲ್ಲಿ 115 ಫಲಾನುಭವಿಗಳಿಗೆ ಹನಿ ಮತ್ತು ತುಂತುರು ನೀರಾವರಿ ಸೆಟ್ ವಿತರಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ರೈತರಿಂದ ಹನಿ ನೀರಾವರಿಗೆ ಹೆಚ್ಚಿನ ಬೇಡಿಕೆ ಇದ್ದು, ರೈತ ಸಂಪರ್ಕ ಕೇಂದ್ರಗಳ ಮುಂದೆ ಪೈಪ್‌ಗಳನ್ನು ಪಡೆಯಲು ನೂಕುನುಗ್ಗಲು ಏರ್ಪಟ್ಟಿದೆ.

    ಮಳೆ ಕೊರತೆಯಿಂದ ಅಂತರ್ಜಲಮಟ್ಟ ಸಂದಿಗ್ಧ ಪರಿಸ್ಥಿತಿಯಲ್ಲಿದೆ. ಮುಂಗಾರು ಹಂಗಾಮ ಬರಗಾಲ ಎಂದು ಘೋಷಣೆಯಾಗಿರುವುದರಿಂದ ನೀರಿನ ಮಿತ ಬಳಕೆಗೆ ಕಾರಂಜಿ ಸೆಟ್ ಅನುಕೂಲವಾಗಿದೆ. ಇದರಿಂದ ಬೆಳೆಹಾನಿಯನ್ನೂ ತಪ್ಪಿಸಬಹುದು. ಸಹಾಯಧನದಲ್ಲಿ ಸಿಗುವ ತುಂತುರು ಹನಿ ನೀರಾವರಿ ಘಟಕದ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು.
    ಪ್ರಾಣೇಶ ಹಾದಿಮನಿ
    ಸಹಾಯಕ ಕೃಷಿ ನಿರ್ದೇಶಕ, ಯಲಬುರ್ಗಾ

    ಮಳೆ ಕೊರೆತಯಿಂದ ಕೃಷಿ ಪಂಪ್‌ಸೆಟ್ ನೀರು ಕಡಿಮೆ ಆಗಿದೆ. ನೀರು ಹಾಯಿಸುವ ಮೂಲಕ ಫಸಲು ಪಡೆಯಲು ಆಗುತ್ತಿಲ್ಲ. ಸರ್ಕಾರದ ಸಹಾಯಧನದಡಿ ಕೊಡಲಾದ ತುಂತುರು ನೀರಾವರಿ ಘಟಕ ಅಳವಡಿಸಿಕೊಂಡಿದ್ದು, ಉತ್ತಮ ಇಳುವರಿ ಪಡೆಯಲು ಅನುಕೂಲವಾಗಿದೆ.
    ನಾಗರಾಜ
    ತಲ್ಲೂರಿನ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts