3 ಪಂದ್ಯಗಳನ್ನು ಆಡದ ಮಾತ್ರಕ್ಕೆ ಆತ…; ವಿರಾಟ್​ ಕುರಿತು ಅಚ್ಚರಿಯ ಹೇಳಿಕೆ ನೀಡಿದ ಮಾಜಿ ಕ್ರಿಕೆಟಿಗ

Virat Kohli
Published on

ಯುಎಸ್​ಎ: 17ನೇ ಆವೃತ್ತಿಯ ಐಪಿಎಲ್​ನಲ್ಲಿ ಭರ್ಜರಿ ಬ್ಯಾಟಿಂಗ್​ ಮೂಲಕ ಆರೆಂಜ್​ ಕ್ಯಾಪನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಹಲವು ದಾಖಲೆಗಳನ್ನು ಬರೆದಿದ್ದ ವಿರಾಟ್​ ಕೊಹ್ಲಿ ಟಿ20 ವಿಶ್ವಕಪ್​ನಲ್ಲೂ ಟಾಪ್​ ರನ್​ ಸ್ಕೋರರ್​ ಆಗಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಚುಟುಕು ವಿಶ್ವಸಮರದಲ್ಲಿ ವಿರಾಟ್​ ಯಾಕೋ ಮಂಕಾದಂತೆ ಕಾಣುತ್ತಿದ್ದು, ಆಡಿರುವ ಮೂರು ಪಂದ್ಯಗಳಲ್ಲಿ ಗಳಿಸಿರುವುದು ಕೇವಲ ಐದು ರನ್​ ಮಾತ್ರ. ಇತ್ತ ವಿರಾಟ್​ ಕೊಹ್ಲಿ ಫಾರ್ಮ್​ ಟೀಮ್​ ಇಂಡಿಯಾವನ್ನು ಚಿಂತೆಗೆ ದೂಡಿದ್ದು, ಈ ಸಂಬಂಧ ಮಾಜಿ ಕ್ರಿಕೆಟಿಗ ನೀಡಿರುವ ಹೇಳಿಕೆ ಸಖತ್​ ವೈರಲ್​ ಆಗುತ್ತಿದೆ.

ಟಿ-20 ವಿಶ್ವಕಪ್​ ಆರಂಭಕ್ಕೂ ಹಲವು ಮಾಜಿ ಆಟಗಾರರು ಅಮೆರಿಕದಲ್ಲಿ ಪ್ರಪಥಮ ಬಾರಿಗೆ ಟೂರ್ನಿ ಆಯೋಜನೆಗೊಳ್ಳುತ್ತಿದ್ದು, ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದು ಮತ್ತು ರನ್​ ಗಳಿಸುವುದು ಕಷ್ಟವಾಗಬಹುದು ಎಂದು ಅಭಿಪ್ರಾಯಪಟ್ಟಿದ್ದರು. ವಿರಾಟ್​ ಕೊಹ್ಲಿ ಸಹ ರನ್​ ಗಳಿಸಲು ಪರದಾಡಬಹುದು ಎಂದು ಹಲವರು ಅಭಿಪ್ರಾಯಪಟ್ಟಿದ್ದರು. ಇದೀಗ ಇದಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ ಸುನಿಲ್​ ಗವಾಸ್ಕರ್​ ವಿರಾಟ್​ ಕೊಹ್ಲಿಯನ್ನು ಬೆಂಬಲಿಸಿ ಮಾತನಾಡಿದ್ದಾರೆ.

Virat Gavaskar

ಈ ಕುರಿತು ಮಾತನಾಡಿರುವ ಅವರು, ಆಡಿರುವ ಮೂರು ಪಂದ್ಯಗಳಲ್ಲಿ ಕಡಿಮೆ ಮೊತ್ತಕ್ಕೆ ಔಟಾದರು ಎಂಬ ಕಾರಣಕ್ಕೆ ಅವರು ಚೆನ್ನಾಗಿ ಆಟವಾಡುತ್ತಿಲ್ಲ ಎಂದರ್ಥವಲ್ಲ. ಕೆಲವೊಮ್ಮೆ ಉತ್ತಮವಾಗಿ ಬೌಲಿಂಗ್​ ಮಾಡಿದಾಗ ಬ್ಯಾಟ್ಸ್​ಮನ್​ ಬೌಲರ್​ಗಳಿಗೆ ವಿಕೆಟ್​ ಒಪ್ಪಿಸಬೇಕಾಗುತ್ತದೆ.  ಆದರೆ ಬೇರೆ ದಿನದಲ್ಲಿ ಆ ಚೆಂಡು ವೈಡ್​ ಅಥವಾ ಬೌಂಡರಿ ಗೆರೆ ದಾಟಬಹುದು.  ಹೀಗಾಗಿ ಕೊಹ್ಲಿ ಮೇಲೆ ವಿಶ್ವಾಸ ತೋರಿಸಬೇಕು. ಇವತ್ತಲ್ಲ ನಾಳೆ ಕೊಹ್ಲಿ ಮತ್ತೆ ತಮ್ಮ ಅದ್ಭುತ ಪಾರ್ಮ್​ಗೆ ಮರಳುತ್ತಾರೆ. ಜನ ಅವರಲ್ಲಿ ನಂಬಿಕೆ ಇರಿಸಬೇಕು ಎಂದು ಹೇಳಿದ್ದಾರೆ.

ಯಾವುದೇ ಆಟಗಾರನಿಗೆ ತಂಡಕ್ಕಾಗಿ ಪಂದ್ಯವನ್ನು ಗೆಲ್ಲಿಸುವುದು ದೊಡ್ಡ ಪ್ರೇರಣೆಯಾಗಿದೆ. ವಿಶೇಷವಾಗಿ ನೀವು ನಿಮ್ಮ ದೇಶಕ್ಕಾಗಿ ಆಡುವಾಗ. ಕೊಹ್ಲಿ ಹಲವು ವರ್ಷಗಳಿಂದ ಟೀಂ ಇಂಡಿಯಾ ಪರ ಉತ್ತಮ ಕೆಲಸ ಮಾಡಿದ್ದಾರೆ ಮತ್ತು ತಂಡವನ್ನು ಅನೇಕ ಪಂದ್ಯಗಳಲ್ಲಿ ಗೆಲುವಿನ ದಡ ಸೇರಿಸಿದ್ದಾರೆ. ವಿರಾಟ್​ ಕೊಹ್ಲಿ ಸದ್ಯದ ಪರಿಸ್ಥಿತಿಯನ್ನು ಜನ ಅರ್ಥಮಾಡಿಕೊಂಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ನಾವು ಇನ್ನೂ ಪಂದ್ಯಾವಳಿಯ ಆರಂಭಿಕ ಹಂತದಲ್ಲಿದ್ದೇವೆ. ಸೂಪರ್-8 ಪಂದ್ಯಗಳನ್ನು ಆಡಬೇಕಾಗಿದೆ, ನಂತರ ಸೆಮಿ-ಫೈನಲ್ ಮತ್ತು ಫೈನಲ್ ಆಡಬೇಕಿದೆ. ಹೀಗಾಗಿ ಕೊಹ್ಲಿ ಮೇಲೆ ನಂಬಿಕೆ ಇಡಬೇಕು. ಇದು ಕೊಹ್ಲಿಯ ಆತ್ಮಸ್ಥೈರ್ಯ ಹೆಚ್ಚಲು ಸಹಕಾರಿಯಾಗುತ್ತದೆ ಎಂದು ಮಾಜಿ ಕ್ರಿಕೆಟಿಗ ಸುನಿಲ್​ ಗವಾಸ್ಕರ್​ ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net