

ಹೈದರಾಬಾದ್: ನಿನ್ನೆ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧದ ನಡೆದ ಐಪಿಎಲ್ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಅವರ ಅತ್ಯುತ್ತಮ ಬೌಲಿಂಗ್ ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ ತಂಡ ಜಯಭೇರಿ ಬಾರಿಸಿತು.
ಈ ಪಂದ್ಯದಲ್ಲಿ ಆರ್ಆರ್ ತಂಡದ ವಿಧ್ವಂಸಕ ಬ್ಯಾಟ್ಸ್‌ಮನ್‌ಗಳಾದ ಜೋಶ್ ಬಟ್ಲರ್ ಮತ್ತು ಸಂಜು ಸ್ಯಾಮ್ಸನ್ ಅವರನ್ನು ಮೊದಲ ಓವರ್‌ನಲ್ಲೇ ಭುವನೇಶ್ವರ್ ಕುಮಾರ್ ಡಕೌಟ್ ಮಾಡಿದರು. ಅಲ್ಲದೆ, ಪಂದ್ಯದ ಕೊನೆಯ ಓವರ್‌ನಲ್ಲಿ 12 ರನ್‌ಗಳನ್ನು ರಕ್ಷಿಸಿಸುವ ಮೂಲಕ ಕೇವಲ ಒಂದು ರನ್ ಅಂತರದಿಂದ ಎಸ್ಆರ್ಎಚ್ ಗೆಲುವು ಸಾಧಿಸಲು ಭುವಿ ನೆರವಾದರು. ಅಲ್ಲದೆ, ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಸಹ ಸ್ವೀಕರಿಸಿದರು.
ಈ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರನ್ನು ಕ್ಲೀನ್ ಬೋಲ್ಡ್ ಮಾಡಿದ ಎಸೆತ ಅದ್ಭುತವಾಗಿ ಸ್ವಿಂಗ್ ಆಯಿತು. ಆ ಎಸೆತವನ್ನು ನೋಡಿದರೆ ಭುವಿಯನ್ನು ಸ್ವಿಂಗ್ ಕಿಂಗ್ ಎಂದು ಏಕೆ ಕರೆಯುತ್ತಾರೆ ಎಂಬುದು ಅರ್ಥವಾಗುತ್ತದೆ. ಬಹಳ ಸಮಯದ ನಂತರ ಭುವಿ ತಮ್ಮ ಸ್ವಿಂಗ್ ಪವರ್ ತೋರಿದರು. ಸಂಜು ಸ್ಯಾಮ್ಸನ್ ಬೌಲ್ಡ್ ಆದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದರೊಂದಿಗೆ ಮತ್ತೊಂದು ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆ ಎರಡು ವಿಡಿಯೋಗಳಲ್ಲಿ ಬೌಲರ್ ಮತ್ತು ಎಸೆದ ಬಾಲ್ ಒಂದೇ ರೀತಿ ಇದೆ. ಆದರೆ, ಆಡಿದ ಬ್ಯಾಟರ್ ಮಾತ್ರ ಬೇರೆ ಬೇರೆ. ಇದಲ್ಲದೆ, ಬ್ಯಾಟರ್ಗಳು ಔಟಾದ ವಿಧಾನ ಮತ್ತು ಅಭಿವ್ಯಕ್ತಿ ಕೂಡ ಒಂದೇ ಆಗಿದೆ. 12 ವರ್ಷಗಳ ನಂತರ ಈ ಸೀನ್ ಮತ್ತೆ ರಿಪೀಟ್ ಆಗಿದೆ. ಆ ಬೌಲರ್ ಬೇರೆ ಯಾರೂ ಅಲ್ಲ ಭುವನೇಶ್ವರ್ ಕುಮಾರ್. ಭುವಿ ನಿನ್ನೆ ಎಸೆದ ಎಸೆತಕ್ಕೆ ಸಂಜು ಸ್ಯಾಮ್ಸನ್ ಕ್ಲೀನ್ ಬೋಲ್ಡ್ ಆದರು. 12 ವರ್ಷಗಳ ಹಿಂದೆ ಇದೇ ರೀತಿಯ ಎಸೆತವನ್ನು ಆಡಲಾಗದೇ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಉಮರ್ ಅಕ್ಮಲ್ ಬೌಲ್ಡ್ ಆಗಿದ್ದರು. ಸರಿಯಾಗಿ 12 ವರ್ಷಗಳ ಹಿಂದೆ ಭುವಿಯ ಸ್ವಿಂಗ್ ಪವರ್ ನೋಡಿ ಬೆಚ್ಚಿಬಿದ್ದಿದ್ದರು. ಈಗ ಅದೇ ರೀತಿ ಸಂಜು ಕೂಡ ಔಟ್ ಆಗಿದ್ದಾರೆ.
2012 ಡಿಸೆಂಬರ್ 25ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಟಿ20 ಪಂದ್ಯ ನಡೆದಿತ್ತು. ಆ ಪಂದ್ಯದಲ್ಲಿ ಭುವಿ ವಿಶ್ವರೂಪ ತೋರಿದರು. ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿತ್ತು. ಇದರೊಂದಿಗೆ ಟೀಂ ಇಂಡಿಯಾದ ಯಶಸ್ಸಿನ ಮೇಲೆ ಯಾರಿಗೂ ನಿರೀಕ್ಷೆ ಇರಲಿಲ್ಲ. ಆದರೆ, ಭುವನೇಶ್ವರ್ ಕುಮಾರ್ ಪಾಕಿಸ್ತಾನದ ಅಗ್ರ ಕ್ರಮಾಂಕವನ್ನು ಸೋಲಿಸಿದರು. ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲಿ ಓಪನರ್ ನಾಸೀರ್ ಜಮ್ಶೆಡ್ ಮತ್ತು ಮೂರನೇ ಓವರ್‌ನಲ್ಲಿ ಮತ್ತೊಬ್ಬ ಆರಂಭಿಕ ಆಟಗಾರ ಅಹ್ಮದ್ ಶೆಹಜಾದ್ ಮತ್ತು ಉಮರ್ ಅಕ್ಮಲ್ ವಿಕೆಟ್ ಪಡೆದರು. ಒಟ್ಟು 3 ವಿಕೆಟ್ ಪಡೆದು ಕೇವಲ 12 ರನ್ ನೀಡಿದರು. ಇದರಿಂದ ಟೀಮ್ ಇಂಡಿಯಾಗೆ ಗೆಲ್ಲುವ ಭರವಸೆ ಇತ್ತು. ಆದರೂ ಅಂತಿಮವಾಗಿ ಪಾಕಿಸ್ತಾನದ ಕಡೆಗೆ ವಿಜಯಲಕ್ಷ್ಮೀ ಒಲಿಯಿತು.
ಈ ಪಂದ್ಯದಲ್ಲು ಭುವಿ ಪಡೆದ ಮೂರು ವಿಕೆಟ್‌ಗಳ ಪೈಕಿ ಉಮರ್ ಅಕ್ಮಲ್ ಅವರ ವಿಕೆಟ್ ಪಂದ್ಯದ ಹೈಲೈಟ್ ಆಯಿತು. ಔಟ್ ಸ್ವಿಂಗ್ ಬಾಲ್ಗಳಿಂದ ಉಮರ್ ಅಕ್ಮಲ್ರನ್ನು ಕಾಡುತ್ತಿದ್ದ ಭುವಿ ಒಮ್ಮೆಲೆ ಇನ್ ಸ್ವಿಂಗ್ ಎಸೆದರು. ಆ ಚೆಂಡಿಗೆ ಅಕ್ಮಲ್ ಬಳಿ ಉತ್ತರವಿರಲಿಲ್ಲ. ಹೀಗಾಗಿ ಔಟ್ ಆದರು. ಇದೀಗ ಭುವಿ ಅದೇ ರೀತಿಯ ಚೆಂಡನ್ನು ಸಂಜು ಸ್ಯಾಮ್ಸನ್ಗೂ ಎಸೆದರು. ಅಕ್ಮಲ್ ರೀತಿಯಲ್ಲೇ ಸ್ಯಾಮ್ಸನ್ ಕೂಡ ಔಟ್ ಆಗಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. (ಏಜೆನ್ಸೀಸ್)