

ಬೆಂಗಳೂರು: ರಣಜಿ ಚಾಂಪಿಯನ್ ಮುಂಬೈ ವಿರುದ್ಧ ಲಖನೌದ ಏಕನಾ ಸ್ಟೇಡಿಯಂನಲ್ಲಿ ಅಕ್ಟೋಬರ್ 1ರಿಂದ 5ರವರೆಗೆ ನಡೆಯಲಿರುವ ಇರಾನಿ ಕಪ್ ಪಂದ್ಯದಲ್ಲಿ ಋತುರಾಜ್ ಗಾಯಕ್ವಾಡ್ ಶೇಷ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಅಭಿಮನ್ಯು ಈಶ್ವರನ್ ತಂಡದ ಉಪನಾಯಕರಾಗಿ ನೇಮಕಗೊಂಡಿದ್ದಾರೆ. ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್ ಮತ್ತು ವೇಗಿ ಪ್ರಸಿದ್ಧ ಕೃಷ್ಣ ತಂಡದಲ್ಲಿರುವ ಇಬ್ಬರು ಕನ್ನಡಿಗರಾಗಿದ್ದಾರೆ. ಇಶಾನ್ ಕಿಶನ್ ಕೀಪರ್ ಆಗಿ ಸ್ಥಾನ ಪಡೆದಿರುವುದರಿಂದ, ಬಾಂಗ್ಲಾ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗುವ ಸಾಧ್ಯತೆ ಇಲ್ಲ. ಶೇಷ ಭಾರತ ತಂಡದಲ್ಲಿರದ ಸಂಜು ಸ್ಯಾಮ್ಸನ್, ಟಿ20 ತಂಡದಲ್ಲಿ ಕೀಪರ್ ಆಗಿ ಆಡಲಿದ್ದಾರೆ ಎನ್ನಲಾಗಿದೆ.
ಶೇಷ ಭಾರತ ತಂಡ: ಋತುರಾಜ್ ಗಾಯಕ್ವಾಡ್ (ನಾಯಕ), ಅಭಿಮನ್ಯು ಈಶ್ವರನ್ (ಉಪನಾಯಕ), ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್, ಧ್ರುವ ಜುರೆಲ್ (ವಿ.ಕೀ), ಇಶಾನ್ ಕಿಶನ್ (ವಿ.ಕೀ), ಮಾನವ್ ಸುಥರ್, ಸಾರಾಂಶ್ ಜೈನ್, ಪ್ರಸಿದ್ಧ ಕೃಷ್ಣ, ಮುಕೇಶ್ ಕುಮಾರ್, ಯಶ್ ದಯಾಳ್, ರಿಕಿ ಭುಯಿ, ಶಾಶ್ವತ್ ರಾವತ್, ಖಲೀಲ್ ಅಹ್ಮದ್, ರಾಹುಲ್ ಚಹರ್.
ಕಾನ್ಪುರ ಟೆಸ್ಟ್ ಆಡದಿದ್ದರೆ ಇರಾನಿಗೆ ಜುರೆಲ್, ದಯಾಳ್
ವಿಕೆಟ್ ಕೀಪರ್-ಬ್ಯಾಟರ್ ಧ್ರುವ ಜುರೆಲ್ ಮತ್ತು ವೇಗಿ ಯಶ್ ದಯಾಳ್ ಭಾರತ ಟೆಸ್ಟ್ ತಂಡದಲ್ಲಿರುವ ನಡುವೆಯೂ ಶೇಷ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಶುಕ್ರವಾರದಿಂದ ಕಾನ್ಪುರದಲ್ಲಿ ನಡೆಯಲಿರುವ ಬಾಂಗ್ಲಾ ವಿರುದ್ಧದ 2ನೇ ಟೆಸ್ಟ್ ಪಂದ್ಯಕ್ಕೆ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯದಿದ್ದರೆ ಮಾತ್ರ ಇವರಿಬ್ಬರು ಲಖನೌಗೆ ತೆರಳಿ ಇರಾನಿ ಕಪ್ನಲ್ಲಿ ಆಡಲಿದ್ದಾರೆ. ಒಂದು ವೇಳೆ ಪಂದ್ಯದ ನಡುವೆ ಪಂತ್ ಗಾಯಗೊಂಡರೂ, ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ನಿರ್ವಹಿಸಬಲ್ಲವರು ಆಗಿರುವುದರಿಂದ ಜುರೆಲ್ ಟೆಸ್ಟ್ ತಂಡದಿಂದ ಬಿಡುಗಡೆಯಾಗಲಿದ್ದಾರೆ. ಇನ್ನು ಬ್ಯಾಟರ್ ಸರ್ಫ್ರಾಜ್ ಖಾನ್ ಕೂಡ 2ನೇ ಟೆಸ್ಟ್ನಲ್ಲಿ ಆಡದಿದ್ದರೆ ಮುಂಬೈ ಪರ ಇರಾನಿ ಕಪ್ನಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.
ಮುಂಬೈಗೆ ರಹಾನೆ ಸಾರಥ್ಯ
ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ ಇರಾನಿ ಕಪ್ನಲ್ಲಿ ಮುಂಬೈ ತಂಡವನ್ನು ಮುನ್ನಡೆಸಲಿದ್ದಾರೆ. ವೇಗಿ ಶಾರ್ದೂಲ್ ಠಾಕೂರ್ ಗಾಯದಿಂದ ಚೇತರಿಸಿಕೊಂಡು ಮರಳಿ ಕಣಕ್ಕಿಳಿಯಲಿದ್ದಾರೆ. ಜತೆಗೆ ಶ್ರೇಯಸ್ ಅಯ್ಯರ್, ಪೃಥ್ವಿ ಷಾ, ಮುಶೀರ್ ಖಾನ್, ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್ ಸಹಿತ ಪ್ರಮುಖ ಆಟಗಾರರೆಲ್ಲ ಆಡಲಿದ್ದಾರೆ. ಆದರೆ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಆಲ್ರೌಂಡರ್ ಶಿವಂ ದುಬೆ ಮಾತ್ರ ಮುಂಬೈಗೆ ಅಲಭ್ಯರಾಗಿದ್ದಾರೆ. ಇವರಿಬ್ಬರು ಅಕ್ಟೋಬರ್ 3ರಿಂದ ಬಾಂಗ್ಲಾ ವಿರುದ್ಧ 3 ಪಂದ್ಯಗಳ ಟಿ20 ಸರಣಿಯಲ್ಲಿ ಕಣಕ್ಕಿಳಿಯಲಿದ್ದಾರೆ.