ಸಚಿನ್​ ಪೈಲಟ್​ ಜತೆಗೆ ಸಚಿನ್​ ತೆಂಡುಲ್ಕರ್​ ಟ್ವಿಟರ್​ ಟ್ರೆಂಡಿಂಗ್​ನಲ್ಲಿದ್ದಾರೆ, ಯಾಕೆ ಗೊತ್ತೇ?

sachint
Published on

ನವದೆಹಲಿ: ರಾಜಸ್ಥಾನದ ರಾಜಕೀಯ ಬೆಳವಣಿಗೆಗಳಿಂದಾಗಿ ಸಚಿನ್​ ಪೈಲಟ್​ ಈಗ ಟ್ವಿಟರ್​ನಲ್ಲಿ ಭರ್ಜರಿ ಟ್ರೆಂಡಿಂಗ್​ನಲ್ಲಿದ್ದಾರೆ. ಅವರೊಂದಿಗೆ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡುಲ್ಕರ್​ ಕೂಡ ಟ್ರೆಂಡಿಂಗ್​ಗೆ ಬಂದಿದ್ದಾರೆ. ಆಪ್​ ಮಾಜಿ ನಾಯಕ ಅಶುತೋಷ್​ ವಿಶ್ಲೇಷಣೆಯ ವೇಳೆ ಮಾಡಿದ ಎಡವಟ್ಟು ಇದಕ್ಕೆ ಕಾರಣವಾಗಿದೆ.

ಸಚಿನ್​ ಪೈಲಟ್​ ಅವರ ರಾಜಕೀಯ ನಡೆ ಮತ್ತು ರಾಜಸ್ಥಾನದ ಬೆಳವಣಿಗೆಗಳ ಬಗ್ಗೆ ಟಿವಿ ಚಾನಲ್​ ಒಂದರಲ್ಲಿ ಚರ್ಚೆ ನಡೆಯುತ್ತಿದ್ದ ಸಮಯದಲ್ಲಿ ಅಶುತೋಷ್​ ಅವರು ತಮ್ಮ ಅಭಿಪ್ರಾಯವನ್ನು ಮಣಿಸುವ ಭರದಲ್ಲಿ, 'ಗೆಹ್ಲೋಟ್​ ಈಗ ಗತಕಾಲ. ಸಚಿನ್​ ತೆಂಡುಲ್ಕರ್​ ಭವಿಷ್ಯ' ಎಂದು ಬಾಯ್ತಪ್ಪಿ ಹೇಳಿದ್ದರು. ಸಚಿನ್​ ಪೈಲಟ್​ ಹೆಸರು ಹೇಳುವ ಬದಲಾಗಿ ಸಚಿನ್​ ತೆಂಡುಲ್ಕರ್​ ಹೆಸರನ್ನು ಅವರು ಉಲ್ಲೇಖಿಸಿದ್ದರು. ಇದರ ಬೆನ್ನಲ್ಲೇ ಅಶುತೋಷ್​ ಬಗ್ಗೆ ಟ್ರೋಲ್​ ಶುರುವಾಗುತ್ತಿದ್ದಂತೆ ಸಚಿನ್​ ತೆಂಡುಲ್ಕರ್​ ಹೆಸರು ಕೂಡ ಟ್ರೆಂಡಿಂಗ್​ಗೆ ಬಂದಿದೆ.

ಸಚಿನ್​ ತೆಂಡುಲ್ಕರ್​ ಭಾರತೀಯ ವಾಯುಸೇನೆಯಲ್ಲಿ ಗೌರವ ಹುದ್ದೆಯನ್ನು ಹೊಂದಿರುವುದನ್ನು ಅಶುತೋಷ್​ ತಪ್ಪಾಗಿ ಗ್ರಹಿಸಿ ಅವರನ್ನೂ ಪೈಲಟ್​ ಮಾಡಿದ್ದಾರೆ ಎಂದು ಜೋಕ್​ ಮಾಡಲಾಗುತ್ತಿದೆ. ಸಚಿನ್​ ಪೈಲಟ್​ ಅವರನ್ನು ಸಚಿನ್​ ತೆಂಡುಲ್ಕರ್​ ಎಂದಿರುವ ಅಶುತೋಷ್​, ಶೀಘ್ರದಲ್ಲಿಯೇ ರಾಹುಲ್​ ಗಾಂಧಿ ಅವರನ್ನು ರಾಹುಲ್​ ದ್ರಾವಿಡ್​ ಎನ್ನಲಿದ್ದಾರೆ ಎಂದೂ ಕಾಲೆಳೆಯಲಾಗಿದೆ. ನಾನು ಯಾಕೆ ಟ್ರೆಂಡಿಂಗ್​ನಲ್ಲಿದ್ದೇನೆ ಎಂದು ಈಗ ಸ್ವತಃ ಸಚಿನ್​ ತೆಂಡುಲ್ಕರ್​ ಕೂಡ ಅಚ್ಚರಿ ಪಡುತ್ತಿರಬಹುದು ಎಂದೂ ತಮಾಷೆ ಮಾಡಲಾಗಿದೆ. ಇದು ಸಚಿನ್​ ತೆಂಡುಲ್ಕರ್​ ಕಾಲ ಅಲ್ಲ, ವಿರಾಟ್​ ಕೊಹ್ಲಿ ಕಾಲ ಎಂದೂ ಕೆಲವರು ಟ್ವೀಟಿಸಿ ಟ್ರೋಲ್​ ಮಾಡಿದ್ದಾರೆ. ಅಲ್ಲದೆ ಈ ಸುದ್ದಿ ಕೇಳಿ ಸಚಿನ್​ ತೆಂಡುಲ್ಕರ್​ಗೂ ಮುಖ್ಯಮಂತ್ರಿ ಆಗುವ ಆಸೆ ಬರಬಹುದು ಎಂದು ಕಾಲೆಳೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net