

Rishabh Pant : ಇಂಡಿಯನ್ ಪ್ರೀಮಿಯರ್ ಲೀಗ್ ( IPL ) ಇತಿಹಾಸದಲ್ಲೇ ಅತಿ ಹೆಚ್ಚು ಮೊತ್ತಕ್ಕೆ ಭಾರತೀಯ ವಿಕೆಟ್ ಕೀಪರ್ ರಿಷಬ್ ಪಂತ್ ಅವರನ್ನು ಲಖನೌ ಸೂಪರ್ ಜೈಂಟ್ಸ್ ( LSG ) ತಂಡ ಖರೀದಿ ಮಾಡಿದೆ.
ನ.24ರ ಭಾನುವಾರ ಮತ್ತು ನ.25 ಸೋಮವಾರ ಎರಡು ದಿನಗಳ ಕಾಲ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಐಪಿಎಲ್ 2025ರ ಮೆಗಾ ಹರಾಜು ನಡೆದಿದ್ದು ಗೊತ್ತೇ ಇದೆ. ಬರೋಬ್ಬರಿ 27 ಕೋಟಿ ರೂ. ಕೊಟ್ಟು ಎಲ್ಎಸ್ಜಿ ಫ್ರಾಂಚೈಸಿ, ರಿಷಭ್ ಪಂತ್ ಅವರನ್ನು ಖರೀದಿ ಮಾಡಿತು. ಇದಕ್ಕೂ ಮುನ್ನ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ, ಶ್ರೇಯಸ್ ಅಯ್ಯರ್ಗಾಗಿ 26.75 ಕೋಟಿ ರೂ. ಖರ್ಚು ಮಾಡಿತು.
ಆದರೆ, ರಿಷಭ್ ಪಂತ್ ಕೈಗೆ 27 ಕೋಟಿ ರೂ. ಸಿಗುವುದಿಲ್ಲ. ಬದಲಾಗಿ ತೆರಿಗೆ ಕಡಿತದ ನಂತರ 18.9 ಕೋಟಿ ರೂ. ಸಿಗಲಿದೆ. ರಿಷಭ್ ಅವರು ಸಂಭಾವನೆಯಿಂದ 8.1 ಕೋಟಿ ರೂಪಾಯಿ ತೆರಿಗೆ ಕಟ್ಟಬೇಕಿದೆ. ಕಳೆದ ಸೀಸನ್ನಲ್ಲಿ ಡೆಲ್ಲಿ ಕಾಪಿಟಲ್ಸ್ ತಂಡ ನಾಯಕತ್ವ ವಹಿಸಿಕೊಂಡಿದ್ದ ರಿಷಭ್, ಈ ಸೀಸನ್ನಲ್ಲಿ ಲಖನೌ ತಂಡವನ್ನು ಮುನ್ನೆಡೆಸಲಿದ್ದಾರೆ. ಲಖನೌ ತಂಡವನ್ನು ತೊರೆದಿರುವ ಕೆ.ಎಲ್. ರಾಹುಲ್ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನೆಡೆಲಿದ್ದಾರೆ.
ಈ ಬಾರಿ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತ ಪಡೆದ ಕ್ರಿಕೆಟಿಗರು
* ರಿಷಭ್ ಪಂತ್ : ಲಖನೌ ಸೂಪರ್ ಜೈಂಟ್ಸ್ ( 27 ಕೋಟಿ ರೂ. )
* ಶ್ರೇಯಸ್ ಅಯ್ಯರ್ : ಪಂಜಾಬ್ ಕಿಂಗ್ಸ್ ( 26.75 ಕೋಟಿ ರೂ. )
* ವೆಂಕಟೇಶ್ ಅಯ್ಯರ್ : ಕೋಲ್ಕತ್ತ ನೈಟ್ ರೈಡರ್ಸ್ ( 23.75 ಕೋಟಿ ರೂ. )
ಉಳಿದಂತೆ ಅರ್ಷ್ದೀಪ್ ಸಿಂಗ್ 18 ಕೋಟಿ ರೂ.ಗೆ ಪಂಜಾಬ್ ಕಿಂಗ್ಸ್ ಸೇರಿದರೆ, ಯಜುವೇಂದ್ರ ಚಹಲ್ ಕೂಡ 18 ಕೋಟಿ ರೂ.ಗೆ ಖರೀದಿಯಾದರು. ಇನ್ನು 15.75 ಕೋಟಿಗೆ ಪವರ್ ಹಿಟ್ಟರ್ ಜೋಸ್ ಬಟ್ಲರ್ ಗುಜರಾತ್ ಟೈಟನ್ಸ್ ಸೇರಿಕೊಂಡರು.
ಮೆಗಾ ಹರಾಜು ಪ್ರಕ್ರಿಯೆಯಲ್ಲಿ 62 ವಿದೇಶಿಯರ ಸಹಿತ ಒಟ್ಟು 182 ಆಟಗಾರರು ಬಿಕರಿಯಾದರು. ಮೊದಲ ದಿನ 72 ಆಟಗಾರರ ಬಿಕರಿಯಾಗಿತ್ತು. 10 ತಂಡಗಳು ಒಟ್ಟಾರೆ 639.15 ಕೋಟಿ ರೂ. ವ್ಯಯಿಸಿದವು. ಒಟ್ಟು 8 ಆರ್ಟಿಎಂ ಕೂಡ ಬಳಕೆಯಾಯಿತು. 2025ರ ಮಾರ್ಚ್ 14ರಿಂದ ಮೇ 25ರವರೆಗೆ ಟೂರ್ನಿ ನಡೆಯಲಿದೆ. (ಏಜೆನ್ಸೀಸ್)