

ಬೆಂಗಳೂರು: ಟೆನಿಸ್ ಪ್ರಿಯರಿಗೆ ಹೊಸ ವರ್ಷದಲ್ಲಿ ಭರ್ಜರಿ ಮನರಂಜನೆ ಕಾದಿದೆ. ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯು (KSLTA) ಎಸ್.ಎಂ. ಕೃಷ್ಣ ಟೆನಿಸ್ ಕ್ರೀಡಾಂಗಣದಲ್ಲಿ ಎರಡು ಪ್ರತಿಷ್ಠಿತ ಅಂತಾರಾಷ್ಟ್ರೀಯ ವೃತ್ತಿಪರ ಟೆನಿಸ್ ಟೂರ್ನಿಗಳಾದ 'ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್ 125' ಮತ್ತು 'ಐಟಿಎಫ್ ಮಹಿಳಾ ವಿಶ್ವ ಟೆನಿಸ್ ಟೂರ್ ಡಬ್ಲ್ಯೂ100' ಅನ್ನು ಆಯೋಜಿಸಲು ಸಜ್ಜಾಗಿದೆ.
2,35,000 ಅಮೆರಿಕನ್ ಡಾಲರ್ ಬಹುಮಾನ ಮೊತ್ತದ 'ಬೆಂಗಳೂರು ಓಪನ್ 2027' ಜನವರಿ 4ರಿಂದ 9ರವರೆಗೆ ನಡೆಯಲಿದ್ದು, 1,00,000 ಅಮೆರಿಕನ್ ಡಾಲರ್ ಬಹುಮಾನ ಮೊತ್ತದ 'ಐಟಿಎಫ್ ಮಹಿಳಾ ಡಬ್ಲ್ಯೂ100' ಟೂರ್ನಿಯು ಫೆಬ್ರವರಿ 14ರಿಂದ 21ರವರೆಗೆ ನಡೆಯಲಿದೆ. ಈ ಎರಡು ಟೂರ್ನಿಗಳು ಒಟ್ಟಾರೆಯಾಗಿ 3,35,000 ಅಮೆರಿಕನ್ ಡಾಲರ್ ಬಹುಮಾನ ಮೊತ್ತವನ್ನು ಒಳಗೊಂಡಿದ್ದು, ವಿಶ್ವದ ಶ್ರೇಷ್ಠ ಪುರುಷ ಮತ್ತು ಮಹಿಳಾ ವೃತ್ತಿಪರ ಆಟಗಾರರನ್ನು ನಗರಕ್ಕೆ ಕರೆತರಲಿವೆ.
2025ರಲ್ಲಿ ತನ್ನ 10ನೇ ಆವೃತ್ತಿಯನ್ನು ಆಚರಿಸಿಕೊಂಡ ಬೆಂಗಳೂರು ಓಪನ್, ಭಾರತದ ಎಟಿಪಿ ಚಾಲೆಂಜರ್ ಟೂರ್ನಲ್ಲಿ ಪ್ರಮುಖ ಟೂರ್ನಿಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಎಟಿಪಿ ಚಾಲೆಂಜರ್ 125 ವರ್ಗಕ್ಕೆ ಬಡ್ತಿ ಪಡೆದಿರುವುದು ಇದರ ಘನತೆಯನ್ನು ಮತ್ತಷ್ಟು ಹೆಚ್ಚಿಸಿದ್ದು, ದೇಶದಲ್ಲಿ ನಡೆಯುವ ಅತ್ಯುನ್ನತ ಮಟ್ಟದ ಚಾಲೆಂಜರ್ ಟೂರ್ನಿಗಳಲ್ಲಿ ಒಂದಾಗಿದೆ.
ಭಾರತದ ಪ್ರಮುಖ ಆಟಗಾರರು ತಮ್ಮ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬೆಂಗಳೂರು ಓಪನ್ ಅನ್ನು ಉತ್ತಮ ವೇದಿಕೆಯನ್ನಾಗಿ ಬಳಸಿಕೊಂಡಿದ್ದಾರೆ. ಭಾರತದ ಅಗ್ರ ಶ್ರೇಯಾಂಕದ ಸಿಂಗಲ್ಸ್ ಆಟಗಾರರಾಗಿ ಹೊರಹೊಮ್ಮಿದ ಸುಮಿತ್ ನಾಗಲ್ 2017ರಲ್ಲಿ ಪ್ರಶಸ್ತಿ ಗೆದ್ದಿದ್ದರು ಮತ್ತು 2024ರಲ್ಲಿ ರನ್ನರ್-ಅಪ್ ಆಗಿದ್ದರು. 2018ರಲ್ಲಿ ಪ್ರಜ್ಞೇಶ್ ಗುಣೇಶ್ವರನ್ ಸಿಂಗಲ್ಸ್ ಟ್ರೋಫಿ ಎತ್ತಿ ಹಿಡಿದರೆ, ಅದೇ ಆವೃತ್ತಿಯಲ್ಲಿ ಸಾಕೇತ್ ಮೈನೇನಿ ರನ್ನರ್-ಅಪ್ ಆದರು. ಜೇಮ್ಸ್ ಡಕ್ವರ್ತ್, ಮ್ಯಾಕ್ಸ್ ಪರ್ಸೆಲ್, ಸ್ಟೆಫಾನೊ ನಪೋಲಿಟಾನೊ ಮತ್ತು ಬ್ರಾಂಡನ್ ಹೋಲ್ಟ್ರಂತಹ ಗುಣಮಟ್ಟದ ಅಂತಾರಾಷ್ಟ್ರೀಯ ಆಟಗಾರರು ಈ ಟೂರ್ನಿಯ ಹಿಂದಿನ ಚಾಂಪಿಯನ್ಗಳಾಗಿದ್ದಾರೆ.
ಭಾರತೀಯ ಆಟಗಾರರಿಗೆ ತವರಿನಲ್ಲೇ ಅತ್ಯುನ್ನತ ಮಟ್ಟದಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸುವಲ್ಲಿ ಐಟಿಎಫ್ ಮಹಿಳಾ ಡಬ್ಲ್ಯೂ100 ಟೂರ್ನಿಯೂ ಮಹತ್ವದ ಪಾತ್ರ ವಹಿಸಿದೆ. 2026ರ ಆವೃತ್ತಿಯಲ್ಲಿ ವೈಲ್ಡ್ಕಾರ್ಡ್ ಮೂಲಕ ಪ್ರವೇಶ ಪಡೆದಿದ್ದ ವೈಷ್ಣವಿ ಅಡ್ಕರ್ ಅವರು ಡಬ್ಲ್ಯೂ100 ಟೂರ್ನಿಯ ಸಿಂಗಲ್ಸ್ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳೆ ಎಂಬ ಐತಿಹಾಸಿಕ ಸಾಧನೆ ಮಾಡಿದರು. ಉನ್ನತ ಶ್ರೇಯಾಂಕದ ಹಲವು ಅಂತಾರಾಷ್ಟ್ರೀಯ ಆಟಗಾರ್ತಿಯರನ್ನು ಸೋಲಿಸಿ ಅಮೋಘ ಪ್ರದರ್ಶನ ನೀಡಿದ ಅವರು, ಬೆಲ್ಜಿಯಂನ ಹ್ಯಾನ್ನೆ ವ್ಯಾಂಡೆವಿಂಕೆಲ್ ವಿರುದ್ಧ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟರು.
ಮುಂಬರುವ ಟೂರ್ನಿಗಳ ಕುರಿತು ಮಾತನಾಡಿದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಹಾಗೂ ಕೆಎಸ್ಎಲ್ಟಿಎ ಗೌರವ ಕಾರ್ಯದರ್ಶಿ ಮಹೇಶ್ವರ್ ರಾವ್ (IAS), "ಬೆಂಗಳೂರು ಯಾವಾಗಲೂ ಬಲಿಷ್ಠ ಕ್ರೀಡಾ ಸಂಸ್ಕೃತಿಯನ್ನು ಹೊಂದಿದೆ. ಇಂತಹ ಉನ್ನತ ಮಟ್ಟದ ಎರಡು ಟೂರ್ನಿಗಳನ್ನು ಆಯೋಜಿಸುವುದು ನಗರ ಮತ್ತು ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ. ಬೆಂಗಳೂರು ಓಪನ್ ಮತ್ತು ಮಹಿಳಾ ಡಬ್ಲ್ಯೂ100 ಕೇವಲ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲ; ಅವು ಭಾರತೀಯ ಟೆನಿಸ್ ಭವಿಷ್ಯದ ಮೇಲಿನ ಪ್ರಮುಖ ಹೂಡಿಕೆಗಳಾಗಿವೆ. ಇವು ನಮ್ಮ ಆಟಗಾರರಿಗೆ ಸ್ಪರ್ಧಾತ್ಮಕ ವೇದಿಕೆಯನ್ನು ಒದಗಿಸುತ್ತವೆ, ಅಂತಾರಾಷ್ಟ್ರೀಯ ಕ್ರೀಡಾ ಗುಣಮಟ್ಟವನ್ನು ನಮ್ಮ ಮನೆಬಾಗಿಲಿಗೆ ತರುತ್ತವೆ ಮತ್ತು ಮುಂದಿನ ಪೀಳಿಗೆಯ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡುತ್ತವೆ" ಎಂದರು.
"ಆಟಗಾರರು, ತರಬೇತುದಾರರು ಮತ್ತು ಅಧಿಕಾರಿಗಳಿಗೆ ಪೂರಕವಾದ ವ್ಯವಸ್ಥೆಯನ್ನು ಬಲಪಡಿಸುವುದರ ಜೊತೆಗೆ, ಅಂತಾರಾಷ್ಟ್ರೀಯ ಟೆನಿಸ್ಗೆ ಬೆಂಗಳೂರು ನೆಚ್ಚಿನ ತಾಣವಾಗಿ ಮುಂದುವರಿಯುವಂತೆ ನೋಡಿಕೊಳ್ಳುವುದು ಕೆಎಸ್ಎಲ್ಟಿಎಯ ನಿರಂತರ ಪ್ರಯತ್ನವಾಗಿದೆ. ಕರ್ನಾಟಕ ಸರ್ಕಾರ, ಎಐಟಿಎ (AITA), ಎಟಿಪಿ (ATP), ಐಟಿಎಫ್ (ITF) ಮತ್ತು ನಮ್ಮ ಪಾಲುದಾರರ ನಿರಂತರ ಬೆಂಬಲಕ್ಕೆ ನಾವು ಕೃತಜ್ಞರಾಗಿದ್ದೇವೆ. ಎರಡು ರೋಮಾಂಚಕಾರಿ ಟೂರ್ನಿಗಳಿಗಾಗಿ ಅಂತಾರಾಷ್ಟ್ರೀಯ ಟೆನಿಸ್ ಬಳಗ ಮತ್ತು ಅಭಿಮಾನಿಗಳನ್ನು ಬೆಂಗಳೂರಿಗೆ ಸ್ವಾಗತಿಸಲು ನಾವು ಎದುರು ನೋಡುತ್ತಿದ್ದೇವೆ" ಎಂದು ಅವರು ತಿಳಿಸಿದರು.
ಅಖಿಲ ಭಾರತ ಟೆನಿಸ್ ಸಂಸ್ಥೆಯ (AITA) ಜಂಟಿ ಕಾರ್ಯದರ್ಶಿ, ಕೆಎಸ್ಎಲ್ಟಿಎ ಜಂಟಿ ಕಾರ್ಯದರ್ಶಿ ಹಾಗೂ ಟೂರ್ನಿ ನಿರ್ದೇಶಕ ಸುನಿಲ್ ಯಜಮಾನ್ ಮಾತನಾಡಿ, "ಬೆಂಗಳೂರಿನ ಟೆನಿಸ್ ಅಭಿಮಾನಿಗಳಿಗೆ ಇದು ಹೊಸ ವರ್ಷದ ಅದ್ಭುತ ಕೊಡುಗೆಯಾಗಿದೆ. ವರ್ಷದ ಮೊದಲ ಎರಡು ತಿಂಗಳಲ್ಲೇ ಎಟಿಪಿ ಚಾಲೆಂಜರ್ 125 ಮತ್ತು ಅದರ ಬೆನ್ನಲ್ಲೇ ಐಟಿಎಫ್ ಮಹಿಳಾ ಡಬ್ಲ್ಯೂ100 ಟೂರ್ನಿಯನ್ನು ಆಯೋಜಿಸುತ್ತಿರುವುದು, ನಗರಕ್ಕೆ ವಿಶ್ವದರ್ಜೆಯ ವೃತ್ತಿಪರ ಟೆನಿಸ್ ಅನ್ನು ತರುವ ನಮ್ಮ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಈ ಟೂರ್ನಿಗಳು ಭಾರತೀಯ ಆಟಗಾರರಿಗೆ ಗುಣಮಟ್ಟದ ಅಂತಾರಾಷ್ಟ್ರೀಯ ಎದುರಾಳಿಗಳ ವಿರುದ್ಧ ಸ್ಪರ್ಧಿಸಲು ಮತ್ತು ತಮ್ಮ ವೃತ್ತಿಜೀವನದಲ್ಲಿ ಮಹತ್ವದ ಪ್ರಗತಿ ಸಾಧಿಸಲು ನಿರಂತರವಾಗಿ ಅವಕಾಶಗಳನ್ನು ನೀಡಿವೆ" ಎಂದು ಹೇಳಿದರು.
2026ರ ಭಾರತದ ಕ್ಯಾಲೆಂಡರ್ನಲ್ಲಿ ನಾಲ್ಕು ಎಟಿಪಿ ಚಾಲೆಂಜರ್ ಟೂರ್ನಿಗಳು ಸ್ಥಾನ ಪಡೆದಿರುವುದರಿಂದ, ದೇಶದ ವೃತ್ತಿಪರ ಟೆನಿಸ್ ಕ್ಷೇತ್ರದಲ್ಲಿ ಬೆಂಗಳೂರು ತನ್ನ ಮಹತ್ವದ ಪಾತ್ರವನ್ನು ಮುಂದುವರಿಸಿದೆ. ವಿಶ್ವದರ್ಜೆಯ ಟೆನಿಸ್ ಮೂಲಸೌಕರ್ಯ ಮತ್ತು ಸಂಘಟನಾ ಅನುಭವದ ಬೆಂಬಲದೊಂದಿಗೆ ಉನ್ನತ ವರ್ಗದ ಅಂತಾರಾಷ್ಟ್ರೀಯ ಟೂರ್ನಿಗಳನ್ನು ಆಯೋಜಿಸುವ ನಗರದ ಸಾಮರ್ಥ್ಯವು, ಬೆಂಗಳೂರನ್ನು ಭಾರತದ ಪ್ರಮುಖ ಟೆನಿಸ್ ತಾಣಗಳಲ್ಲಿ ಒಂದನ್ನಾಗಿ ರೂಪಿಸಲು ನೆರವಾಗಿದೆ.
ಜನವರಿಯಲ್ಲಿ ಬೆಂಗಳೂರು ಓಪನ್ ಮತ್ತು ಫೆಬ್ರವರಿಯಲ್ಲಿ ಮಹಿಳಾ ಡಬ್ಲ್ಯೂ100 ಟೂರ್ನಿಗಳೊಂದಿಗೆ, ಕೆಎಸ್ಎಲ್ಟಿಎ 2027ನೇ ವರ್ಷವನ್ನು ಭರ್ಜರಿಯಾಗಿ ಆರಂಭಿಸಲು ಸಜ್ಜಾಗಿದ್ದು, ವೃತ್ತಿಪರ ಟೆನಿಸ್ ಅನ್ನು ಉತ್ತೇಜಿಸುವ, ಭಾರತೀಯ ಪ್ರತಿಭೆಗಳನ್ನು ಪೋಷಿಸುವ ಮತ್ತು ಅಂತಾರಾಷ್ಟ್ರೀಯ ಟೆನಿಸ್ ಭೂಪಟದಲ್ಲಿ ಬೆಂಗಳೂರಿನ ಸ್ಥಾನವನ್ನು ಮತ್ತಷ್ಟು ಬಲಪಡಿಸುವ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ