ಮುನಿಸು ಮರೆತು ಒಂದಾದ್ರಾ ಸಂಜೀವ್​-ರಾಹುಲ್​?; ವೈರಲ್ ಫೋಟೋ ನೋಡಿ

Sanjeev Rahul
Published on

ನವದೆಹಲಿ: ಮೇ 08ರಂದು ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ ಹೀನಾಯವಾಗಿ ಸೋತ ಬಳಿಕ ಲಖನೌ ಸೂಪರ್​ಜೈಂಟ್ಸ್​ ತಂಡದ ನಾಯಕ ಕೆ.ಎಲ್​. ರಾಹುಲ್​ ಹಾಗೂ ಮಾಲೀಕ ಸಂಜೀವ್​ ಬಹಿರಂಗ ವಾಕ್ಸಮರದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು.  ಈ ವಿಚಾರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಊಹಾಪೋಹಗಳು ಎದ್ದಿದ್ದವು ಮತ್ತು ಪರ-ವಿರೋಧದ ಚರ್ಚೆ ಕೂಡ ಜೋರಾಗಿ ನಡೆದಿತ್ತು. ಎದ್ದಿರುವ ಊಹಾಪೋಹಗಳಿಗೆ ಈ ಇಬ್ಬರು ತೆರೆ ಎಳೆದಿದ್ದಾರೆ.

ಮೇ 14ರಂದು ನಡೆಯುವ ಪಂದ್ಯದಲ್ಲಿ ಲಖನೌ ಸೂಪರ್​ಜೈಂಟ್ಸ್​ ತಂಡವು ಡೆಲ್ಲಿ ಕ್ಯಾಪಿಟಲ್ಸ್​ ಸವಾಲನ್ನು ಎದುರಿಸಲಿದೆ. ಈ ಪಂದ್ಯ ಶುರುವಾಗುವುದಕ್ಕೂ ಮುನ್ನ ಈ ಇಬ್ಬರು ಪರಸ್ಪರ ಅಪ್ಪಿಕೊಳ್ಳುವ ಮೂಲಕ ವದಂತಿಗಳಿಗೆ ತೆರೆ ಎಳೆಯುವ ಕೆಲಸ ಮಾಡಿದ್ದಾರೆ. ಲಕ್ನೋ ತಂಡದ ಮಾಲೀಕ ಸಂಜೀವ್ ಗೋಯೆಂಕಾ, ತಂಡದ ನಾಯಕ ಕೆಎಲ್ ರಾಹುಲ್​ರನ್ನು ತಮ್ಮ ಮನೆಗೆ ಆಹ್ವಾನಿಸಿ ಜೊತೆಗೆ ಭೋಜನ ಸವಿದಿದ್ದಾರೆ ಇದರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ಸಂಜೀವ್ ಗೋಯೆಂಕಾ ಹಾಗೂ ಕೆಎಲ್ ರಾಹುಲ್ ಅವರ ಫೋಟೋವೊಂದು ಸಖತ್ ವೈರಲ್ ಆಗುತ್ತಿದ್ದು, ಈ ಫೋಟೋದಲ್ಲಿ ಸಂಜೀವ್ ಗೋಯೆಂಕಾ, ಕೆಎಲ್ ರಾಹುಲ್ ಅವರನ್ನು ಅಪ್ಪಿಕೊಂಡಿರುವುದನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ. ಲಖನೌ ಫ್ರಾಂಚೈಸಿಯ ಮಾಲೀಕ ಸಂಜೀವ್, ಕ್ಯಾಪ್ಟನ್ ರಾಹುಲ್ ಅವರನ್ನು ತಮ್ಮ ಮನೆಗೆ ಊಟಕ್ಕೆ ಆಹ್ವಾನಿಸಿದ ಸಂದರ್ಭದಲ್ಲಿ ಈ ಇಬ್ಬರು ಅಪ್ಪಿಕೊಂಡಿರುವ ಫೋಟೋವನ್ನು ಕ್ಲಿಕ್ಕಿಸಲಾಗಿದೆ. ಕೆಎಲ್ ರಾಹುಲ್ ಮನೆಗೆ ಬಂದ ತಕ್ಷಣ ಸಂಜೀವ್ ಗೋಯೆಂಕಾ ಅವರನ್ನು ಅಪ್ಪಿಕೊಂಡು ಸ್ವಾಗತಿಸಿದರು ಎಂಬುದನ್ನು ಫೋಟೋ ನೋಡಿ ಅರ್ಥ ಮಾಡಿಕೊಳ್ಳಬಹುದಾಗಿದೆ.

ಸಂಜೀವ್ ಗೋಯೆಂಕಾ ಮತ್ತು ಕೆಎಲ್ ರಾಹುಲ್ ನಡುವಿನ ಈ ಘಟನೆ ನಡೆದ ಬಳಿಕ ಕ್ರಿಕೆಟ್​ ವಲಯದಲ್ಲಿ ಸಾಕಷ್ಟು ಚರ್ಚೆ ಹುಟ್ಟಿಕೊಂಡಿತ್ತು. ಕೆಎಲ್ ರಾಹುಲ್ ತಂಡವನ್ನು ತೊರೆಯಲ್ಲಿದ್ದಾರೆ ಎಂಬ ವದಂತಿ ಮೊದಲು ಹುಟ್ಟಿಕೊಂಡಿತ್ತು. ಆ ಬಳಿಕ ಮಾಲೀಕ ಸಂಜೀವ್ ಗೋಯೆಂಕಾ ಅವರೇ ಕೆಎಲ್ ರಾಹುಲ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ತಂಡದಿಂದ ಹೊರಹಾಕುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಇಷ್ಟೆಲ್ಲಾ ಆದ ಮೇಲೆ ಈಗ ಬಂದಿರುವ ಫೋಟೋ ನೋಡಿದರೆ ಲಕ್ನೋ ತಂಡದಲ್ಲಿನ ಎಲ್ಲಾ ಸಮಸ್ಯೆಗಳು ಬಗೆಹರಿದಿವೆ ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net