ಜೂನಿಯರ್ ರಾಷ್ಟ್ರೀಯ ಚಾಂಪಿಯನ್‌ಶಿಪ್: ಸಿಂಗಲ್ಸ್ ಕಿರೀಟ ಉಳಿಸಿಕೊಂಡ ಕರ್ನಾಟಕದ ಶೈನಾ

ಅಗ್ರ ಶ್ರೇಯಾಂಕಿತೆ ಮತ್ತು ಹಾಲಿ ಚಾಂಪಿಯನ್ ಕರ್ನಾಟಕದ ಶೈನಾ ಮಣಿಮುತ್ತು ಮತ್ತೊಮ್ಮೆ ತಮ್ಮ ಶ್ರೇಷ್ಠ ಆಟವನ್ನು ಪ್ರದರ್ಶಿಸಿ, ರಾಜ್ಯದವರೇ ಆದ ಲಕ್ಷ್ಯ ರಾಜೇಶ್ ಅವರನ್ನು ಮಣಿಸುವ ಮೂಲಕ ಬಾಲಕಿಯರ ಸಿಂಗಲ್ಸ್ ಕಿರೀಟವನ್ನು ಉಳಿಸಿಕೊಂಡಿದ್ದಾರೆ. ಶನಿವಾರ ನಡೆದ 49ನೇ ಯೋನೆಕ್ಸ್-ಸನ್‌ರೈಸ್ ರಾಷ್ಟ್ರೀಯ ಜೂನಿಯರ್ (19 ವರ್ಷದೊಳಗಿನವರ) ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ತೆಲಂಗಾಣ ಆಟಗಾರರೇ ಇದ್ದ ಬಾಲಕರ ಸಿಂಗಲ್ಸ್ ಫೈನಲ್‌ನಲ್ಲಿ ಅಖಿಲ್ ರೆಡ್ಡಿ ಬೊಬ್ಬಾ ವಿರುದ್ಧ ಜ್ಞಾನ ದತ್ತು ಟಿಟಿ ಜಯಭೇರಿ ಬಾರಿಸಿದ್ದಾರೆ.
ಕರ್ನಾಟಕದ ಶೈನಾ ಮಣಿಮುತ್ತು
ಕರ್ನಾಟಕದ ಶೈನಾ ಮಣಿಮುತ್ತು FSN
Published on: 

ಗ್ಯಾಂಗ್ಟಾಕ್: ಅಗ್ರ ಶ್ರೇಯಾಂಕಿತೆ ಮತ್ತು ಹಾಲಿ ಚಾಂಪಿಯನ್ ಕರ್ನಾಟಕದ ಶೈನಾ ಮಣಿಮುತ್ತು ಮತ್ತೊಮ್ಮೆ ತಮ್ಮ ಶ್ರೇಷ್ಠ ಆಟವನ್ನು ಪ್ರದರ್ಶಿಸಿ, ರಾಜ್ಯದವರೇ ಆದ ಲಕ್ಷ್ಯ ರಾಜೇಶ್ ಅವರನ್ನು ಮಣಿಸುವ ಮೂಲಕ ಬಾಲಕಿಯರ ಸಿಂಗಲ್ಸ್ ಕಿರೀಟವನ್ನು ಉಳಿಸಿಕೊಂಡಿದ್ದಾರೆ. ಶನಿವಾರ ನಡೆದ 49ನೇ ಯೋನೆಕ್ಸ್-ಸನ್‌ರೈಸ್ ರಾಷ್ಟ್ರೀಯ ಜೂನಿಯರ್ (19 ವರ್ಷದೊಳಗಿನವರ) ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ತೆಲಂಗಾಣ ಆಟಗಾರರೇ ಇದ್ದ ಬಾಲಕರ ಸಿಂಗಲ್ಸ್ ಫೈನಲ್‌ನಲ್ಲಿ ಅಖಿಲ್ ರೆಡ್ಡಿ ಬೊಬ್ಬಾ ವಿರುದ್ಧ ಜ್ಞಾನ ದತ್ತು ಟಿಟಿ ಜಯಭೇರಿ ಬಾರಿಸಿದ್ದಾರೆ.

ಕಳೆದ ವರ್ಷ ಇಂಫಾಲದಲ್ಲಿ ಗೆದ್ದಿದ್ದ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಹಾದಿಯಲ್ಲಿ ಶೈನಾ ಪಂದ್ಯದುದ್ದಕ್ಕೂ ಲಕ್ಷ್ಯ ವಿರುದ್ಧ ಹಿಡಿತ ಸಾಧಿಸಿ 15-10, 15-12 ಅಂತರದಿಂದ ಫೈನಲ್ ಗೆದ್ದರು.

ಬಾಲಕರ ಸಿಂಗಲ್ಸ್ ಫೈನಲ್‌ನ ಮೊದಲ ಗೇಮ್‌ನಲ್ಲಿ ತೀವ್ರ ಪೈಪೋಟಿ ಕಂಡುಬಂದಿತು. ಆದರೆ, ಅಖಿಲ್ ಅವರನ್ನು ಹಿಂದಿಕ್ಕಿ ಮೊದಲ ಗೇಮ್ ಗೆದ್ದ ಜ್ಞಾನ ದತ್ತು, ಎರಡನೇ ಗೇಮ್‌ನಲ್ಲೂ ಹಿಡಿತ ಸಾಧಿಸಿ ಕೇವಲ ಅರ್ಧ ಗಂಟೆಯೊಳಗೆ 17-15, 15-11 (ಫಲಿತಾಂಶ ಪಟ್ಟಿಯಂತೆ 19-17, 15-11) ಅಂತರದಿಂದ ಗೆಲುವು ಸಾಧಿಸಿದರು.

ಛತ್ತೀಸ್‌ಗಢದ ದಿವ್ಯಾಂಶ್ ಅಗರ್ವಾಲ್ ಮತ್ತು ತಮಿಳುನಾಡಿನ ವರ್ಣಾ ಪ್ರಭುವಾನಂದ್ ಜೋಡಿಯು ಮಿಶ್ರ ಡಬಲ್ಸ್ ಫೈನಲ್‌ನಲ್ಲಿ ಅಮಿತ್ ರಾಜ್ ನಟರಾಜ್ ಮತ್ತು ಸುಹಿನಾ ರಾಯ್ ಅವರನ್ನು 15-12, 15-8 ಅಂತರದಿಂದ ಮಣಿಸುವ ಮೂಲಕ ದಿವ್ಯಾಂಶ್ ತಮ್ಮ ಡಬಲ್ ಕಿರೀಟದ ಕನಸಿಗೆ ಭರ್ಜರಿ ಆರಂಭ ಪಡೆದರು.

ಬಾಲಕರ ಡಬಲ್ಸ್ ಫೈನಲ್‌ನಲ್ಲಿ ದಿವ್ಯಾಂಶ್ ಮತ್ತು ಅಮರ್‌ಜಿತ್ ಸಿಂಗ್ ಖ್ವೈರಕ್ಪಮ್ ಜೋಡಿಗೆ ಎರಡನೇ ಶ್ರೇಯಾಂಕಿತ ಕರ್ನಾಟಕದ ಅವಳಿ ಸಹೋದರರಾದ ಪುನೀತ್ ಎಸ್ ಮತ್ತು ಪವನ್ ಎಸ್ ಅವರನ್ನು ಮಣಿಸಲು ಸಾಧ್ಯವಾಗಲಿಲ್ಲ. ಕರ್ನಾಟಕದ ಈ ಜೋಡಿ 16-14, 15-9 ಅಂತರದಿಂದ ಪ್ರಶಸ್ತಿ ಗೆದ್ದುಕೊಂಡಿತು.

ದಿನದ ಏಕೈಕ ಮೂರು ಗೇಮ್‌ಗಳ ನಿರ್ಣಾಯಕ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತರಾದ ದಿಯಾ ಭೀಮಯ್ಯ ಬಿ ಮತ್ತು ಬರುಣಿ ಪರ್ಷ್ವಾಲ್ ಜೋಡಿಯು ಏಳನೇ ಶ್ರೇಯಾಂಕಿತ ಆನ್ಯಾ ಬಿಶ್ತ್ ಮತ್ತು ಏಂಜೆಲ್ ಪುನೇರಾ ಅವರನ್ನು 10-15, 15-12, 15-12 ಅಂತರದಿಂದ ಸೋಲಿಸಿ ಬಾಲಕಿಯರ ಡಬಲ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡಿತು.

ಫಲಿತಾಂಶಗಳು:

  • ಬಾಲಕರ ಸಿಂಗಲ್ಸ್: 7-ಜ್ಞಾನ ದತ್ತು ಟಿಟಿ ವಿರುದ್ಧ 4-ಅಖಿಲ್ ರೆಡ್ಡಿ ಬೊಬ್ಬಾ (19-17, 15-11)

  • ಬಾಲಕರ ಡಬಲ್ಸ್: 2-ಪುನೀತ್ ಎಸ್ / ಪವನ್ ಎಸ್ ವಿರುದ್ಧ 4-ದಿವ್ಯಾಂಶ್ ಅಗರ್ವಾಲ್ / ಅಮರ್‌ಜಿತ್ ಸಿಂಗ್ ಖ್ವೈರಕ್ಪಮ್ (16-14, 15-9)

  • ಬಾಲಕಿಯರ ಸಿಂಗಲ್ಸ್: 1-ಶೈನಾ ಮಣಿಮುತ್ತು ವಿರುದ್ಧ 8-ಲಕ್ಷ್ಯ ರಾಜೇಶ್ (15-10, 15-12)

  • ಬಾಲಕಿಯರ ಡಬಲ್ಸ್: 1-ದಿಯಾ ಭೀಮಯ್ಯ ಬಿ / ಬರುಣಿ ಪರ್ಷ್ವಾಲ್ ವಿರುದ್ಧ 7-ಆನ್ಯಾ ಬಿಶ್ತ್ / ಏಂಜೆಲ್ ಪುನೇರಾ (10-15, 15-12, 15-12)

  • ಮಿಶ್ರ ಡಬಲ್ಸ್: 2-ದಿವ್ಯಾಂಶ್ ಅಗರ್ವಾಲ್ / ವರ್ಣಾ ಪ್ರಭುವಾನಂದ್ ವಿರುದ್ಧ ಅಮಿತ್ ರಾಜ್ ನಟರಾಜ್ / ಸುಹಿನಾ ರಾಯ್ (15-12, 15-8)