

ಅಹಮದಾಬಾದ್: ಗುಜರಾತಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರಾಜ್ಯದ ಹಲವು ನಗರಗಳು ಜಲಾವೃತವಾಗಿದ್ದು, ಪ್ರವಾಹ ಪರಿಸ್ಥಿತಿ ಎದುರಿಸುತ್ತಿವೆ. ವಡೋದರಾದಲ್ಲಿ ಮಳೆ ನಿಂತಿದ್ದರೂ ಇನ್ನೂ ಪ್ರವಾಹ ತಗ್ಗಿಲ್ಲ. ವಿಶ್ವಾಮಿತ್ರಿ ನದಿ ಉಕ್ಕಿ ಹರಿಯುತ್ತಿದ್ದಂತೆ ಹಲವು ಪ್ರದೇಶಗಳು ಜಲಾವೃತವಾಗಿವೆ. ಈ ಪ್ರವಾಹದಲ್ಲಿ ಸಿಲುಕಿದ್ದ ಟೀಮ್ ಇಂಡಿಯಾದ ಮಹಿಳಾ ಕ್ರಿಕೆಟರ್ ರಾಧಾ ಯಾದವ್ ಅವರನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ರಕ್ಷಣೆ ಮಾಡಿದೆ.
ರಾಧಾ ಅವರು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಎನ್ಡಿಆರ್ಎಫ್ಗೆ ಧನ್ಯವಾದಗಳನ್ನು ತಿಳಿಸಿ, ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಪ್ರವಾಹ ಸಂತ್ರಸ್ತರನ್ನು ದೋಣಿಗಳ ಸಹಾಯದಿಂದ ಎನ್ಡಿಆರ್ಎಫ್ ಸಿಬ್ಬಂದಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತಿರುವ ದೃಶ್ಯಗಳನ್ನು ರಾಧಾ ಯಾದವ್ ಹಂಚಿಕೊಂಡಿರುವ ವಿಡಿಯೋದಲ್ಲಿದೆ.
ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿ ಸ್ಟಾರ್ ಸ್ಪಿನ್ನರ್ ಆಗಿರುವ ರಾಧಾ ಯಾದವ್, ಹಲವು ಉತ್ತಮ ಪ್ರದರ್ಶನ ನೀಡಿ ತಂಡದಲ್ಲಿ ಪ್ರಮುಖ ಆಟಗಾರ್ತಿ ಎನಿಸಿಕೊಂಡಿದ್ದಾರೆ. ರಾಧಾ ಯಾದವ್ ಅವರು ಅಕ್ಟೋಬರ್ 3ರಿಂದ ಯುಎಇಯಲ್ಲಿ ನಡೆಯಲಿರುವ 2024 ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಆಡಲಿದ್ದಾರೆ. ಈ ಟಿ20 ವಿಶ್ವಕಪ್‌ಗಾಗಿ ಬಿಸಿಸಿಐ ಇತ್ತೀಚೆಗೆ ಘೋಷಿಸಿದ ತಂಡದಲ್ಲಿ ರಾಧಾ ಕೂಡ ಸ್ಥಾನ ಪಡೆದಿದ್ದಾರೆ.
ಗುಜರಾತ್ನಲ್ಲಿ ವರುಣನ ಅಬ್ಬರ
ಭಾರೀ ಮಳೆಯಿಂದ ಗುಜರಾತ್ ರಾಜ್ಯ ಅಸ್ತವ್ಯಸ್ತವಾಗಿದೆ. ಪ್ರವಾಹದಿಂದಾಗಿ 28ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಿಂದ ಸುಮಾರು 18 ಸಾವಿರಕ್ಕೂ ಅಧಿಕ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುಜರಾತ್ ಸರ್ಕಾರ ಹಂಚಿಕೊಂಡ ವಿವರಗಳ ಪ್ರಕಾರ, ಮೋರ್ಬಿ, ವಡೋದರಾ, ಭರೂಚ್, ಜಾಮ್‌ನಗರ, ಅರಾವಳಿ, ಪಂಚಮಹಲ್, ದ್ವಾರಕಾ ಮತ್ತು ದಂಗ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಆನಂದ್ ಜಿಲ್ಲೆಯಲ್ಲಿ ಆರು, ಅಹಮದಾಬಾದ್‌ನಲ್ಲಿ ನಾಲ್ಕು, ಗಾಂಧಿನಗರ, ಖೇಡಾ, ಮಹಿಸಾಗರ್, ದಾಹೋದ್ ಮತ್ತು ಸುರೇಂದ್ರನಗರ ಜಿಲ್ಲೆಗಳಲ್ಲಿ ತಲಾ ಇಬ್ಬರು ಮೃತಪಟ್ಟಿದ್ದಾರೆ. ಮೃತರ ಪೈಕಿ ಏಳು ಜನರು ಮೋರ್ಬಿ ಜಿಲ್ಲೆಯ ಧವಾನಾ ಗ್ರಾಮದ ಬಳಿ ಉಕ್ಕಿ ಹರಿಯುತ್ತಿದ್ದ ಕ್ರಾಸ್‌ವೇ ದಾಟುತ್ತಿದ್ದಾಗ ಅವರು ಪ್ರಯಾಣಿಸುತ್ತಿದ್ದ ಟ್ರ್ಯಾಕ್ಟರ್ ಟ್ರಾಲಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಗುರುವಾರ ಗುಜರಾತ್‌ನಾದ್ಯಂತ 11 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಮತ್ತು 22 ಜಿಲ್ಲೆಗಳಿಗೆ ಹಳದಿ ಅಲರ್ಟ್ ಅನ್ನು ಭಾರತೀಯ ಹವಾಮಾನ ಇಲಾಖೆ (IMD) ಘೋಷಿಸಿದೆ. ಆಳವಾದ ವಾಯುಭಾರ ಕುಸಿತದಿಂದಾಗಿ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಕಚ್ಛ್, ದ್ವಾರಕಾ, ಜಾಮ್‌ನಗರ, ಮೊರ್ಬಿ, ಸುರೇಂದ್ರನಗರ, ಜುನಾಗಢ್, ರಾಜ್‌ಕೋಟ್, ಬೊಟಾಡ್, ಗಿರ್ ಸೋಮನಾಥ್, ಅಮ್ರೇಲಿ ಮತ್ತು ಭಾವನಗರ ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಿದೆ. ಹೆಚ್ಚುವರಿಯಾಗಿ, ಉತ್ತರ, ಮಧ್ಯ ಮತ್ತು ದಕ್ಷಿಣ ಗುಜರಾತ್‌ಗೆ ಹಳದಿ ಅಲರ್ಟ್ ನೀಡಲಾಗಿದೆ. ವಡೋದರದಲ್ಲಿ ಮಳೆ ನಿಂತಿದ್ದರೂ ವಿಶ್ವಾಮಿತ್ರಿ ನದಿ ಉಕ್ಕಿ ಹರಿಯುತ್ತಿದ್ದು, ವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ. ಹಲವಾರು ತಗ್ಗು ಪ್ರದೇಶಗಳಲ್ಲಿ ಪ್ರವಾಹದ ಘಟನೆಗಳು ವರದಿಯಾಗಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೆ ಕರೆ ಮಾಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ ಮತ್ತು ರಾಜ್ಯಕ್ಕೆ ಕೇಂದ್ರದಿಂದ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದ್ದು, ರಾಜ್ಯದಾದ್ಯಂತ ನದಿಗಳು ಮತ್ತು ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿರುವುದರಿಂದ 6,000 ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. (ಏಜೆನ್ಸೀಸ್)