ಟೀಮ್​ ಇಂಡಿಯಾದ ಆ ಆಟಗಾರನನ್ನು ನಮ್ಮ ತಂಡಕ್ಕೆ ಕೊಟ್ಬಿಡಿ ಪ್ಲೀಸ್​! ಅಫ್ಘಾನ್​ ನಾಯಕನ ಮನವಿ | Hashmatullah Shahidi

Hashmatullah Shahidi
Published on

ನವದೆಹಲಿ: ದಾಖಲೆಗಳ ಸರದಾರ ಹಾಗೂ ರನ್​ ಮೆಷಿನ್​ ಎಂದೇ ಖ್ಯಾತಿ ಗಳಿಸಿರುವ ಟೀಮ್​ ಇಂಡಿಯಾದ ಸ್ಟಾರ್ ಬ್ಯಾಟ್ಸ್​ಮನ್​ ವಿರಾಟ್ ಕೊಹ್ಲಿ ಬಗ್ಗೆ ಅಫ್ಘಾನಿಸ್ತಾನ ಕ್ರಿಕೆಟ್​ ತಂಡದ ನಾಯಕ ಹಶ್ಮತುಲ್ಲಾ ಶಾಹಿದಿ ( Hashmatullah Shahidi ) ನೀಡಿರುವ ಹೇಳಿಕೆ ಕ್ರೀಡಾಭಿಮಾನಿಗಳ ಗಮನ ಸೆಳೆದಿದೆ.

ಒಂದು ಕಾಲದಲ್ಲಿ ಕ್ರಿಕೆಟ್​ ಶಿಶು ಎನಿಸಿಕೊಂಡಿದ್ದ ಅಫ್ಘಾನಿಸ್ತಾನ ಇದೀಗ ಕ್ರಿಕೆಟ್​ ಅಂಗಳದಲ್ಲಿ ಚೆನ್ನಾಗಿ ಪಳಗಿದ್ದು, ಸ್ಟಾರ್​ ಟೀಮ್​ಗಳ ಪಟ್ಟಿಯಲ್ಲಿ ಸೇರಿಕೊಂಡಿದೆ. ಇತ್ತೀಚೆಗೆ ಆಸ್ಟ್ರೇಲಿಯಾ, ಪಾಕಿಸ್ತಾನ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾದಂತಹ ದೊಡ್ಡ ತಂಡಗಳನ್ನು ಅಫ್ಘಾನಿಸ್ತಾನ ಸೋಲಿಸಿದೆ. ಬಲಿಷ್ಠ ತಂಡಗಳಿಗೆ ಶಾಕ್​ ನೀಡಿರುವ ಅಫ್ಘಾನ್, ವಿಶ್ವ ಕ್ರಿಕೆಟ್​ನಲ್ಲಿ ವೇಗವಾಗಿ ಬೆಳೆಯುತ್ತಿರುವ ತಂಡವೆಂಬ ಹೆಗ್ಗಳಿಕೆಯನ್ನು ಹೊಂದಿದೆ.

ಆದರೆ, ಅಫ್ಘಾನಿಸ್ತಾನ ತಂಡ ಇದುವರೆಗೂ ಭಾರತ ವಿರುದ್ಧ ಒಂದೇ ಒಂದು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಿಲ್ಲ. ಇದೇ ಸಂದರ್ಭದಲ್ಲಿ ಆಫ್ಘಾನ್​ ನಾಯಕ ಹಶ್ಮತುಲ್ಲಾ ಶಾಹಿದಿ ಅವರು ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ವೊಂದಕ್ಕೆ ಸಂದರ್ಶನ ನೀಡಿದ್ದರು. ಈ ವೇಳೆ ಅವರಿಗೆ ಭಾರತ ತಂಡದ ಆಟಗಾರರನ್ನು ಅಫ್ಘಾನಿಸ್ತಾನ ತಂಡಕ್ಕೆ ಸೇರಿಸಿಕೊಳ್ಳಲು ಬಯಸಿದರೆ ಯಾರನ್ನು ಸೇರಿಸಿಕೊಳ್ಳುತ್ತೀರಿ ಎಂದು ಕೇಳಲಾಯಿತು.

ಇದಕ್ಕೆ ಉತ್ತರಿಸಿದ ಹಶ್ಮತುಲ್ಲಾ ಶಾಹಿದಿ, ಒಬ್ಬರಲ್ಲ ಹಲವು ಆಟಗಾರರು ಭಾರತ ತಂಡದಲ್ಲಿದ್ದಾರೆ. ಒಬ್ಬರನ್ನು ಮಾತ್ರ ಆಯ್ಕೆ ಮಾಡಬೇಕಾದರೆ, ನಾನು ವಿರಾಟ್ ಕೊಹ್ಲಿ ಅವರನ್ನು ಆಯ್ಕೆ ಮಾಡುತ್ತೇನೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊಹ್ಲಿ ಗರಿಷ್ಠ ರನ್​ ದಾಖಲೆ ಮಾಡಿದ್ದಾರೆ. ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 50 ಶತಕಗಳ ಗಡಿ ದಾಟಿದ್ದಾರೆ. ಇದು ಯಾರೂ ಮುಟ್ಟದ ದೊಡ್ಡ ಸಾಧನೆಯಾಗಿದೆ. ಹೀಗಾಗಿ ವಿರಾಟ್​ ಕೊಹ್ಲಿಯವರನ್ನು ನಮ್ಮ ತಂಡಕ್ಕೆ ಕೊಟ್ಟುಬಿಡಿ ಎಂದು ಕೇಳುತ್ತೇನೆ ಎಂದು ಹಶ್ಮತುಲ್ಲಾ ಶಾಹಿದಿ ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net