Yashasvi Jaiswal: ಐಪಿಎಲ್ 2027ರ ಮೆಗಾ ಹರಾಜಿಗೂ ಮುನ್ನ ರಾಜಸ್ಥಾನ್ ರಾಯಲ್ಸ್ ಪಾಳಯದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಫ್ರಾಂಚೈಸಿ ಬಿಡುಗಡೆ ಮಾಡಿರುವ ರಿಟೈನ್ ಪಟ್ಟಿಯಲ್ಲಿ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರ ಹೆಸರು ಘೋಷಣೆಯಾಗಿದ್ದರೂ, ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಅವರ ಭವಿಷ್ಯ ಇನ್ನೂ ಅನಿಶ್ಚಿತವಾಗಿದೆ. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಜೈಸ್ವಾಲ್ ತಂಡವನ್ನು ತೊರೆದು ಬೇರೆ ಫ್ರಾಂಚೈಸಿ ಸೇರಲು ಒಲವು ತೋರಿದ್ದಾರೆ ಎನ್ನಲಾಗಿದೆ.
ಜೈಸ್ವಾಲ್ ಮನವಿಯ ಮೇರೆಗೆ ರಾಜಸ್ಥಾನ್ ರಾಯಲ್ಸ್ ಆಡಳಿತ ಮಂಡಳಿಯು ಹಲವು ಫ್ರಾಂಚೈಸಿಗಳೊಂದಿಗೆ ಟ್ರೇಡ್ ಮಾತುಕತೆ ನಡೆಸಿದೆ. ಆದರೆ, ಎದುರಾಳಿ ತಂಡಗಳು ನೀಡಿದ ಆಫರ್‌ಗಳು ರಾಜಸ್ಥಾನ್ ರಾಯಲ್ಸ್‌ಗೆ ತೃಪ್ತಿ ತರದ ಕಾರಣ ಯಾವುದೇ ಒಪ್ಪಂದ ಅಂತಿಮಗೊಂಡಿಲ್ಲ.
ಹರಾಜಿಗೂ ಮುನ್ನ ನಡೆಯುವ ಟ್ರೇಡ್ ವಿಂಡೋ ಡಿಸೆಂಬರ್ 9ರವರೆಗೆ ತೆರೆದಿರುವುದರಿಂದ, ಜೈಸ್ವಾಲ್ ವರ್ಗಾವಣೆ ಕುರಿತ ಮಾತುಕತೆಗಳು ಮುಂದುವರಿಯುವ ಸಾಧ್ಯತೆಯಿದೆ. ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಇಂದಿಗೂ ಜೈಸ್ವಾಲ್ ತಮ್ಮ ತಂಡದಲ್ಲೇ ಉಳಿಯಬೇಕೆಂದು ಬಯಸುತ್ತಿದೆ, ಆದರೆ ಸ್ವತಃ ಜೈಸ್ವಾಲ್ ಹೊಸ ಸವಾಲುಗಳಿಗಾಗಿ ತಂಡ ಬದಲಿಸಲು ಇಚ್ಛಿಸಿದ್ದಾರೆ ಎಂದು ಐಪಿಎಲ್ ಮೂಲಗಳು ತಿಳಿಸಿವೆ. ತಂಡದಲ್ಲಿ ಅವರು ಸಂತೋಷವಾಗಿಲ್ಲದ ಕಾರಣ ರಾಯಲ್ಸ್ ಆಡಳಿತ ಮಂಡಳಿ ಅನಿವಾರ್ಯವಾಗಿ ಅವರಿಗೆ ಬದಲಿ ಆಟಗಾರನ ಹುಡುಕಾಟ ನಡೆಸಿದೆ ಎನ್ನಲಾಗಿದೆ.
ಸಂಜು ಸ್ಯಾಮ್ಸನ್ ತಂಡದಿಂದ ನಿರ್ಗಮಿಸಿದ ನಂತರ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕತ್ವದ ರೇಸ್‌ನಲ್ಲಿ ಯಶಸ್ವಿ ಜೈಸ್ವಾಲ್ ಮುಂಚೂಣಿಯಲ್ಲಿದ್ದರು. ಆದರೆ ಫ್ರಾಂಚೈಸಿ ಜೈಸ್ವಾಲ್ ಅವರನ್ನು ಕಡೆಗಣಿಸಿ ರಿಯಾನ್ ಪರಾಗ್ ಅವರಿಗೆ ನಾಯಕತ್ವದ ಪಟ್ಟ ಕಟ್ಟಿರುವುದು ಜೈಸ್ವಾಲ್ ಅಸಮಾಧಾನಕ್ಕೆ ಪ್ರಮುಖ ಕಾರಣವಾಗಿದೆ. ಇದರ ಜೊತೆಗೆ, ಭಾರತೀಯ ಟಿ20 ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಜೈಸ್ವಾಲ್, ಕಳೆದ ಆವೃತ್ತಿಯಲ್ಲಿ ತಮ್ಮದೇ ತಂಡದ ಮತ್ತೊಬ್ಬ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಅವರ ಭರ್ಜರಿ ಪ್ರದರ್ಶನದ ಎದುರು ಮಂಕಾಗಿದ್ದರು. ಈ ಎಲ್ಲಾ ಬೆಳವಣಿಗೆಗಳು ಅವರನ್ನು ತಂಡ ತೊರೆಯುವ ನಿರ್ಧಾರಕ್ಕೆ ಪ್ರೇರೇಪಿಸಿವೆ ಎನ್ನಲಾಗಿದೆ.
ವರದಿಯ ಪ್ರಕಾರ, ರಿಟೈನ್ ಗಡುವಿಗೂ ಮುನ್ನ ಲಖನೌ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಜೈಸ್ವಾಲ್ ಅವರನ್ನು ಟ್ರೇಡ್ ಮಾಡಿಕೊಳ್ಳಲು ಅಧಿಕೃತವಾಗಿ ಮುಂದಾಗಿದ್ದವು. ಆದರೆ, ಜೈಸ್ವಾಲ್ ಬದಲಿಗೆ ರಾಜಸ್ಥಾನ್ ರಾಯಲ್ಸ್ ಕೇಳಿದ ಇಬ್ಬರು ಪ್ರಮುಖ ಆಟಗಾರರನ್ನು ಬಿಟ್ಟುಕೊಡಲು ಎಲ್ಎಸ್ಜಿ ತಂಡ ನಿರಾಕರಿಸಿತು. ಇತ್ತ ಡೆಲ್ಲಿ ಕ್ಯಾಪಿಟಲ್ಸ್ ನೀಡಿದ ಆಟಗಾರರ ವಿನಿಮಯ ಆಫರ್ ರಾಜಸ್ಥಾನ್ ರಾಯಲ್ಸ್‌ಗೆ ಸಮಾಧಾನ ತರಲಿಲ್ಲ. ಇವುಗಳ ಜೊತೆಗೆ, ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಕೂಡ ಜೈಸ್ವಾಲ್ ಅವರನ್ನು ತಂಡಕ್ಕೆ ಕರೆತರುವ ಆಯ್ಕೆಯನ್ನು ಪರಿಶೀಲಿಸಿದೆ. ಅಲ್ಲದೆ, ಮೂರು ಬಾರಿಯ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಈಗಲೂ ಜೈಸ್ವಾಲ್ ಅವರನ್ನು ಖರೀದಿಸುವ ರೇಸ್‌ನಲ್ಲಿ ಸಕ್ರಿಯವಾಗಿದೆ ಎಂದು ತಿಳಿದುಬಂದಿದೆ.
ರಾಜಸ್ಥಾನ್ ರಾಯಲ್ಸ್ ತಂಡ ಸೇರಿದಾಗಿನಿಂದ ಯಶಸ್ವಿ ಜೈಸ್ವಾಲ್ ತಂಡದ ಆಧಾರಸ್ತಂಭವಾಗಿದ್ದಾರೆ. ಕಳೆದ ನಾಲ್ಕು ಆವೃತ್ತಿಗಳಲ್ಲಿ ಪ್ರತಿ ಬಾರಿಯೂ 400ಕ್ಕೂ ಹೆಚ್ಚು ರನ್ ಕಲೆಹಾಕಿರುವ ಅವರು, ಎರಡು ಬಾರಿ 500ಕ್ಕೂ ಅಧಿಕ ಹಾಗೂ ಒಂದು ಆವೃತ್ತಿಯಲ್ಲಿ 600ಕ್ಕೂ ಹೆಚ್ಚು ರನ್ ಸಿಡಿಸಿ ಸ್ಥಿರ ಪ್ರದರ್ಶನ ನೀಡಿದ್ದಾರೆ. ಡಿಸೆಂಬರ್ 9ರೊಳಗೆ ಜೈಸ್ವಾಲ್ ರಾಜಸ್ಥಾನ್ ತಂಡದಲ್ಲೇ ಉಳಿಯುತ್ತಾರಾ ಅಥವಾ ಹೊಸ ತಂಡದ ಜೆರ್ಸಿ ತೊಡುತ್ತಾರಾ ಎಂಬುದು ಕುತೂಹಲ ಮೂಡಿಸಿದೆ(ಏಜೆನ್ಸೀಸ್).