ಯುಎಇ ವಿರುದ್ಧ ವಂಡರ್​ ಕಿಡ್​ ರೌದ್ರನರ್ತನ: ​ವೈಭವ್ ಸೂರ್ಯವಂಶಿಗೆ 'ದೈತ್ಯ ರಾಕ್ಷಸ'ನ ರೂಪ ಕೊಟ್ಟ ರವೀಂದ್ರ ಜಡೇಜಾ! Vaibhav Suryavanshi

A photo shared by Ravindra Jadeja comparing Vaibhav Suryavanshi to a giant monster.
ವೈಭವ್ ಸೂರ್ಯವಂಶಿ ಅವರನ್ನು ದೈತ್ಯ ರಾಕ್ಷಸನಿಗೆ ಹೋಲಿಸಿ ರವೀಂದ್ರ ಜಡೇಜಾ ಹಂಚಿಕೊಂಡಿರುವ ಫೋಟೋ.
Published on: 

ಕ್ರಿಕೆಟ್​: ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಎಲ್ಲೆಲ್ಲೂ 15 ವರ್ಷದ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಅವರದ್ದೇ ಮಾತು. ಎಸಿಸಿ ಮೆನ್ಸ್ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯಲ್ಲಿ ಯುಎಇ (UAE) ವಿರುದ್ಧ ವೈಭವ್ ಆಡಿದ ಸುನಾಮಿ ಇನ್ನಿಂಗ್ಸ್ ಇಡೀ ಕ್ರಿಕೆಟ್ ಲೋಕವನ್ನೇ ಬೆಚ್ಚಿಬೀಳಿಸಿದೆ. ಕೇವಲ 53 ಎಸೆತಗಳಲ್ಲಿ ಬರೋಬ್ಬರಿ 204 ರನ್ ಚಚ್ಚುವ ಮೂಲಕ ವೈಭವ್ ಸೀಮಿತ ಓವರ್‌ಗಳ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗದ ದ್ವಿಶತಕ ಬಾರಿಸಿ ಹೊಸ ವಿಶ್ವದಾಖಲೆ ಬರೆದಿದ್ದಾರೆ.

ಜಡೇಜಾ ಮೆಚ್ಚುಗೆ, ಫ್ಯಾನ್ಸ್ ಫುಲ್ ಖುಷ್!

ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿರುವ ಟೀಮ್ ಇಂಡಿಯಾದ ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ ಕೂಡ ವೈಭವ್ ಅವರ ಈ ಐತಿಹಾಸಿಕ ಆಟಕ್ಕೆ ಫಿದಾ ಆಗಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ, ಪುರಾಣದ ದೈತ್ಯ ರಾಕ್ಷಸನ ದೇಹಕ್ಕೆ ವೈಭವ್​ನ ಮುಖವನ್ನು ಅಂಟಿಸುವ ಮೂಲಕ, ಯುಎಇ ವಿರುದ್ಧ ವೈಭವ್​​ನ ಪ್ರದರ್ಶನ, ರಾಕ್ಷಕರ ದಮನಕಾರಿ ನಡುವಳಿಕೆಯಂತೆಯೇ ಇತ್ತೆಂದು ಸಾಂಕೇತಿಕವಾಗಿ ಸೂಚಿಸಿದ್ದಾರೆ. ಈ ಫೋಟೊಗೆ "ಉತ್ತಮ ಆಟ" ಎಂದು ಬರೆದು ರಾಜಸ್ಥಾನ್ ರಾಯಲ್ಸ್ ಹಾಗೂ ವೈಭವ್ ಅವರನ್ನು ಟ್ಯಾಗ್ ಮಾಡುವ ಮೂಲಕ ಬೆನ್ನುತಟ್ಟಿದ್ದಾರೆ.

15 ಓವರ್‌ಗಳಲ್ಲೇ 250 ರನ್ ಚೇಸ್ ಮಾಡಿದ ಭಾರತ!

ಪಂದ್ಯದಲ್ಲಿ ಯುಎಇ ನೀಡಿದ್ದ 250 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ತಿಲಕ್ ವರ್ಮಾ ನೇತೃತ್ವದ ಇಂಡಿಯಾ ಎ ತಂಡಕ್ಕೆ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಆರಂಭ ನೀಡಿದರು. ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದ ಈ 15 ರ ಪೋರ, ಬೌಲರ್‌ಗಳ ಬೆವರಿಳಿಸಿದರು. ವೈಭವ್ ಅವರ ಈ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ಕೇವಲ 15 ಓವರ್‌ಗಳಲ್ಲೇ ಗುರಿ ತಲುಪಿ ಭರ್ಜರಿ ಜಯ ಸಾಧಿಸಿತು.

Also Read
ಆಸ್ಕರ್ ಅಂಗಳಕ್ಕೆ ಎಂಟ್ರಿ ಕೊಟ್ಟ 'ರಾಮಾಯಣ': VFX ವಿಭಾಗದಲ್ಲಿ 20 ರ ಪಟ್ಟಿಯಲ್ಲಿ ಭಾರತೀಯ ಸಿನಿಮಾ! Ramayana
A photo shared by Ravindra Jadeja comparing Vaibhav Suryavanshi to a giant monster.

ಒಂದೇ ಇನ್ನಿಂಗ್ಸ್‌ನಲ್ಲಿ ಮೂರು ವಿಶ್ವದಾಖಲೆ ಉಡೀಸ್!

ಈ ಒಂದೇ ಪಂದ್ಯದಲ್ಲಿ ವೈಭವ್ ಲಿಸ್ಟ್ ಎ ಕ್ರಿಕೆಟ್‌ನ ಅತ್ಯಂತ ವೇಗದ ಶತಕ, ವೇಗದ 150 ರನ್ ಮತ್ತು ಅತ್ಯಂತ ವೇಗದ ದ್ವಿಶತಕದ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಈ ಹಿಂದೆ 103 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ್ದ ಚಾಡ್ ಬೋವ್ಸ್ ಅವರ ದಾಖಲೆಯನ್ನು ವೈಭವ್ ಅರ್ಧದಷ್ಟು ಎಸೆತಗಳಲ್ಲೇ ಪುಡಿಗಟ್ಟಿರುವುದು ವಿಶೇಷವಾಗಿದೆ.

ಸೆಮಿಫೈನಲ್‌ನಲ್ಲಿ ಲಂಕಾ ಸವಾಲು: ಮತ್ತೆ ಪಾಕ್ ಕದನದ ನಿರೀಕ್ಷೆ

ಟೂರ್ನಿಯಲ್ಲಿ ನೇಪಾಳ ವಿರುದ್ಧ 306 ರನ್‌ಗಳ ಬೃಹತ್ ಗೆಲುವಿನೊಂದಿಗೆ ಶುಭಾರಂಭ ಮಾಡಿದ್ದ ಭಾರತ 'ಎ' ತಂಡ, ನಂತರ ಪಾಕಿಸ್ತಾನ 'ಎ' ವಿರುದ್ಧ ಸೋಲು ಕಂಡಿತ್ತು. ಇದೀಗ ಸೆಮಿಫೈನಲ್ ಪ್ರವೇಶಿಸಿರುವ ಭಾರತ, ಗುರುವಾರ ನಡೆಯಲಿರುವ ನಿರ್ಣಾಯಕ ಪಂದ್ಯದಲ್ಲಿ 'ಶ್ರೀಲಂಕಾ ಎ' ತಂಡವನ್ನು ಎದುರಿಸಲಿದೆ.

ವೈಭವ್ ನಾಕೌಟ್ ಪಂದ್ಯದಲ್ಲೂ ಇದೇ ಫಾರ್ಮ್ ಮುಂದುವರಿಸಿ ತಂಡವನ್ನು ಫೈನಲ್‌ಗೆ ಕೊಂಡೊಯ್ಯಲಿ, ಆ ಮೂಲಕ ಮತ್ತೊಮ್ಮೆ ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಫೈನಲ್ ನೋಡುವಂತಾಗಲಿ ಎಂಬುದು ಅಭಿಮಾನಿಗಳ ಆಸೆಯಾಗಿದೆ, (ಏಜೆನ್ಸೀಸ್​).