ಆಸ್ಕರ್ ಅಂಗಳಕ್ಕೆ ಎಂಟ್ರಿ ಕೊಟ್ಟ 'ರಾಮಾಯಣ': VFX ವಿಭಾಗದಲ್ಲಿ 20 ರ ಪಟ್ಟಿಯಲ್ಲಿ ಭಾರತೀಯ ಸಿನಿಮಾ! Ramayana

'Ramayana', directed by Nitesh Tiwari, has secured a spot in the top 20 list for the Best Visual Effects category at the 2027 Oscars.
2027ರ ಆಸ್ಕರ್ ಪ್ರಶಸ್ತಿಯ ಅತ್ಯುತ್ತಮ ದೃಶ್ಯ ಪರಿಣಾಮ ವಿಭಾಗದ ಟಾಪ್ 20 ಪಟ್ಟಿಯಲ್ಲಿ ಸ್ಥಾನ ಪಡೆದಿರುವ ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ'
Published on: 

ಮುಂಬೈ: ಭಾರತದ ಸಿನಿ ಇತಿಹಾಸದಲ್ಲಿ ಅತ್ಯಂತ ದುಬಾರಿ ಬಜೆಟ್​ನಲ್ಲಿ ನಿರ್ಮಾಣವಾದ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿರುವ ನಮಿತ್​ ಮಲ್ಹೋತ್ರಾ ನಿರ್ಮಾಣದ 'ರಾಮಾಯಣ' ಸಿನಿಮಾ ಈಗ ಆಸ್ಕರ್​ ಅಂಗಳಕ್ಕೆ ಪ್ರವೇಶ ಪಡೆದಿದೆ.

ನಿತೇಶ್ ತಿವಾರಿ ನಿರ್ದೇಶನದ ಈ ಮೆಗಾ ಬಜೆಟ್ ಸಿನಿಮಾ, 2027ರ ಆಸ್ಕರ್ ಪ್ರಶಸ್ತಿಯ ‘ಅತ್ಯುತ್ತಮ ದೃಶ್ಯ ಪರಿಣಾಮ’ (Best Visual Effects) ವಿಭಾಗದ ಟಾಪ್ 20 ಸಂಭಾವ್ಯ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

ಹಾಲಿವುಡ್ ದೈತ್ಯರಿಗೆ ಟಕ್ಕರ್ ಕೊಟ್ಟ ‘ರಾಮಾಯಣ’

ಪ್ರತಿಷ್ಠಿತ ವೆರೈಟಿ ಮ್ಯಾಗಜೀನ್ ವರದಿ ಪ್ರಕಾರ, ‘ರಾಮಾಯಣ’ ಸಿನಿಮಾ ಆಸ್ಕರ್ ರೇಸ್‌ನಲ್ಲಿ ಜಗತ್ತಿನ ಅತಿ ದೊಡ್ಡ ಸಿನಿಮಾಗಳ ಜೊತೆ ಪೈಪೋಟಿ ನಡೆಸುತ್ತಿದೆ. ಹಾಲಿವುಡ್‌ನ ಬಹುನಿರೀಕ್ಷಿತ ಮತ್ತು ದೈತ್ಯ ಸಿನಿಮಾಗಳಾದ ಡ್ಯೂನ್: 3, ಸ್ಪೈಡರ್ ಮ್ಯಾನ್: ಬ್ರಾಂಡ್ ನ್ಯೂ ಡೇ, ದಿ ಒಡಿಸ್ಸಿ, ಪ್ರಾಜೆಕ್ಟ್ ಹೇಲ್ ಮೇರಿ ಮತ್ತು ಅವೆಂಜರ್ಸ್: ಡೂಮ್ಸ್‌ಡೇ ನಂತಹ ಸಿನಿಮಾಗಳ ಸಾಲಿನಲ್ಲಿ ನಮ್ಮ ‘ರಾಮಾಯಣ’ ಕೂಡ ನಿಂತಿದೆ.

ಇಷ್ಟೇ ಅಲ್ಲದೆ, 2025ರಲ್ಲಿ ಆಸ್ಕರ್ ಗೆದ್ದಿದ್ದ ಗಾಡ್ಜಿಲ್ಲಾ ಮೈನಸ್ ಒನ್ ಸಿನಿಮಾದ ಮುಂದುವರಿದ ಭಾಗವಾದ ಜಪಾನ್‌ನ ಬ್ಲಾಕ್‌ಬಸ್ಟರ್ ಚಿತ್ರ ಗಾಡ್ಜಿಲ್ಲಾ: ಮೈನಸ್ ಝೀರೋ ಹಾಗೂ ವೇಲ್‌ಫಾಲ್, ದಿ ಶೀಪ್ ಡಿಟೆಕ್ಟಿವ್ಸ್ ಚಿತ್ರಗಳೂ ಈ ಟಾಪ್ 20 ಪಟ್ಟಿಯಲ್ಲಿವೆ. ಇಂತಹ ಘಟಾನುಘಟಿ ಸಿನಿಮಾಗಳ ನಡುವೆ ಭಾರತದ ಸಿನಿಮಾವೊಂದು ಸ್ಥಾನ ಪಡೆದಿರುವುದು ನಿಜಕ್ಕೂ ಹೆಮ್ಮೆಯ ವಿಚಾರವಾಗಿದೆ.

1600 ಕೋಟಿ ಬಜೆಟ್ ಹಾಗೂ DNEG ಮ್ಯಾಜಿಕ್!

ಸುಮಾರು 1600 ಕೋಟಿ ರೂಪಾಯಿಗಳ ಬೃಹತ್ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ‘ರಾಮಾಯಣ’ ಸಿನಿಮಾದಲ್ಲಿನ ಗ್ರಾಫಿಕ್ಸ್ ಮತ್ತು ವಿಎಫ್‌ಎಕ್ಸ್ ಕೆಲಸಕ್ಕೆ ಇಡೀ ವಿಶ್ವವೇ ತಲೆಬಾಗಿದೆ. ಈ ಚಿತ್ರದ ದೃಶ್ಯ ವೈಭವ ಹಾಲಿವುಡ್‌ನ ಯಾವುದೇ ಸ್ಟಾರ್ ಸಿನಿಮಾಗಳಿಗೂ ಕಮ್ಮಿಯಿಲ್ಲ ಎಂಬ ಮೆಚ್ಚುಗೆ ವ್ಯಕ್ತವಾಗಿದೆ.

Also Read
ನವ್ವಾರಿ ಸೀರೆಯಲ್ಲಿ ಶ್ರದ್ಧಾ ಫೋಟೊಶೂಟ್​! Shraddha Kapoor
'Ramayana', directed by Nitesh Tiwari, has secured a spot in the top 20 list for the Best Visual Effects category at the 2027 Oscars.

ಈ ಅದ್ಭುತ ದೃಶ್ಯಗಳ ಹಿಂದೆ 8 ಬಾರಿ ಆಸ್ಕರ್ ಪ್ರಶಸ್ತಿ ಗೆದ್ದಿರುವ ಖ್ಯಾತ ಡಿಎನ್‌ಇಜಿ (DNEG) ಸ್ಟುಡಿಯೋ ಪಾತ್ರವಿದೆ. ಈ ಹಿಂದೆ ಡ್ಯೂನ್, ಇಂಟರ್‌ಸ್ಟೆಲ್ಲರ್ ನಂತಹ ಸಿನಿಮಾಗಳಿಗೆ ಕೆಲಸ ಮಾಡಿದ್ದ ಈ ತಂಡ, ಈಗ ‘ರಾಮಾಯಣ’ಕ್ಕೆ ಜೀವ ತುಂಬಿದ್ದು, ಚಿತ್ರವನ್ನು ಆಸ್ಕರ್ ಅಂಗಳಕ್ಕೆ ಕರೆತಂದಿದೆ.

ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್‌ನಲ್ಲೂ ‘ರಾಮಾಯಣ’ ಹವಾ!

ಸೋನಿ ಪಿಕ್ಚರ್ಸ್ ಮೂಲಕ ಜಾಗತಿಕ ಮಟ್ಟದಲ್ಲಿ ಭರ್ಜರಿ ಬಿಡುಗಡೆ ಕಂಡಿದ್ದ ‘ರಾಮಾಯಣ’, ವಿದೇಶಗಳಲ್ಲೂ ಸಖತ್ ಸದ್ದು ಮಾಡುತ್ತಿದೆ. ಕೇವಲ ಆಸ್ಕರ್ ಮಾತ್ರವಲ್ಲದೆ, ಮುಂದಿನ ವರ್ಷ ನಡೆಯಲಿರುವ ಪ್ರತಿಷ್ಠಿತ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್ ನಲ್ಲೂ ಈ ಸಿನಿಮಾ ಮಿಂಚುತ್ತಿದೆ.

ಕ್ರಿಟಿಕ್ಸ್ ಚಾಯ್ಸ್ ಅಸೋಸಿಯೇಷನ್ ಸೋಮವಾರ ಬಿಡುಗಡೆ ಮಾಡಿರುವ ಶಾರ್ಟ್‌ಲಿಸ್ಟ್‌ನಲ್ಲಿ ‘ರಾಮಾಯಣ’ ಸಿನಿಮಾ ಎರಡು ಪ್ರಮುಖ ವಿಭಾಗಗಳಲ್ಲಿ ಆಯ್ಕೆಯಾಗಿದೆ. ‘ಅತ್ಯುತ್ತಮ ವಿಷುಯಲ್ ಎಫೆಕ್ಟ್ಸ್’ ಮತ್ತು ‘ಅತ್ಯುತ್ತಮ ಸ್ಟಂಟ್ ಡಿಸೈನ್’ ವಿಭಾಗಗಳಲ್ಲಿ ಚಿತ್ರ ಪ್ರಶಸ್ತಿ ರೇಸ್‌ನಲ್ಲಿದೆ.

ಒಟ್ಟಿನಲ್ಲಿ, ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆಯುತ್ತಿರುವ ‘ರಾಮಾಯಣ’ ಈಗ ಅಂತಾರಾಷ್ಟ್ರೀಯ ಪ್ರಶಸ್ತಿಗಳ ವೇದಿಕೆಯಲ್ಲೂ ಭಾರತದ ಶಕ್ತಿಯನ್ನು ಸಾಬೀತುಪಡಿಸುತ್ತಿದೆ. ಅಂತಿಮ ನಾಮನಿರ್ದೇಶನದಲ್ಲೂ ‘ರಾಮಾಯಣ’ ಸ್ಥಾನ ಪಡೆದು ಭಾರತಕ್ಕೆ ಆಸ್ಕರ್ ತಂದುಕೊಡಲಿ ಎಂಬುದೇ ಸಿನಿಪ್ರಿಯರ ಬಯಕೆಯಾಗಿದೆ, (ಏಜೆನ್ಸೀಸ್​​).