ಜೈಸ್ವಾಲ್‌ಗೇ ತಂಡದಲ್ಲಿ ಜಾಗವಿಲ್ಲ, ಇನ್ನು ಸೂರ್ಯಕುಮಾರ್ ಎಲ್ಲಿ...? ಬಿಸಿಸಿಐ ಮೂಲಗಳಿಂದ ಹೊರಬಿತ್ತು ಸ್ಫೋಟಕ ಮಾಹಿತಿ! | Suryakumar Yadav


ಜೈಸ್ವಾಲ್‌ಗೇ ತಂಡದಲ್ಲಿ ಜಾಗವಿಲ್ಲ, ಇನ್ನು ಸೂರ್ಯಕುಮಾರ್ ಎಲ್ಲಿ...? ಬಿಸಿಸಿಐ ಮೂಲಗಳಿಂದ ಹೊರಬಿತ್ತು ಸ್ಫೋಟಕ ಮಾಹಿತಿ! | Suryakumar Yadav
Published on: 

ನವದೆಹಲಿ: ದೇಶೀಯ ಕ್ರಿಕೆಟ್‌ನಲ್ಲಿ ಸೂರ್ಯಕುಮಾರ್ ಯಾದವ್ (Suryakumar Yadav) ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದರೂ, ಟೀಮ್​ ಇಂಡಿಯಾದ ಆಯ್ಕೆ ಯೋಜನೆಯಲ್ಲಿ ಅವರ ಸ್ಥಾನ ಬದಲಾಗಿಲ್ಲ. ನವೆಂಬರ್ 21ರ ಶನಿವಾರದಂದು ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ಪ್ರಕಟಿಸಿರುವ ವರದಿಯ ಪ್ರಕಾರ, ಭಾರತದ ಮಾಜಿ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ಸದ್ಯಕ್ಕೆ ಆಯ್ಕೆಗೆ ಪರಿಗಣಿಸಲಾಗುತ್ತಿಲ್ಲ. ಇದೇ ವೇಳೆ, ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಕೂಡ ತಂಡದ ವೈಟ್-ಬಾಲ್ ಸಂಯೋಜನೆಯಲ್ಲಿ ಸ್ಥಾನ ಪಡೆಯಲು ಪರದಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

2026ರ ಟಿ20 ವಿಶ್ವಕಪ್ ಗೆಲುವಿಗೆ ಭಾರತ ತಂಡವನ್ನು ಮುನ್ನಡೆಸಿದ್ದ ಸೂರ್ಯಕುಮಾರ್ ಯಾದವ್ ಅವರನ್ನು ಐಪಿಎಲ್ ಮುಕ್ತಾಯದ ಬಳಿಕ ಟಿ20 ತಂಡದಿಂದ ಕೈಬಿಡಲಾಗಿತ್ತು. ಆ ನಂತರ ಶ್ರೇಯಸ್ ಅಯ್ಯರ್ ಅವರನ್ನು ಭಾರತ ಟಿ20 ತಂಡದ ನಾಯಕನಾಗಿ ನೇಮಿಸಲಾಯಿತು. ದೇಶೀಯ ಕ್ರಿಕೆಟ್‌ನಲ್ಲಿ ಸೂರ್ಯಕುಮಾರ್ ಇತ್ತೀಚೆಗೆ ಭರ್ಜರಿ ರನ್ ಗಳಿಸುತ್ತಿದ್ದರೂ, ಸದ್ಯದ ತಂಡದಲ್ಲಿ ಅವರಿಗೆ ಸ್ಥಾನ ಕಲ್ಪಿಸಲು ಆಯ್ಕೆಗಾರರಿಗೆ ಸಾಧ್ಯವಾಗುತ್ತಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಸೂರ್ಯ ಸದ್ಯಕ್ಕೆ ನಮ್ಮ ಆಯ್ಕೆಯ ಯೋಜನೆಯ ಭಾಗವಾಗಿಲ್ಲ. ವೈಟ್-ಬಾಲ್ ತಂಡದಲ್ಲಿ ಯಶಸ್ವಿ ಜೈಸ್ವಾಲ್ ಅವರಿಗೇ ನಮಗೆ ಇನ್ನೂ ಸ್ಥಾನ ಕಲ್ಪಿಸಲು ಸಾಧ್ಯವಾಗಿಲ್ಲ ಎಂದು ಬಿಸಿಸಿಐ ಮೂಲವೊಂದು ಎಎನ್‌ಐಗೆ ತಿಳಿಸಿದೆ. ಸೂರ್ಯಕುಮಾರ್ ಕಠಿಣ ಪರಿಶ್ರಮ ಪಡುತ್ತಿದ್ದು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂಬುದನ್ನು ಒಪ್ಪಿಕೊಂಡಿರುವ ಮೂಲಗಳು, ಪ್ರಸ್ತುತ ಭಾರತೀಯ ತಂಡದಲ್ಲಿರುವ ತೀವ್ರ ಪೈಪೋಟಿಯತ್ತ ಬೊಟ್ಟು ಮಾಡಿವೆ.

Also Read
ಎಲ್ಲರೂ ಅವರೊಬ್ಬರ ಮಾತನ್ನೇ ಕೇಳಲಿ ಎಂದು ಪ್ರಾರ್ಥಿಸುತ್ತಿದ್ದೆ! ಮೊದಲ ಟೆಸ್ಟ್​ನ ಆ 15 ಸೆಕೆಂಡ್‌ಗಳ ರೋಚಕತೆ ಬಿಚ್ಚಿಟ್ಟ ಕನ್ನಡಿಗ ರಾಹುಲ್ | KL Rahul

ಜೈಸ್ವಾಲ್‌ಗೇ ತಂಡದಲ್ಲಿ ಜಾಗವಿಲ್ಲ, ಇನ್ನು ಸೂರ್ಯಕುಮಾರ್ ಎಲ್ಲಿ...? ಬಿಸಿಸಿಐ ಮೂಲಗಳಿಂದ ಹೊರಬಿತ್ತು ಸ್ಫೋಟಕ ಮಾಹಿತಿ! | Suryakumar Yadav

ಹೌದು, ಸೂರ್ಯ ಕಠಿಣ ಪರಿಶ್ರಮ ಪಡುತ್ತಿದ್ದಾರೆ ಮತ್ತು ಲಿಸ್ಟ್-ಎ ಕ್ರಿಕೆಟ್‌ನಲ್ಲಿ ಉತ್ತಮವಾಗಿ ಆಡುತ್ತಿದ್ದಾರೆ. ಆದರೆ ಪ್ರಸ್ತುತ ಭಾರತೀಯ ತಂಡದಲ್ಲಿ ಅವರನ್ನು ಎಲ್ಲಿ ಸೇರಿಸಿಕೊಳ್ಳುವುದು ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಸದ್ಯಕ್ಕೆ ತಂಡದಲ್ಲಿ ಯಾವುದೇ ಸ್ಥಾನ ಖಾಲಿ ಇಲ್ಲ. ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಯಶಸ್ವಿ ಜೈಸ್ವಾಲ್ ಅವರಂತಹ ಯುವ ಆಟಗಾರನಿಗೇ ಸ್ಥಾನ ನೀಡಲು ನಮಗೆ ಸಾಧ್ಯವಾಗಿಲ್ಲ ಎಂದಮೇಲೆ, ಸದ್ಯದ ಸಂಯೋಜನೆಯಲ್ಲಿ ಸೂರ್ಯ ಎಲ್ಲಿ ಹೊಂದಿಕೊಳ್ಳುತ್ತಾರೆ? ಈಗಿನ ಪರಿಸ್ಥಿತಿಯಲ್ಲಿ ನಾವು ಅವರನ್ನು ತಂಡಕ್ಕೆ ಪರಿಗಣಿಸುತ್ತಿಲ್ಲ ಎಂದು ಬಿಸಿಸಿಐ ಮೂಲಗಳು ಸ್ಪಷ್ಟಪಡಿಸಿವೆ.

ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಸೂರ್ಯ ಶಾಖ!

ಮುಂಬೈ ಪರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಸೂರ್ಯಕುಮಾರ್ ಯಾದವ್ ಅಬ್ಬರಿಸುತ್ತಿರುವ ಹೊತ್ತಲ್ಲೇ ಈ ಆಯ್ಕೆಯ ಸುದ್ದಿ ಹೊರಬಿದ್ದಿದೆ. ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೇವಲ 21 ಎಸೆತಗಳಲ್ಲಿ 6 ಬೌಂಡರಿ ಹಾಗೂ 5 ಸಿಕ್ಸರ್‌ಗಳ ನೆರವಿನಿಂದ ಅಜೇಯ 60 ರನ್ ಸಿಡಿಸಿದ್ದ ಸ್ಕೈ, ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು. 285.71ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ್ದರಿಂದ ಮುಂಬೈ 173 ರನ್‌ಗಳ ಗುರಿಯನ್ನು 7 ವಿಕೆಟ್‌ಗಳು ಬಾಕಿ ಇರುವಂತೆಯೇ ಸುಲಭವಾಗಿ ತಲುಪಿತ್ತು.

ಇದಾದ ಬಳಿಕ ಗುಜರಾತ್ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ ಸೂರ್ಯ, 29 ಎಸೆತಗಳಲ್ಲಿ 9 ಬೌಂಡರಿ ಮತ್ತು 7 ಸಿಕ್ಸರ್‌ಗಳೊಂದಿಗೆ 82 ರನ್ ಚಚ್ಚಿದರು. ಇದರಿಂದಾಗಿ ಮುಂಬೈ 199 ರನ್‌ಗಳ ಬೃಹತ್ ಗುರಿಯನ್ನು ಕೇವಲ 15.4 ಓವರ್‌ಗಳಲ್ಲಿ ತಲುಪಿ 5 ವಿಕೆಟ್‌ಗಳ ಜಯ ಸಾಧಿಸಿತು. ಮೂರನೇ ಸುತ್ತಿನಲ್ಲಿ ಗೋವಾ ವಿರುದ್ಧವೂ 12 ಎಸೆತಗಳಲ್ಲಿ 25 ರನ್ ಗಳಿಸಿ ಮುಂಬೈನ 18 ರನ್‌ಗಳ ಗೆಲುವಿಗೆ ಕೊಡುಗೆ ನೀಡಿದರು. ದೇಶೀಯ ಟೂರ್ನಿಯಲ್ಲಿ ಇಷ್ಟೆಲ್ಲಾ ಸ್ಫೋಟಕ ಪ್ರದರ್ಶನ ನೀಡುತ್ತಿದ್ದರೂ, ಸದ್ಯಕ್ಕೆ ಟೀಮ್ ಇಂಡಿಯಾ ಬಾಗಿಲು ಸೂರ್ಯಕುಮಾರ್ ಪಾಲಿಗೆ ಮುಚ್ಚಿದಂತೆಯೇ ಇದೆ(ಏಜೆನ್ಸೀಸ್​).