ಎಲ್ಲರೂ ಅವರೊಬ್ಬರ ಮಾತನ್ನೇ ಕೇಳಲಿ ಎಂದು ಪ್ರಾರ್ಥಿಸುತ್ತಿದ್ದೆ! ಮೊದಲ ಟೆಸ್ಟ್​ನ ಆ 15 ಸೆಕೆಂಡ್‌ಗಳ ರೋಚಕತೆ ಬಿಚ್ಚಿಟ್ಟ ಕನ್ನಡಿಗ ರಾಹುಲ್ | KL Rahul

ಎಲ್ಲರೂ ಅವರೊಬ್ಬರ ಮಾತನ್ನೇ ಕೇಳಲಿ ಎಂದು ಪ್ರಾರ್ಥಿಸುತ್ತಿದ್ದೆ! ಮೊದಲ ಟೆಸ್ಟ್​ನ ಆ 15 ಸೆಕೆಂಡ್‌ಗಳ ರೋಚಕತೆ ಬಿಚ್ಚಿಟ್ಟ ಕನ್ನಡಿಗ ರಾಹುಲ್ | KL Rahul
Published on: 

ವೆಲ್ಲಿಂಗ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವೆಲ್ಲಿಂಗ್ಟನ್ ಟೆಸ್ಟ್ ಪಂದ್ಯದ 3ನೇ ದಿನದಂದು ಆರಂಭಿಕ ಬ್ಯಾಟರ್ ಕೆ ಎಲ್ ರಾಹುಲ್ (KL Rahul) ಐತಿಹಾಸಿಕ ಶತಕ ಸಿಡಿಸಿ ಮಿಂಚಿದ್ದಾರೆ. ಈ ಶತಕದ ಮೂಲಕ ರಾಹುಲ್, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ (SENA ದೇಶಗಳು) ಈ ಎಲ್ಲಾ ರಾಷ್ಟ್ರಗಳಲ್ಲಿ ಟೆಸ್ಟ್ ಶತಕ ಬಾರಿಸಿದ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಅವರನ್ನೊಳಗೊಂಡ ಟೀಮ್​ ಇಂಡಿಯಾ ದಿಗ್ಗಜ ಬ್ಯಾಟರ್‌ಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಅಷ್ಟೇ ಅಲ್ಲದೆ, ಈ ಮಹತ್ವದ ಸಾಧನೆ ಮಾಡಿದ ಮೊದಲ ಭಾರತೀಯ ಆರಂಭಿಕ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.

ಆದರೆ, ಪಂದ್ಯದ 2ನೇ ದಿನದಂದು ನ್ಯೂಜಿಲೆಂಡ್ ತಂಡ ಡಿಆರ್‌ಎಸ್ ತೆಗೆದುಕೊಂಡಿದ್ದರೆ ಪರಿಸ್ಥಿತಿ ಸಂಪೂರ್ಣ ಬೇರೆಯಾಗಿರುತ್ತಿತ್ತು. ಭಾರತದ ಇನ್ನಿಂಗ್ಸ್‌ನ 7ನೇ ಓವರ್‌ನಲ್ಲಿ ಕೇವಲ 5 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದ ರಾಹುಲ್, ವೇಗಿ ಮ್ಯಾಟ್ ಹೆನ್ರಿ ಎಸೆತವನ್ನು ರಕ್ಷಿಸಿಕೊಳ್ಳಲು ಮುಂದಾದರು. ಆಫ್ ಸ್ಟಂಪ್‌ನಿಂದ ಹೊರಗೆ ಬಿದ್ದ ಚೆಂಡು ಒಳಗೆ ಸ್ವಿಂಗ್ ಆಗಿ ರಾಹುಲ್ ಪ್ಯಾಡ್‌ಗೆ ಬಡಿಯಿತು.

ಬೌಲರ್ ಹೆನ್ರಿ ಎಲ್‌ಬಿಡಬ್ಲ್ಯೂಗಾಗಿ ಬಲವಾದ ಮನವಿ ಮಾಡಿದರಾದರೂ, ಅಂಪೈರ್ ಕುಮಾರ್ ಧರ್ಮಸೇನಾ ಅದನ್ನು ತಿರಸ್ಕರಿಸಿದರು. ಹೆನ್ರಿ ರಿವ್ಯೂ ತೆಗೆದುಕೊಳ್ಳಲು ಉತ್ಸುಕರಾಗಿದ್ದರೂ, ಚೆಂಡು ಬ್ಯಾಟ್‌ಗೆ ತಗುಲಿದೆ ಎಂದು ಫೀಲ್ಡರ್ ಗ್ಲೆನ್ ಫಿಲಿಪ್ಸ್ ನೀಡಿದ ಸಲಹೆಯನ್ನು ನಾಯಕ ಟಾಮ್ ಲೇಥಮ್ ಡಿಆರ್‌ಎಸ್ ತೆಗೆದುಕೊಳ್ಳದಿರಲು ನಿರ್ಧರಿಸಿದರು. ಆದರೆ, ನಂತರದ ರಿಪ್ಲೇಗಳಲ್ಲಿ ರಾಹುಲ್ ಸ್ಪಷ್ಟವಾಗಿ ಔಟಾಗಿದ್ದುದು ಕಂಡುಬಂದಿತ್ತು. ಒಂದು ವೇಳೆ ಕಿವೀಸ್ ಪಡೆ ರಿವ್ಯೂ ತೆಗೆದುಕೊಂಡಿದ್ದರೆ ಆರಂಭದಲ್ಲೇ ರಾಹುಲ್ ವಿಕೆಟ್ ಪಡೆಯಬಹುದಿತ್ತು.

Also Read
ಸಿರಾಜ್ ಆಯ್ಕೆ ವಿವಾದ: ಧರ್ಮದ ಲೇಪನ ಹಚ್ಚಿದ್ದ ಕಾಂಗ್ರೆಸ್ ಸಂಸದನಿಗೆ ಸ್ವಪಕ್ಷೀಯ ನಾಯಕಿಯಿಂದಲೇ ಖಡಕ್ ತಿರುಗೇಟು! | Siraj Selection Controversy
ಎಲ್ಲರೂ ಅವರೊಬ್ಬರ ಮಾತನ್ನೇ ಕೇಳಲಿ ಎಂದು ಪ್ರಾರ್ಥಿಸುತ್ತಿದ್ದೆ! ಮೊದಲ ಟೆಸ್ಟ್​ನ ಆ 15 ಸೆಕೆಂಡ್‌ಗಳ ರೋಚಕತೆ ಬಿಚ್ಚಿಟ್ಟ ಕನ್ನಡಿಗ ರಾಹುಲ್ | KL Rahul

ಸಿಕ್ಕ ಜೀವದಾನವನ್ನು ಎರಡು ಕೈಗಳಿಂದ ಬಾಚಿಕೊಂಡ ರಾಹುಲ್, 290 ಎಸೆತಗಳಲ್ಲಿ 136 ರನ್ ಗಳಿಸುವ ಮೂಲಕ ನ್ಯೂಜಿಲೆಂಡ್ ಗಾಯದ ಮೇಲೆ ಬರೆ ಎಳೆದರು. ರಾಹುಲ್ ಅವರ ಈ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಭಾರತ 3ನೇ ದಿನದ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 486 ರನ್ ಕಲೆಹಾಕಿದ್ದು, 118 ರನ್‌ಗಳ ಮುನ್ನಡೆ ಸಾಧಿಸಿದೆ.

ಗ್ಲೆನ್ ಫಿಲಿಪ್ಸ್‌ಗೆ ರಾಹುಲ್​ ಧನ್ಯವಾದ

ದಿನದಾಟದ ಬಳಿಕ ಡಿಆರ್‌ಎಸ್ ತೆಗೆದುಕೊಳ್ಳದ ನಾಯಕ ಟಾಮ್ ಲೇಥಮ್ ಅವರನ್ನು ಅಪ್ಪಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ರಾಹುಲ್​, ಇಲ್ಲ, ಬಹುಶಃ ಗ್ಲೆನ್ ಫಿಲಿಪ್ಸ್‌ಗೆ ಧನ್ಯವಾದ ಹೇಳಬೇಕು. ಪಂದ್ಯ ಮುಗಿದ ನಂತರ ಅವರಿಗೆ ಒಂದೆರಡು ಡ್ರಿಂಕ್ಸ್ ಕೊಡಿಸುತ್ತೇನೆ. ಹಾಗೆಯೇ ಅಂತಿಮ ನಿರ್ಧಾರ ತೆಗೆದುಕೊಂಡ ಟಾಮ್ ಅವರಿಗೂ ಧನ್ಯವಾದಗಳು ಎಂದು ಹಾಸ್ಯ ಚಟಾಕಿ ಹಾರಿಸಿದರು. ಮುಂದುವರಿದು ಮಾತನಾಡಿದ ಅವರು, ಚೆಂಡು ಬಡಿದಾಗ ಅದು ಆಫ್ ಸ್ಟಂಪ್ ರೇಖೆಯ ಹೊರಗೆ ತಗುಲಿರಬಹುದು ಎಂದು ನಾನು ಪ್ರಾಮಾಣಿಕವಾಗಿ ಭಾವಿಸಿದ್ದೆ ಎಂದರು.

ನನ್ನ ಜೀವನದ ಅತ್ಯಂತ ನಿಧಾನಗತಿಯ 15 ಸೆಕೆಂಡ್‌ಗಳು

ನ್ಯೂಜಿಲೆಂಡ್ ಆಟಗಾರರು ಡಿಆರ್‌ಎಸ್ ತೆಗೆದುಕೊಳ್ಳಬೇಕೇ ಅಥವಾ ಬೇಡವೇ ಎಂದು ಚರ್ಚಿಸುತ್ತಿದ್ದ ಸಮಯವನ್ನು ನೆನಪಿಸಿಕೊಂಡ ರಾಹುಲ್, ಕೆಲವು ಫೀಲ್ಡರ್‌ಗಳಿಗೆ ಚೆಂಡು ನನ್ನ ಬ್ಯಾಟ್‌ಗೆ ತಗುಲಿದೆ ಎನಿಸಿತ್ತು. ಆ 15 ಸೆಕೆಂಡ್‌ಗಳು ಬಹುಶಃ ನನ್ನ ಜೀವನದ ಅತ್ಯಂತ ನಿಧಾನಗತಿಯ 15 ಸೆಕೆಂಡ್‌ಗಳಾಗಿದ್ದವು. ಚೆಂಡು ಬ್ಯಾಟ್‌ಗೆ ಬಡಿದಿದೆ ಎಂದು ಗ್ಲೆನ್ ಫಿಲಿಪ್ಸ್ ಪದೇ ಪದೇ ಹೇಳುತ್ತಿದ್ದರಿಂದ, ಎಲ್ಲರೂ ಅವರ ಮಾತನ್ನೇ ಕೇಳಲಿ ಎಂದು ನಾನು ಪ್ರಾರ್ಥಿಸುತ್ತಿದ್ದೆ. ಅದಕ್ಕಾಗಿ ಜಿಪಿ (ಗ್ಲೆನ್ ಫಿಲಿಪ್ಸ್) ಅವರಿಗೆ ಧನ್ಯವಾದಗಳು ಎಂದು ನಗೆಚಟಾಕಿ ಹಾರಿಸಿದರು(ಏಜೆನ್ಸೀಸ್​).