ತಂಡದ ಆಯ್ಕೆಯ ಹಿಂದಿನ ಅಸಲಿ ಗುಟ್ಟು ಬಿಚ್ಚಿಟ್ಟ ಗಂಭೀರ್ ಕೋಚ್: ಸಿರಾಜ್ ಕೈಬಿಟ್ಟ ವಿವಾದಕ್ಕೆ ಭಾರದ್ವಾಜ್ ಕೊಟ್ಟ ಸ್ಪಷ್ಟನೆ ಏನು? | Siraj Selection Controversy


ತಂಡದ ಆಯ್ಕೆಯ ಹಿಂದಿನ ಅಸಲಿ ಗುಟ್ಟು ಬಿಚ್ಚಿಟ್ಟ ಗಂಭೀರ್ ಕೋಚ್: ಸಿರಾಜ್ ಕೈಬಿಟ್ಟ ವಿವಾದಕ್ಕೆ ಭಾರದ್ವಾಜ್ ಕೊಟ್ಟ ಸ್ಪಷ್ಟನೆ ಏನು? | Siraj Selection Controversy
Published on: 

ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಆಡುವ ಹನ್ನೊಂದರ ಬಳಗದಿಂದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರನ್ನು ಕೈಬಿಟ್ಟಿರುವ ವಿಚಾರಕ್ಕೆ ಧಾರ್ಮಿಕ ಲೇಪ ಬಳೆಯುವ ಪ್ರಯತ್ನಗಳಿಗೆ ಟೀಮ್ ಇಂಡಿಯಾ ಹೆಡ್​ ಕೋಚ್ ಗೌತಮ್ ಗಂಭೀರ್ ಅವರ ಬಾಲ್ಯದ ಕೋಚ್ ಸಂಜಯ್ ಭಾರದ್ವಾಜ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸುದ್ದಿಸಂಸ್ಥೆ ಐಎಎನ್‌ಎಸ್ ಜೊತೆ ಮಾತನಾಡಿದ ಸಂಜಯ್ ಭಾರದ್ವಾಜ್, ತಂಡದ ಆಯ್ಕೆಯು ಸಂಪೂರ್ಣವಾಗಿ ಕ್ರಿಕೆಟ್ ಅವಶ್ಯಕತೆ ಮತ್ತು ತಂಡದ ಸಂಯೋಜನೆಯ ಆಧಾರದ ಮೇಲೆ ನಡೆಯುತ್ತದೆಯೇ ಹೊರತು, ಇದರಲ್ಲಿ ಯಾವುದೇ ಧಾರ್ಮಿಕ ಕೋನವಿಲ್ಲ ಎಂದು ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.

ತಂಡದ ಆಯ್ಕೆಯ ಬಗೆಗಿನ ದೂರುಗಳ ಮಾತನಾಡಿರುವ ಭಾರದ್ವಾಜ್, ಇದೊಂದು ಸಂಪೂರ್ಣ ಆಧಾರರಹಿತ ಆರೋಪವಾಗಿದ್ದು, ಟೀಮ್​ ಇಂಡಿಯಾ ಕ್ರಿಕೆಟ್ ತಂಡದಲ್ಲಿ ಯಾವುದೇ ಹಿಂದೂ-ಮುಸ್ಲಿಂ ಭೇದಭಾವವಿಲ್ಲ. ಇಲ್ಲಿ ಧರ್ಮವನ್ನು ಮೀರಿ ಎಲ್ಲ ಭಾರತೀಯರು ದೇಶವನ್ನು ಪ್ರತಿನಿಧಿಸುತ್ತಾರೆ. ಗೌತಮ್ ಗಂಭೀರ್ ಅವರು ಯಾವಾಗಲೂ ಮೊಹಮ್ಮದ್ ಸಿರಾಜ್ ಅವರಿಗೆ ಬೆಂಬಲವಾಗಿ ನಿಂತಿದ್ದು, ಈಗ ಸಿರಾಜ್ ಆಡುವ ಬಳಗದಲ್ಲಿ ಇಲ್ಲದಿದ್ದರೆ, ಅದು ಕೇವಲ ತಂಡದ ಅಗತ್ಯತೆಗೆ ಅನುಗುಣವಾಗಿ ತೆಗೆದುಕೊಂಡ ನಿರ್ಧಾರವಾಗಿದೆ ಎಂದು ಹೇಳಿದ್ದಾರೆ.

Also Read
ಆತನ ಹೆಸರು ಸಿರಾಜ್ ಎಂಬ ಕಾರಣಕ್ಕೆ ತಂಡದಿಂದ ಕೈಬಿಡಲಾಗಿದೆ: ಟೀಮ್ ಇಂಡಿಯಾ ವಿರುದ್ಧ ತಾರತಮ್ಯದ ಆರೋಪ ಮಾಡಿದ ಕಾಂಗ್ರೆಸ್ ಸಂಸದ! | Imran Masood

ತಂಡದ ಆಯ್ಕೆಯ ಹಿಂದಿನ ಅಸಲಿ ಗುಟ್ಟು ಬಿಚ್ಚಿಟ್ಟ ಗಂಭೀರ್ ಕೋಚ್: ಸಿರಾಜ್ ಕೈಬಿಟ್ಟ ವಿವಾದಕ್ಕೆ ಭಾರದ್ವಾಜ್ ಕೊಟ್ಟ ಸ್ಪಷ್ಟನೆ ಏನು? | Siraj Selection Controversy

ಮುಂದುವರಿದು ಮಾತನಾಡಿದ ಅವರು, ಆಟಗಾರರ ಆಯ್ಕೆಯು ತಂಡದ ಸಂಯೋಜನೆ, ಆಟಗಾರರ ಸ್ಥಾನ ಮತ್ತು ಅವರ ಪ್ರದರ್ಶನವನ್ನು ಅವಲಂಬಿಸಿರುತ್ತದೆ. ಗಂಭೀರ್ ಅವರಿಗೆ ಯಾವುದೇ ಆಟಗಾರನ ವಿರುದ್ಧ ವೈಯಕ್ತಿಕ ದ್ವೇಷವಿಲ್ಲ. ಸರಿಯಾದ ಸಂಯೋಜನೆಯೊಂದಿಗೆ ಬಲಿಷ್ಠ ತಂಡವನ್ನು ಕಟ್ಟುವುದೇ ಅವರ ಮೊದಲ ಆದ್ಯತೆಯಾಗಿದೆ. ಬಿಸಿಸಿಐ ಕೂಡ ಇಂತಹ ಯಾವುದೇ ಹಿಂದೂ-ಮುಸ್ಲಿಂ ವಿಭಜನೆಯನ್ನು ನಂಬುವುದಿಲ್ಲ ಅಥವಾ ಪ್ರೋತ್ಸಾಹಿಸುವುದಿಲ್ಲ. ಇಂತಹ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.

ವಿವಾದದ ಹಿನ್ನೆಲೆ ಏನು?

ವೆಲ್ಲಿಂಗ್ಟನ್‌ನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಸಿರಾಜ್ ಅವರನ್ನು ಕೈಬಿಟ್ಟಿರುವ ಕುರಿತು ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಸಿರಾಜ್ ಅವರನ್ನು ತಂಡದಿಂದ ಹೊರಗಿಟ್ಟಿರುವುದರ ಹಿಂದೆ ಅವರ ಹೆಸರೇ ಕಾರಣವಿರಬಹುದು ಎಂದು ಮಸೂದ್ ಪರೋಕ್ಷವಾಗಿ ಧಾರ್ಮಿಕ ತಾರತಮ್ಯದ ಆರೋಪ ಮಾಡಿದ್ದರು. ಅವರ ಹೆಸರು ಸಿರಾಜ್, ಅಷ್ಟು ಸಾಕಲ್ಲವೇ? ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಆಯ್ಕೆಯಾಗುತ್ತಿಲ್ಲ ಎಂದರೆ ಇದಕ್ಕೆ ಬೇರೆ ಏನು ಕಾರಣವಿರಲು ಸಾಧ್ಯ? ಎಂದು ಪ್ರಶ್ನಿಸಿದ್ದರು. ಈ ಹೇಳಿಕೆಯು ರಾಜಕೀಯ ಮತ್ತು ಕ್ರೀಡಾ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಪ್ರಸ್ತುತ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆವೃತ್ತಿಯಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿರುವ ಮೊಹಮ್ಮದ್ ಸಿರಾಜ್ ಅವರನ್ನು ಗುರುವಾರ ಆರಂಭವಾದ ಮೊದಲ ಟೆಸ್ಟ್‌ನಿಂದ ಕೈಬಿಟ್ಟಿರುವುದು ಕ್ರಿಕೆಟ್ ಪಂಡಿತರಲ್ಲೂ ಅಚ್ಚರಿ ಮೂಡಿಸಿತ್ತು. ಅನುಭವಿ ಸಿರಾಜ್ ಬದಲಿಗೆ ತಂಡದ ಆಡಳಿತ ಮಂಡಳಿಯು ಯುವ ವೇಗಿ ಅನ್ಶುಲ್ ಕಾಂಬೋಜ್ ಅವರಿಗೆ ಅವಕಾಶ ನೀಡಿದ್ದು, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ ಮತ್ತು ಆಕಾಶ್ ದೀಪ್ ಅವರೊಂದಿಗೆ ಕಣಕ್ಕಿಳಿದಿದೆ. ಸಿರಾಜ್ ಅವರನ್ನು ಮೀಸಲು ಆಟಗಾರರ ಪಟ್ಟಿಯಲ್ಲಿ ಇರಿಸಲಾಗಿದೆ.

ಈ ಆಯ್ಕೆಯ ಕುರಿತು ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್ ಸಿತಾಂಶು ಕೊಟಕ್ ಕೂಡ ಸ್ಪಷ್ಟನೆ ನೀಡಿದ್ದು, ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ನಾಯಕ ಮತ್ತು ತಂಡದ ಆಡಳಿತ ಮಂಡಳಿಯು ಅತ್ಯಂತ ಬಲಿಷ್ಠ ಎನಿಸಿದ ಸಂಯೋಜನೆಯನ್ನೇ ಆಯ್ಕೆ ಮಾಡಿದೆ ಎಂದು ಸಮರ್ಥಿಸಿಕೊಂಡಿದ್ದಾರೆ(ಏಜೆನ್ಸೀಸ್​).