2ನೇ ಟೆಸ್ಟ್​ನ ಮೂರನೇ ದಿನದಾಟ ಮುಕ್ತಾಯ; ಟೀಮ್ ಇಂಡಿಯಾ ಎದುರು ಕಿವೀಸ್​ಗೆ​ 243 ರನ್‌ಗಳ ಮುನ್ನಡೆ | IND vs NZ Test

IND vs NZ Test
2ನೇ ಟೆಸ್ಟ್​ನ ಮೂರನೇ ದಿನದಾಟ ಮುಕ್ತಾಯ; ಟೀಮ್ ಇಂಡಿಯಾ ಎದುರು ಕಿವೀಸ್​ಗೆ​ 243 ರನ್‌ಗಳ ಮುನ್ನಡೆ | IND vs NZ Test
Published on: 

ಕ್ರೈಸ್ಟ್‌ಚರ್ಚ್: ಪ್ರಸಕ್ತ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ (IND vs NZ Test) ಆತಿಥೇಯ ಕಿವೀಸ್ ತಂಡ ಪ್ರಾಬಲ್ಯ ಸಾಧಿಸಿದೆ. ಪಂದ್ಯದ ಮೂರನೇ ದಿನದಾಟದ ಅಂತ್ಯಕ್ಕೆ ನ್ಯೂಜಿಲೆಂಡ್ ತನ್ನ ಎರಡನೇ ಇನಿಂಗ್ಸ್‌ನಲ್ಲಿ 3 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿದೆ. ಅಲ್ಲಿಗೆ, 243 ರನ್‌ನಿಂದ ಮುನ್ನಡೆ ಕಾಯ್ದುಕೊಂಡಿದೆ. ರಚಿನ್ ರವೀಂದ್ರ (46 ರನ್​) ಮತ್ತು ಡ್ಯಾರಿಲ್ ಮಿಚೆಲ್ (5) ನಾಲ್ಕನೇ ದಿನಕ್ಕೂ ಕ್ರೀಸ್​ನಲ್ಲಿ ಮುಂದುವರಿಯಲಿದ್ದಾರೆ.

ಮೊದಲ ಇನಿಂಗ್ಸ್‌ನಲ್ಲಿ 110 ರನ್‌ಗಳ ಮುನ್ನಡೆ ಪಡೆದಿದ್ದ ನ್ಯೂಜಿಲೆಂಡ್ ಎರಡನೇ ಇನಿಂಗ್ಸ್ ಆರಂಭಿಸುತ್ತಿದ್ದಂತೆ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಶಾಕ್ ನೀಡಿದರು. ಆರಂಭಿಕ ಬ್ಯಾಟರ್ ಟಾಮ್ ಲಾಥಮ್ (8) ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಮೊದಲ ವಿಕೆಟ್ ಪಡೆದರು. ತಂಡದ ಮೊತ್ತ 22 ರನ್ ಆಗಿದ್ದಾಗ ಮತ್ತೊಂದು ಪ್ರಮುಖ ವಿಕೆಟ್ ಕಬಳಿಸಿದ ಬುಮ್ರಾ, ಮೂರನೇ ಕ್ರಮಾಂಕದ ಬ್ಯಾಟರ್ ಹೆನ್ರಿ ನಿಕೋಲ್ಸ್ (22) ಅವರನ್ನು ಪೆವಿಲಿಯನ್‌ಗೆ ಹೋಗುವಂತೆ ದಾರಿ ತೋರಿಸಿದರು.

ಮತ್ತೊಂದೆಡೆ, ಆರಂಭಿಕ ಆಟಗಾರ ಡೆವೊನ್ ಕಾನ್ವೇ ಭಾರತದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಅರ್ಧಶತಕ ಸಿಡಿಸಿದ ಅವರು 51 ರನ್ ಗಳಿಸಿ ಉತ್ತಮ ಆಟವಾಡಿದರು. ವಾಷಿಂಗ್ಟನ್ ಸುಂದರ್ ಬೌಲಿಂಗ್‌ನಲ್ಲಿ ಯಶಸ್ವಿ ಜೈಸ್ವಾಲ್‌ಗೆ ಕ್ಯಾಚ್ ನೀಡಿ ಔಟಾದರು. ಬಳಿಕ ರಚಿನ್ ರವೀಂದ್ರ ಮತ್ತು ಡ್ಯಾರಿಲ್ ಮಿಚೆಲ್ ಯಾವುದೇ ವಿಕೆಟ್ ಕಳೆದುಕೊಳ್ಳದೆ ದಿನದಾಟ ಮುಗಿಸಿದರು.

Also Read
ಜೀವಂತ ಹಾವು, ಬೆಕ್ಕು... ಮನುಷ್ಯನನ್ನೇ ನುಂಗಲು ಹೋಗಿದ್ದ ಈತನ ವಿಚಿತ್ರ ಹಸಿವಿನ ಬಗ್ಗೆ ಕೇಳಿದ್ರೆ ಬೆಕ್ಕಸ ಬೆರಗಾಗ್ತೀರಾ | Tarrare
IND vs NZ Test

130 ರನ್ ಸೇರಿಸಿ ಆಲೌಟ್ ಆದ ಭಾರತ!

ಇದಕ್ಕೂ ಮೊದಲು ಮೂರನೇ ದಿನದಾಟವನ್ನು ಮೊದಲ ಇನಿಂಗ್ಸ್‌ನಲ್ಲಿ 116 ರನ್‌ಗೆ 6 ವಿಕೆಟ್​ ಕಳೆದುಕೊಂಡಿದ್ದ ಭಾರತ, ಅಲ್ಲಿಂದ ಶುರು ಮಾಡಿ, ಹೆಚ್ಚುವರಿಯಾಗಿ 130 ರನ್ ಸೇರಿಸಿ ಉಳಿದ ನಾಲ್ಕು ವಿಕೆಟ್‌ಗಳನ್ನು ಒಪ್ಪಿಸುವ ಮೂಲಕ ಆಲ್​ಔಟ್ ಆಯಿತು. ತಂಡದ ಪರ ಧ್ರುವ್ ಜುರೇಲ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು. 170 ಎಸೆತಗಳನ್ನು ಎದುರಿಸಿದ ಅವರು 14 ಬೌಂಡರಿಗಳ ನೆರವಿನಿಂದ 88 ರನ್ ಗಳಿಸಿದರು. ಒಂದು ಕಡೆ ವಿಕೆಟ್‌ಗಳು ಉರುಳುತ್ತಿದ್ದರೂ ಜವಾಬ್ದಾರಿಯುತ ಆಟವಾಡಿದ ಜುರೇಲ್ ತಂಡದ ಮೊತ್ತ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಮತ್ತೊಂದೆಡೆ, ಆಕಾಶ್ ದೀಪ್ 52 ಎಸೆತಗಳಲ್ಲಿ 4 ಬೌಂಡರಿಗಳ ನೆರವಿನಿಂದ 29 ರನ್ ಗಳಿಸಿ ತಂಡ ಫಾಲೋಆನ್ ಭೀತಿಯಿಂದ ಪಾರಾಗಲು ಸಹಾಯ ಮಾಡಿದರು. ಅಂತಿಮವಾಗಿ ಭಾರತ ತನ್ನ ಮೊದಲ ಇನಿಂಗ್ಸ್‌ನಲ್ಲಿ 246 ರನ್‌ಗೆ ಆಲೌಟ್ ಆಯಿತು. ಇದರಿಂದ ನ್ಯೂಜಿಲೆಂಡ್‌ಗೆ ಮೊದಲ ಇನಿಂಗ್ಸ್‌ನಲ್ಲಿ 110 ರನ್‌ಗಳ ಮಹತ್ವದ ಮುನ್ನಡೆ ಲಭಿಸಿತು. ಇದೀಗ ಎರಡನೇ ಇನಿಂಗ್ಸ್‌ನಲ್ಲೂ 243 ರನ್‌ಗಳ ಮುನ್ನಡೆ ಹೊಂದಿರುವ ಕಿವೀಸ್ ಪಡೆ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದು, ಎರಡನೇ ಟೆಸ್ಟ್​ ಅನ್ನು ವಶಪಡಿಸಿಕೊಳ್ಳುವ ತವಕದಲ್ಲಿದೆ,(ಏಜೆನ್ಸೀಸ್).