1933ರ ಬಳಿಕ ಇದೇ ಮೊದಲು: ಕಿವೀಸ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಇತಿಹಾಸ ನಿರ್ಮಿಸಿದ ಟೀಮ್​ ಇಂಡಿಯಾ ಬ್ಯಾಟರ್‌ಗಳು! | INDvsNZ

ಮೊದಲ ಟೆಸ್ಟ್‌ನಲ್ಲಿ ಇತಿಹಾಸ ನಿರ್ಮಿಸಿದ ಟೀಮ್​ ಇಂಡಿಯಾ ಬ್ಯಾಟರ್‌ಗಳು!
ಮೊದಲ ಟೆಸ್ಟ್‌ನಲ್ಲಿ ಇತಿಹಾಸ ನಿರ್ಮಿಸಿದ ಟೀಮ್​ ಇಂಡಿಯಾ ಬ್ಯಾಟರ್‌ಗಳು!
Published on: 

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನವಾದ ಭಾನುವಾರ ಟೀಮ್ ಇಂಡಿಯಾ ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಕಿವೀಸ್ ನೆಲದಲ್ಲಿ ಐತಿಹಾಸಿಕ ದಾಖಲೆಗಳ ಸುರಿಮಳೆಗೈದಿದೆ. ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್ ಮೈದಾನದಲ್ಲಿ ನಾಯಕ ಶುಭಮಾನ್ ಗಿಲ್ ನೇತೃತ್ವದ ಭಾರತ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 9 ವಿಕೆಟ್ ನಷ್ಟಕ್ಕೆ ಬರೋಬ್ಬರಿ 720 ರನ್ ಗಳಿಸಿ ಡಿಕ್ಲೇರ್ ಮಾಡಿಕೊಳ್ಳುವ ಮೂಲಕ 352 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿದೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಹಿಂದೆಂದೂ ಕಾಣದ ಅಪರೂಪದ ವಿಶ್ವದಾಖಲೆಯನ್ನು ಭಾರತ ತನ್ನ ಹೆಸರಿಗೆ ಬರೆದುಕೊಂಡಿದೆ.

ಟೆಸ್ಟ್ ಇನ್ನಿಂಗ್ಸ್​​ವೊಂದರ ಮೊದಲ ಏಳು ವಿಕೆಟ್‌ಗಳಿಗೆ ಸತತವಾಗಿ 50ಕ್ಕೂ ಹೆಚ್ಚು ರನ್‌ಗಳ ಜೊತೆಯಾಟವಾಡಿದ ವಿಶ್ವದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಇಷ್ಟೇ ಅಲ್ಲದೆ, ಒಂದೇ ಇನ್ನಿಂಗ್ಸ್‌ನಲ್ಲಿ ಏಳು ಅಥವಾ ಅದಕ್ಕಿಂತ ಹೆಚ್ಚು ಅರ್ಧಶತಕದ ಜೊತೆಯಾಟಗಳನ್ನು ಎರಡು ಬಾರಿ ದಾಖಲಿಸಿದ ಮೊದಲ ತಂಡವೂ ಭಾರತವಾಗಿದೆ (ಈ ಹಿಂದೆ 2007ರಲ್ಲಿ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಟೆಸ್ಟ್‌ನಲ್ಲಿ ಭಾರತ 8 ಬಾರಿ 50+ ಜೊತೆಯಾಟವಾಡಿತ್ತು).

Also Read
ಎಲ್ಲರೂ ಅವರೊಬ್ಬರ ಮಾತನ್ನೇ ಕೇಳಲಿ ಎಂದು ಪ್ರಾರ್ಥಿಸುತ್ತಿದ್ದೆ! ಮೊದಲ ಟೆಸ್ಟ್​ನ ಆ 15 ಸೆಕೆಂಡ್‌ಗಳ ರೋಚಕತೆ ಬಿಚ್ಚಿಟ್ಟ ಕನ್ನಡಿಗ ರಾಹುಲ್ | KL Rahul
ಮೊದಲ ಟೆಸ್ಟ್‌ನಲ್ಲಿ ಇತಿಹಾಸ ನಿರ್ಮಿಸಿದ ಟೀಮ್​ ಇಂಡಿಯಾ ಬ್ಯಾಟರ್‌ಗಳು!

ಜೊತೆಯಾಟಗಳ ಹಾದಿ ಹೀಗಿತ್ತು!

ನ್ಯೂಜಿಲೆಂಡ್‌ನ 368 ರನ್‌ಗಳಿಗೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ್ದ ಟೀಮ್​ ಇಂಡಿಯಾ ಆರಂಭಿಕರಾದ ಕೆ ಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ (85) ಮೊದಲ ವಿಕೆಟ್‌ಗೆ 130 ರನ್ ಸೇರಿಸಿ ಭದ್ರ ಬುನಾದಿ ಹಾಕಿಕೊಟ್ಟರು. ಬಳಿಕ ರಾಹುಲ್ ಜೊತೆಗೂಡಿದ ಮತ್ತೊಬ್ಬ ಕನ್ನಡಿಗ ದೇವದತ್ ಪಡಿಕ್ಕಲ್ (80) ಎರಡನೇ ವಿಕೆಟ್‌ಗೆ 165 ರನ್‌ಗಳ ಭರ್ಜರಿ ಜೊತೆಯಾಟವಾಡಿದರು. ನಾಯಕ ಶುಭಮಾನ್ ಗಿಲ್ ಹಾಗೂ ರಾಹುಲ್ ಮೂರನೇ ವಿಕೆಟ್‌ಗೆ 91 ರನ್ ಕಲೆಹಾಕಿದರೆ, ಗಿಲ್ ಮತ್ತು ರಿಷಭ್ ಪಂತ್ ನಾಲ್ಕನೇ ವಿಕೆಟ್‌ಗೆ ಶತಕದ ಜೊತೆಯಾಟವಾಡಿ ತಂಡವನ್ನು ಸುಸ್ಥಿತಿಗೆ ತಂದರು.

ನಾಲ್ಕನೇ ದಿನದಾಟವನ್ನು 486/4 ರನ್‌ಗಳಿಂದ ಮುಂದುವರಿಸಿದ ಭಾರತಕ್ಕೆ ಪಂತ್ ಮತ್ತು ನೈಟ್ ವಾಚ್‌ಮನ್ ಅನ್ಶುಲ್ ಕಾಂಬೋಜ್ (38 ರನ್, 42 ಎಸೆತ) ಬಿರುಸಿನ ಬ್ಯಾಟಿಂಗ್ ಮೂಲಕ ವೇಗ ನೀಡಿದರು. ಇವರಿಬ್ಬರು ಐದನೇ ವಿಕೆಟ್‌ಗೆ ಕೇವಲ ಒಂದು ಗಂಟೆಯ ಆಟದಲ್ಲಿ 75 ರನ್ ಸೇರಿಸಿದರು. ಭೋಜನ ವಿರಾಮದ ವೇಳೆಗೆ 128 ರನ್ ಗಳಿಸಿ ಔಟಾದ ಪಂತ್, ಆರನೇ ವಿಕೆಟ್‌ಗೆ ಧ್ರುವ್ ಜುರೆಲ್ ಜೊತೆ 54 ರನ್ ಸೇರಿಸಿದರು. ಬಳಿಕ ಜುರೆಲ್ ಮತ್ತು ವಾಷಿಂಗ್ಟನ್ ಸುಂದರ್ ಏಳನೇ ವಿಕೆಟ್‌ಗೆ 54 ರನ್ ಕಲೆಹಾಕುವ ಮೂಲಕ ತಂಡದ ಮೊತ್ತವನ್ನು 700ರ ಗಡಿ ದಾಟಿಸಿದರು.

ಧೂಳೀಪಟವಾದ ಹಳೆಯ ದಾಖಲೆಗಳು!

ನ್ಯೂಜಿಲೆಂಡ್ ವಿರುದ್ಧ ಗರಿಷ್ಠ ಮೊತ್ತ: ಭಾರತ ಗಳಿಸಿದ 720/9 ರನ್, ಟೆಸ್ಟ್ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಯಾವುದೇ ತಂಡ ಗಳಿಸಿದ ಗರಿಷ್ಠ ಮೊತ್ತವಾಗಿದೆ. 1995ರಲ್ಲಿ ಇದೇ ಮೈದಾನದಲ್ಲಿ ವೆಸ್ಟ್ ಇಂಡೀಸ್ ಗಳಿಸಿದ್ದ 660/5 ಡಿಕ್ಲೇರ್ ದಾಖಲೆಯನ್ನು ಭಾರತ ಅಳಿಸಿಹಾಕಿತು.

ಕಿವೀಸ್ ನೆಲದಲ್ಲಿ ಅತಿ ದೊಡ್ಡ ಸ್ಕೋರ್: ನ್ಯೂಜಿಲೆಂಡ್ ನೆಲದಲ್ಲಿ ದಾಖಲಾದ ಗರಿಷ್ಠ ತಂಡದ ಮೊತ್ತ ಇದಾಗಿದೆ. 2019ರಲ್ಲಿ ಹ್ಯಾಮಿಲ್ಟನ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ನ್ಯೂಜಿಲೆಂಡ್ ಗಳಿಸಿದ್ದ 715/6 ಡಿಕ್ಲೇರ್ ದಾಖಲೆ ಈಗ ಇತಿಹಾಸ ಸೇರಿದೆ.

ಭಾರತದ ಶ್ರೇಷ್ಠ ಸಾಧನೆ: ನ್ಯೂಜಿಲೆಂಡ್ ನೆಲದಲ್ಲಿ ಭಾರತದ ಹಿಂದಿನ ಗರಿಷ್ಠ ಮೊತ್ತ 520 ರನ್ (2009, ಹ್ಯಾಮಿಲ್ಟನ್) ಆಗಿತ್ತು. ಪಂದ್ಯದ 131ನೇ ಓವರ್‌ನಲ್ಲೇ ಭಾರತ ಈ ದಾಖಲೆಯನ್ನು ಮುರಿದು ಮುನ್ನಡೆಯಿತು. ಒಟ್ಟಾರೆಯಾಗಿ, ಟೀಮ್ ಇಂಡಿಯಾದ ಬ್ಯಾಟಿಂಗ್ ಪರಾಕ್ರಮಕ್ಕೆ ನ್ಯೂಜಿಲೆಂಡ್ ಬೌಲರ್‌ಗಳು ಸಂಪೂರ್ಣವಾಗಿ ಮಂಡಿಯೂರಿದ್ದಾರೆ(ಏಜೆನ್ಸೀಸ್​).