ಆಟಗಾರನಿಂದ ಮೆಂಟರ್​ ಆಗಿ ಬದಲಾವಣೆ! ಧೋನಿ ನಿವೃತ್ತಿ ಬಗ್ಗೆ ಸಿಎಸ್‌ಕೆ ನೂತನ ಕೋಚ್ ಜಹೀರ್ ಖಾನ್ ಏನಂದ್ರು ಗೊತ್ತಾ? | Zaheer Khan

ಆಟಗಾರನಿಂದ ಮೆಂಟರ್​ ಆಗಿ ಬದಲಾವಣೆ! ಧೋನಿ ನಿವೃತ್ತಿ ಬಗ್ಗೆ ಸಿಎಸ್‌ಕೆ ನೂತನ ಕೋಚ್ ಜಹೀರ್ ಖಾನ್ ಏನಂದ್ರು ಗೊತ್ತಾ? | Zaheer Khan
Published on: 

ಚೆನ್ನೈ: ಕೇವಲ ಯಶಸ್ವಿ ಐಪಿಎಲ್ ತಂಡದ ನಾಯಕನಾಗಿ ಮಾತ್ರವಲ್ಲದೆ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅವಿಭಾಜ್ಯ ಅಂಗವಾಗಿ ಬೆಳೆದಿದ್ದ ದಿಗ್ಗಜ ಎಂ ಎಸ್ ಧೋನಿ ಅವರ ಸುದೀರ್ಘ 19 ಋತುಗಳ ಐಪಿಎಲ್ ಆಟಗಾರನ ಪಯಣ ಅಂತ್ಯಗೊಂಡಿದ್ದು, ಮುಂಬರುವ ಐಪಿಎಲ್​ನಲ್ಲಿ ತಂಡದ ಮಾರ್ಗದರ್ಶಕರಾಗಿ ಹೊಸ ಇನ್ನಿಂಗ್ಸ್ ಆರಂಭಿಸಲಿದ್ದಾರೆ.

ಆಟಗಾರನಾಗಿ ಮುಂದುವರಿಯುವುದಿಲ್ಲ ಎಂದು ಸ್ವತಃ ಧೋನಿ ಅವರೇ ತಂಡದ ಆಡಳಿತ ಮಂಡಳಿಗೆ ತಿಳಿಸಿದ್ದು, ಇನ್ನು ಮುಂದೆ ಅವರು ಮಾರ್ಗದರ್ಶಕರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಧೋನಿ ಅವರ ಈ ನಿವೃತ್ತಿ ನಿರ್ಧಾರವು ತಂಡದ ಹೊಸ ಕೋಚ್ ಜಹೀರ್ ಖಾನ್ ಅವರಿಗೂ ಅನಿರೀಕ್ಷಿತವಾಗಿತ್ತು ಎಂದು ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ.

ಅವರ ಈ ನಿರ್ಧಾರ ಅನಿರೀಕ್ಷಿತ! ಜಹೀರ್ ಖಾನ್

ಸಿಎಸ್‌ಕೆ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ನೂತನ ಕೋಚ್ ಜಹೀರ್ ಖಾನ್, ಹರಾಜು ಪ್ರಕ್ರಿಯೆಗೆ ಇದು ಕೊನೆಯ ವರ್ಷವಾಗಿದ್ದರಿಂದ ನಾನು ಇದನ್ನು ನಿರೀಕ್ಷಿಸಿರಲಿಲ್ಲ. ಇದರ ಬಗ್ಗೆ ಯೋಚನೆಯನ್ನೂ ಸಹ ಮಾಡಿರಲಿಲ್ಲ. ಆದರೆ ಧೋನಿ ಅವರಿಗೆ ಏನು ಮಾಡಬೇಕು ಮತ್ತು ಯಾವಾಗ ಮಾಡಬೇಕು ಎನ್ನುವುದು ಚೆನ್ನಾಗಿ ತಿಳಿದಿದ್ದು, ಇದು ಅವರ ಸ್ವಂತ ನಿರ್ಧಾರವಾಗಿದ್ದು, ಅದನ್ನು ನಾವು ಗೌರವಿಸಬೇಕು, ಆದರೆ ವೈಯಕ್ತಿಕವಾಗಿ ಇದು ನನಗೆ ಅನಿರೀಕ್ಷಿತ. ದೊಡ್ಡ ಸುದ್ದಿ ಮಾಡಲು ಅವರು ಇಷ್ಟಪಡುವುದಿಲ್ಲವಾದ್ದರಿಂದ, ಅವರು ಬಹಳ ಸೂಕ್ಷ್ಮವಾಗಿ ಈ ವಿಷಯವನ್ನು ತಿಳಿಸಿದರು ಎನ್ನುವುದನ್ನು ಜಹೀರ್​ ಖಾನ್​ ತಿಳಿಸಿದ್ದಾರೆ.

ಮುಂದುವರಿದು ಮಾತನಾಡಿದ ಜಹೀರ್ ಖಾನ್, ನಮ್ಮೆಲ್ಲರಿಗೂ ಇದು ಭಾವನಾತ್ಮಕ ವಾರ, ಮನಸ್ಸಲ್ಲಿ ಮಿಶ್ರ ಭಾವನೆಗಳಿವೆ. ಪ್ರತಿ ವರ್ಷದಂತೆ ಧೋನಿ ಮೈದಾನದಲ್ಲಿ ಆಡುವುದನ್ನು ನೋಡಲು ಎಲ್ಲರೂ ಇಷ್ಟಪಡುತ್ತಾರೆ. ಅವರು ತಂಡದಲ್ಲೇ ಇರುತ್ತಾರೆ, ಆದರೆ ಹೊಸ ಪಾತ್ರ. ಅದಕ್ಕೇ ಈ ಮಿಶ್ರ ಭಾವನೆ. ಧೋನಿ ಮಾರ್ಗದರ್ಶನ ನೀಡಿ ನನ್ನ ಜವಾಬ್ದಾರಿಯ ಹೊರೆಯನ್ನು ಹಂಚಿಕೊಳ್ಳುವುದರಿಂದ ನನ್ನ ಕೆಲಸ ಸುಲಭವಾಗುತ್ತದೆ ಎಂಬ ಖುಷಿಯೂ ಇದೆ. ಆದರೂ, ಅವರು ಆಟದಿಂದ ದೂರ ಸರಿದಿರುವುದಕ್ಕೆ ನನಗೆ ಬೇಸರವೂ ಇದೆ ಎಂದು ಹೇಳಿದ್ದಾರೆ.

Also Read
ನೀವಿಲ್ಲದೆ ಐಪಿಎಲ್ ಮೊದಲಿನಂತಿರಲ್ಲ, ಇದೊಂದು ಯುಗದ ಅಂತ್ಯ: ಧೋನಿ ನಿವೃತ್ತಿಗೆ ಭಾವುಕರಾದ ದಿಗ್ಗಜರು ಪಟ್ಟಿ ಹೀಗಿದೆ! | MS Dhoni Retirement
ಆಟಗಾರನಿಂದ ಮೆಂಟರ್​ ಆಗಿ ಬದಲಾವಣೆ! ಧೋನಿ ನಿವೃತ್ತಿ ಬಗ್ಗೆ ಸಿಎಸ್‌ಕೆ ನೂತನ ಕೋಚ್ ಜಹೀರ್ ಖಾನ್ ಏನಂದ್ರು ಗೊತ್ತಾ? | Zaheer Khan

ಜವಾಬ್ದಾರಿ ಹಂಚಿಕೆ!

ಇಬ್ಬರೂ ತಂಡದ ಜವಾಬ್ದಾರಿಗಳನ್ನು ಹೇಗೆ ಹಂಚಿಕೊಳ್ಳಲಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಜಹೀರ್ ಖಾನ್, ಇಲ್ಲಿ ಯಾವುದೇ ಗಡಿಗಳಿಲ್ಲ, ಪ್ರಕ್ರಿಯೆಯನ್ನು ಸುಗಮಗೊಳಿಸಲು ಮಾತ್ರ ಹುದ್ದೆಗಳಿವೆ. ಒಂದೇ ಹಾದಿಯಲ್ಲಿ ಸಾಗುವುದು ಮತ್ತು ತಂಡವನ್ನು ಒಂದೇ ದಿಕ್ಕಿನಲ್ಲಿ ಮುನ್ನಡೆಸುವುದು ಮುಖ್ಯ. ಅವರ ನಾಯಕತ್ವದ ದೊಡ್ಡ ಅಂಶವೆಂದರೆ ನಂಬಿಕೆ. ವ್ಯಕ್ತಿಗಳು ಸರಿಯಾದ ಕೆಲಸ ಮಾಡುತ್ತಾರೆ ಎಂದು ಅವರು ಯಾವಾಗಲೂ ನಂಬುತ್ತಾರೆ. ಬಯಸಿದ ಫಲಿತಾಂಶ ಬರುವವರೆಗೆ ಅವರು ಆಟಗಾರರಿಗೆ ಬೆಂಬಲ ನೀಡುತ್ತಾರೆ, ನಂತರ ಮಧ್ಯಪ್ರವೇಶಿಸುತ್ತಾರೆ ಇದು ಲೀಡರ್​ ಆಗಿ ಅವರ ಅದ್ಭುತ ಗುಣವಾಗಿದೆ ಎಂದು ಶ್ಲಾಘಿಸಿದ್ದಾರೆ. ತಮ್ಮ ಆಟದ ದಿನಗಳಲ್ಲಿ ಧೋನಿ ಮತ್ತು ಜಹೀರ್ ಖಾನ್ ಭಾರತ ಕ್ರಿಕೆಟ್ ತಂಡದಲ್ಲಿ ಸಹ ಆಟಗಾರರಾಗಿ ಒಟ್ಟಿಗೆ ಆಡಿದ್ದರು(ಏಜೆನ್ಸೀಸ್).