

ನವದೆಹಲಿ: ಕೆಕೆಆರ್ ಮೆಂಟರ್ ಆಗಿ ಐಪಿಎಲ್ ಟ್ರೋಫಿ ಗೆದ್ದುಕೊಟ್ಟ ಬಳಿಕ ಅಪಾರ ನಿರೀಕ್ಷೆಗಳೊಂದಿಗೆ ಭಾರತ ತಂಡದ ಮುಖ್ಯ ಕೋಚ್ ಹುದ್ದೆಗೇರಿ, ದಿಗ್ಗಜ ರಾಹುಲ್ ದ್ರಾವಿಡ್ ಉತ್ತರಾಧಿಕಾರಿ ಆದ ಗೌತಮ್ ಗಂಭೀರ್ ಕಳೆದ 3 ತಿಂಗಳ ಅವಧಿಯಲ್ಲಿ ಸಂಭ್ರಮಕ್ಕಿಂತ ಬೇಸರವನ್ನೇ ನೀಡಿದ್ದಾರೆ. ಶ್ರೀಲಂಕಾ ಎದುರು 27 ವರ್ಷಗಳ ಬಳಿಕ ಏಕದಿನ ಸರಣಿ ಸೋತ ಭಾರತ ನಂತರ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹ್ಯಾಟ್ರಿಕ್ ಸೋಲಿನೊಂದಿಗೆ ಮುಖಭಂಗ ಎದುರಿಸುವಂತಾಯಿತು. ಇದರಿಂದಾಗಿ ಭಾರತ ತಂಡದ ಹಿರಿಯ ಆಟಗಾರರ ಜತೆಗೆ ಕೋಚ್ ಗಂಭೀರ್ ಕೂಡ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅವರ ಕೆಲ ಪ್ರಯೋಗಗಳು ಟೀಕೆಗೆ ಗುರಿಯಾಗಿದ್ದು, ಮುಂಬರುವ ಮಹತ್ವದ ಆಸ್ಟ್ರೆಲಿಯಾ ಪ್ರವಾಸದ ಬೆನ್ನಲ್ಲೇ ಗಂಭೀರ್ ನಿರ್ವಹಣೆಯನ್ನು ಬಿಸಿಸಿಐ ಪರಾಮರ್ಶೆ ನಡೆಸಲಿದೆ. ಆಸೀಸ್ನಲ್ಲೂ ಭಾರತ ಸೋತರೆ ಗಂಭೀರ್ ಹುದ್ದೆಯಲ್ಲಿ ಮುಂದುವರಿಯುವುದು ಕೂಡ ಕಷ್ಟಕರವಾಗಲಿದೆ ಎನ್ನಲಾಗಿದೆ.
ಆಸೀಸ್ ಪ್ರವಾಸಕ್ಕೆ ಗಂಭೀರ್ ಆಯ್ಕೆ ಆದ್ಯತೆಯ ಆಧಾರದಲ್ಲೇ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಮತ್ತು ವೇಗಿ ಹರ್ಷಿತ್ ರಾಣಾಗೆ ಅವಕಾಶ ನೀಡಲಾಗಿದೆ. ಆದರೆ ಹರ್ಷಿತ್ ರಾಣಾರನ್ನು ಭಾರತ ಎ ತಂಡದೊಂದಿಗೆ ಆಸೀಸ್ಗೆ ಬೇಗನೆ ಕಳುಹಿಸದೆ ಮುಂಬೈ ಟೆಸ್ಟ್ ವೇಳೆಯೂ ಮೀಸಲು ಆಟಗಾರರಾಗಿ ಉಳಿಸಿಕೊಳ್ಳಲಾಯಿತು. ಇನ್ನು ನಿತೀಶ್ ಕುಮಾರ್ರನ್ನು ಹಾರ್ದಿಕ್ ಪಾಂಡ್ಯ ಉತ್ತರಾಧಿಕಾರಿ ಎಂದು ಹೇಳಲಾಗುತ್ತಿದ್ದರೂ, ಆಸೀಸ್ನಲ್ಲಿ ಭಾರತ ಎ ತಂಡದ ಪರ ಆಡುವಾಗ ಶಾರ್ಟ್ಬಾಲ್ ಎದುರು ಅವರ ದೌರ್ಬಲ್ಯ ಬೆಳಕಿಗೆ ಬಂದಿದೆ. ಜತೆಗೆ ಅವರ ವೇಗದ ಬೌಲಿಂಗ್, ಐವರು ಬೌಲರ್ಗಳಲ್ಲಿ ಒಬ್ಬರಾಗಿ ಆಡಿಸುವಷ್ಟು ಹರಿತವಾಗಿಲ್ಲ. ಹೀಗಾಗಿ ಆಸ್ಟ್ರೆಲಿಯಾ ಪ್ರವಾಸ ಗಂಭೀರ್ ಪಾಲಿಗೆ ನಿಜವಾದ ಸತ್ವಪರೀಕ್ಷೆ ಎನಿಸಿದೆ.
ಕೋಚ್ ಅಧಿಕಾರಗಳಿಗೆ ಕತ್ತರಿ?
ಗಂಭೀರ್ ಕೋಚ್ ಹುದ್ದೆಗೇರಿದಾಗ ಅವರ ಆಯ್ಕೆಯ ಸಹಾಯಕ ಕೋಚ್, ಬೌಲಿಂಗ್ ಕೋಚ್ಗಳನ್ನೇ ನೀಡಲಾಯಿತು. ಜತೆಗೆ, ಬಿಸಿಸಿಐ ಸಂವಿಧಾನದ ಪ್ರಕಾರ ಮುಖ್ಯ ಕೋಚ್ಗೆ ಭಾರತ ತಂಡದ ಆಯ್ಕೆಯಲ್ಲಿ ಯಾವುದೇ ಪಾತ್ರವಿಲ್ಲದಿದ್ದರೂ, ಆಸ್ಟ್ರೆಲಿಯಾ ಪ್ರವಾಸದ ತಂಡ ಆಯ್ಕೆಯಲ್ಲಿ ಗಂಭೀರ್ಗೆ ಪೂರ್ಣ ಸ್ವಾತಂತ್ರ$್ಯ ನೀಡಲಾಯಿತು. ಈ ಹಿಂದೆ ಕೋಚ್ ಆಗಿದ್ದ ರವಿಶಾಸ್ತ್ರಿ, ದ್ರಾವಿಡ್ಗೂ ಆಯ್ಕೆ ಸಮಿತಿ ಸಭೆಗೆ ಹಾಜರಾಗಲು ಅವಕಾಶ ನೀಡಿರಲಿಲ್ಲ. ಕಿವೀಸ್ ವಿರುದ್ಧದ ಸರಣಿಯಲ್ಲಿ ಪಿಚ್ ಆಯ್ಕೆ ವಿಚಾರದಲ್ಲೂ ಗಂಭೀರ್ ನಿರ್ಧಾರಕ್ಕೆ ಮನ್ನಣೆ ನೀಡಲಾಯಿತು. ಆದರೆ ಗಂಭೀರ್ಗೆ ಇದುವರೆಗೆ ನೀಡಲಾಗಿರುವ ಇಷ್ಟೊಂದು ಅಧಿಕಾರಗಳಿಂದ ಯಾವುದೇ ಲಾಭ ಕಂಡುಬಂದಿಲ್ಲ. ಹೀಗಾಗಿ ಆಸ್ಟ್ರೆಲಿಯಾ ಪ್ರವಾಸದಲ್ಲೂ ಭಾರತ ತಂಡ ಸುಧಾರಿತ ನಿರ್ವಹಣೆ ತೋರದಿದ್ದರೆ ಗಂಭೀರ್ಗೆ ನೀಡಲಾಗಿರುವ ಪ್ರಮುಖ ಅಧಿಕಾರಗಳಿಗೆ ಬಿಸಿಸಿಐ ಕತ್ತರಿ ಪ್ರಯೋಗಿಸುವ ಸಾಧ್ಯತೆ ಇದೆ.
ಪಿಚ್ ಆಯ್ಕೆ ಬಗ್ಗೆ ಪ್ರಶ್ನೆ
ದ್ರಾವಿಡ್ ಕೋಚ್ ಆಗಿದ್ದ ಸಮಯದಲ್ಲಿ ಸಂಪೂರ್ಣ ಸ್ನೇಹಿ ಪಿಚ್ಗಳಿಗೆ ಬದಲಾಗಿ ಸ್ಪರ್ಧಾತ್ಮಕ ಪಿಚ್ಗಳಿಗೆ ಆದ್ಯತೆ ನೀಡಲಾಗಿತ್ತು. ಹೀಗಾಗಿ ಜನವರಿಯಲ್ಲಿ ತವರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿಯ ಎಲ್ಲ ಪಂದ್ಯಗಳು ಕನಿಷ್ಠ 4ನೇ ದಿನದವರೆಗೆ ಸಾಗಿದ್ದವು. ಆದರೆ ಕಿವೀಸ್ ವಿರುದ್ಧ ಸರಣಿಯಲ್ಲಿ ಬೆಂಗಳೂರಿನ ವೇಗದ ಬೌಲಿಂಗ್ ಸ್ನೇಹಿ ಪಿಚ್ನಲ್ಲಿ ಸೋತ ಬೆನ್ನಲ್ಲೇ ಪುಣೆ, ಮುಂಬೈನಲ್ಲಿ ಸಂಪೂರ್ಣ ಸ್ಪಿನ್ ಸ್ನೇಹಿಯಾದ ಪಿಚ್ ಕಡೆಗೆ ಗಂಭೀರ್ ಒಲವು ತೋರಿದ್ದರು. ಭಾರತ ತಂಡದ ಪ್ರಮುಖ ಬ್ಯಾಟರ್ಗಳು ಗುಣಮಟ್ಟದ ಸ್ಪಿನ್ ಎದುರು ಹೊಂದಿರುವ ದೌರ್ಬಲ್ಯದ ನಡುವೆಯೂ ಗಂಭೀರ್ ಈ ನಿರ್ಧಾರ ತೆಗೆದುಕೊಂಡಿದ್ದು ಮುಳುವಾಯಿತು. ಇನ್ನು ಅಂತಿಮ ಟೆಸ್ಟ್ನಲ್ಲಿ ಮೊಹಮದ್ ಸಿರಾಜ್ರನ್ನು ನೈಟ್ ವಾಚ್ಮನ್ ಆಗಿ ಆಡಿಸಿದ್ದು, ಸರ್ಫ್ರಾಜ್ ಖಾನ್ರನ್ನು ಮೊದಲ ಇನಿಂಗ್ಸ್ನಲ್ಲಿ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿಸಿದ ಗಂಭೀರ್ರ ಕಾರ್ಯತಂತ್ರದ ನಿರ್ಧಾರಗಳೂ ಟೀಕೆಗೆ ಗುರಿಯಾಗಿವೆ.
ಗಂಭೀರ್ ತರಬೇತಿಯಲ್ಲಿ ಭಾರತ
*ಶ್ರೀಲಂಕಾ ವಿರುದ್ಧ ಟಿ20 ಸರಣಿಯಲ್ಲಿ 3-0 ಜಯ.
*ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಲ್ಲಿ 0-2 ಸೋಲು.
*ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿಯಲ್ಲಿ 2-0 ಜಯ.
*ಬಾಂಗ್ಲಾದೇಶ ವಿರುದ್ಧ ಟಿ20 ಸರಣಿಯಲ್ಲಿ 3-0 ಜಯ.
*ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ 0-3 ಸೋಲು.