ನವದೆಹಲಿ: ಪ್ರಸಕ್ತ ಆತಿಥೇಯ ಜಪಾನ್ನಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್‌ನ (Asian Para Games) ಮಹಿಳೆಯರ 10 ಮೀಟರ್ ಏರ್ ರೈಫಲ್ (SH1) ವಿಭಾಗದಲ್ಲಿ ಮೋನಾ ಅಗರ್ವಾಲ್ ಪ್ರಥಮ ಸ್ಥಾನ ಗಳಿಸುವ ಮೂಲಕ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ಗೆದ್ದುಕೊಟ್ಟಿದ್ದಾರೆ.
ಮೋನಾ ಅಗರ್ವಾಲ್ ಸ್ವರ್ಣಕ್ಕೆ ಮುತ್ತಿಟ್ಟರೆ, ಹಾಲಿ ಚಾಂಪಿಯನ್ ಅವನಿ ಲೇಖರಾ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಈ ಮೂಲಕ ಭಾರತ ಒಂದೇ ವಿಭಾಗದಲ್ಲಿ ಮೊದಲ ಎರಡು ಅಗ್ರ ಸ್ಥಾನಗಳನ್ನು ತನ್ನದಾಗಿಸಿಕೊಂಡು ಪದಕದ ಖಾತೆ ತೆರೆದಿದೆ.
ಇಬ್ಬರು ಭಾರತೀಯ ಶೂಟರ್‌ಗಳ ನಡುವಿನ ಭರ್ಜರಿ ಸ್ಪರ್ಧೆಯು ರೋಚಕ ಹಂತವನ್ನು ತಲುಪಿತು. ಮೋನಾ ಅವನಿಗಿಂತ ಕೇವಲ 0.4 ಪಾಯಿಂಟ್‌ಗಳ ಮುಂದೆ ಮುಗಿಸಿದರು. ಹಾಲಿ ಪ್ಯಾರಾ ಒಲಿಂಪಿಕ್ ಮತ್ತು ಏಷ್ಯನ್ ಗೇಮ್ಸ್ ಚಾಂಪಿಯನ್ ಆಗಿರುವ ಅವನಿ, ಫೈನಲ್‌ನ ಅರ್ಧದಾರಿಯವರೆಗೆ ಮುನ್ನಡೆ ಕಾಯ್ದುಕೊಂಡಿದ್ದರು. ಆದರೆ, ಎರಡನೇ ಹಂತದ ನಾಲ್ಕನೇ ಸರಣಿಯಲ್ಲಿ ಅವರು 9.7 ಅಂಕಗಳನ್ನು ಗಳಿಸಿದ್ದರಿಂದ, ಮೋನಾ ಮುನ್ನಡೆ ಸಾಧಿಸಿ, ಚಿನ್ನಕ್ಕೆ ಮುತ್ತಿಟ್ಟರು.
ಇಬ್ಬರು ಮಕ್ಕಳ ತಾಯಿಯಾಗಿರುವ ಮೋನಾ, ಒಟ್ಟು 250.0 ಅಂಕಗಳಿಂದ ಏಷ್ಯನ್ ಪ್ಯಾರಾ ಗೇಮ್ಸ್ 2026ರಲ್ಲಿ ಹೊಸ ದಾಖಲೆ ಸೃಷ್ಟಿಸುವ ಮೂಲಕ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಅವರ ನಂತರದಲ್ಲಿ ಎರಡು ಬಾರಿಯ ಪ್ಯಾರಾಲಿಂಪಿಕ್ ಚಾಂಪಿಯನ್ ಆದ ಅವನಿ ಲೇಖರಾ 249.6 ಅಂಕಗಳೊಂದಿಗೆ ಬೆಳ್ಳಿ ಪದಕ ಪಡೆದರು. ಇನ್ನು, ಮೂರನೇ ಸ್ಥಾನವನ್ನು ದಕ್ಷಿಣ ಕೊರಿಯಾದ ಯುನ್ರಿ ಲೀ (227.9) ಅಲಂಕರಿಸಿದ್ದಾರೆ,(ಏಜೆನ್ಸೀಸ್).