ಏಷ್ಯಾಕಪ್​ನಲ್ಲಿ ಭಾರತ-ಪಾಕಿಸ್ತಾನ ಪಂದ್ಯ ನಡೆಯುವುದಿಲ್ಲ: ಮಾಜಿ ಕ್ರಿಕೆಟಿಗನ ಸ್ಫೋಟಕ ಹೇಳಿಕೆ! Asia Cup

Asia Cup
Published on

Asia Cup : ಪ್ರತಿಷ್ಠಿತ ಏಷ್ಯಾ ಕಪ್ (2025) ಸೆಪ್ಟೆಂಬರ್ 9 ರಿಂದ ಯುಎಇಯಲ್ಲಿ ಆರಂಭವಾಗಲಿದೆ. ಬಿಸಿಸಿಐ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಮಂಗಳವಾರ (ಆಗಸ್ಟ್ 19) ಮೆಗಾ ಟೂರ್ನಮೆಂಟ್‌ಗಾಗಿ ಭಾರತೀಯ ತಂಡವನ್ನು ಪ್ರಕಟಿಸಲಿದ್ದಾರೆ. ಸೆಪ್ಟೆಂಬರ್ 10 ರಂದು ತನ್ನ ಮೊದಲ ಪಂದ್ಯದಲ್ಲಿ ಯುಎಇಯನ್ನು ಟೀಮ್ ಇಂಡಿಯಾ ಎದುರಿಸಲಿದೆ. ನಂತರ, ಸೆಪ್ಟೆಂಬರ್ 14 ರಂದು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.

ಆದಾಗ್ಯೂ, ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ ನಂತರದ ಉದ್ವಿಗ್ನತೆಯಿಂದಾಗಿ, ಭಾರತವು ಪಾಕಿಸ್ತಾನದೊಂದಿಗಿನ ಪಂದ್ಯವನ್ನು ಬಹಿಷ್ಕರಿಸಬೇಕೆಂಬ ಬೇಡಿಕೆಗಳಿವೆ. ಅನೇಕ ಭಾರತೀಯರು ಈ ಬಗ್ಗೆ ಧ್ವನಿ ಎತ್ತಿದ್ದಾರೆ. ಮಾಜಿ ಕ್ರಿಕೆಟಿಗರು ಕೂಡ ಧ್ವನಿಗೂಡಿಸಿದ್ದಾರೆ. ಆ ಪಟ್ಟಿಗೆ ಭಾರತದ ಮಾಜಿ ಆಲ್‌ರೌಂಡರ್ ಕೇದಾರ್ ಜಾಧವ್ ಕೂಡ ಸೇರಿದ್ದಾರೆ. ಪ್ರತಿಷ್ಠಿತ ಅಂತರಖಂಡ ಪಂದ್ಯಾವಳಿಯಲ್ಲಿ ಭಾರತ-ಪಾಕಿಸ್ತಾನ ನಡುವೆ ಯಾವುದೇ ಪಂದ್ಯ ಇರುವುದಿಲ್ಲ ಎಂದು ಜಾಧವ್ ತಮ್ಮ ನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ.

ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಭಾರತ ತಂಡ ಬಹಿಷ್ಕರಿಸಬೇಕು. ಭಾರತ ಆಡುವುದಿಲ್ಲ ಎಂದು ನನಗೆ ಖಚಿತವಾಗಿದೆ. ಪಾಕಿಸ್ತಾನ ವಿರುದ್ಧ ಅವರು ಎಲ್ಲೇ ಆಡಿದರೂ ಟೀಮ್ ಇಂಡಿಯಾ ಗೆಲ್ಲುತ್ತದೆ. ಪಾಕಿಸ್ತಾನ ತಂಡಕ್ಕೂ ಇದು ತಿಳಿದಿದೆ. ಆದರೆ ಈ ಪಂದ್ಯ ನಡೆಯಬಾರದು ಎಂದು ಜಾಧವ್ ANI ಸುದ್ದಿ ಸಂಸ್ಥೆಗೆ ತಿಳಿಸಿದರು.

ಇದಕ್ಕೂ ಮೊದಲು, ಲೆಜೆಂಡರಿ ಸ್ಪಿನ್ನರ್ ಹರ್ಭಜನ್ ಸಿಂಗ್, ಪಾಕಿಸ್ತಾನ ವಿರುದ್ಧದ ಪಂದ್ಯಗಳನ್ನು ಬಹಿಷ್ಕರಿಸುವಂತೆ ಬಿಸಿಸಿಐಯನ್ನು ಕೇಳಿಕೊಂಡಿದ್ದಾರೆ. ಇನ್ನು ಇತ್ತೀಚೆಗೆ ನಡೆದ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಟೂರ್ನಮೆಂಟ್‌ನಲ್ಲಿ ಭಾರತೀಯ ಚಾಂಪಿಯನ್‌ಗಳು ಪಾಕಿಸ್ತಾನ ವಿರುದ್ಧ ಆಡಲು ನಿರಾಕರಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಯುವರಾಜ್ ಸಿಂಗ್ ನೇತೃತ್ವದ ಭಾರತ ತಂಡವು ಸೆಮಿಫೈನಲ್ ಪಂದ್ಯಗಳನ್ನು ಹಾಗೂ ಲೀಗ್ ಹಂತದ ಒಂದು ಪಂದ್ಯವನ್ನು ಬಹಿಷ್ಕರಿಸಿತು.

ಆದಾಗ್ಯೂ, ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ಮತ್ತು ಭಾರತ ತಂಡಗಳು ಮುಖಾಮುಖಿಯಾಗುವ ಸಾಧ್ಯತೆಗಳು ಹೆಚ್ಚಿವೆ. WCL ಖಾಸಗಿ ಲೀಗ್ ಆಗಿರುವುದರಿಂದ ಭಾರತ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿತು. ಆದರೆ ಈ ಅಂತರಖಂಡ ಪಂದ್ಯಾವಳಿಯು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಆಶ್ರಯದಲ್ಲಿ ನಡೆಯುವುದರಿಂದ, ಭಾರತವು ಖಂಡಿತವಾಗಿಯೂ ಪಾಕಿಸ್ತಾನವನ್ನು ಎದುರಿಸಲಿದೆ ಎನ್ನಲಾಗುತ್ತಿದೆ. ಟೀಮ್ ಇಂಡಿಯಾ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿದರೆ, ಪ್ರಸಾರಕರು ಭಾರಿ ನಷ್ಟವನ್ನು ಅನುಭವಿಸುತ್ತಾರೆ.

ಭಾರತ ತಂಡ (ಅಂದಾಜು)

ಸೂರ್ಯಕುಮಾರ್ ಯಾದವ್ (ನಾಯಕ), ಶುಭಮಾನ್​ ಗಿಲ್, ಅಕ್ಷರ್ ಪಟೇಲ್, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ತಿಲಕ್ ವರ್ಮಾ, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ ಮತ್ತು ಜಿತೇಶ್ ಶರ್ಮಾ.

ಪಾಕಿಸ್ತಾನ ತಂಡ

ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಫಖರ್ ಜಮಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಹಸನ್ ನವಾಜ್, ಹುಸೇನ್ ತಲಾತ್, ಖುಶ್ದಿಲ್ ಶಾ, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಮೊಹಮ್ಮದ್ ವಸೀಮ್ ಜೂನಿಯರ್, ಸಾಹಿಬ್ಜಾದಾ ಫರ್ಹಾನ್, ಸೈಮ್ ಅಯೂಬ್, ಸಲ್ಮಾನ್ ಮಿರ್ಜಾ, ಶಾಹೀನ್ ಶಾ ಅಫ್ರಿದಿ ಮತ್ತು ಸುಫ್ಯಾನ್ ಮೋಕಿಮ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net